ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಿಡಿಲಿಗೆ ಬಾಲಕ, 3 ಆಕಳು, 35 ಮೇಕೆ ಬಲಿ

Rashmi Kasaragodu
Updated On : 30 Apr 2014, 12:40 pm


ಹೊಸಪೇಟೆ: ಸಿಡಿಲು ಬಡಿದು ಮೇಕೆ ಕಾಯುತ್ತಿದ್ದ ಓರ್ವ ಬಾಲಕ, 34 ಮೇಕೆಬಲಿಯಾಗಿದ್ದು, ಮತ್ತೊಬ್ಬ ಯುವಕನಿಗೆ ತೀವ್ರ ಗಾಯಗಳಾದ ಘಟನೆ ತಾಲೂಕಿನ ತಿಮ್ಮಲಾಪುರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತ ಬಾಲಕ ತಿಮ್ಮಲಾಪುರದ ಹರಿಜನ ನಾಗರಾಜ ಪುತ್ರ ಕೃಷ್ಣಮೂರ್ತಿ (14). ಸುರೇಶ್ (20) ಎಂಬಾತ ಗಾಯಗೊಂಡಿದ್ದಾನೆ. ಇವರಿಬ್ಬರು ಮಂಗಳವಾರ ಮಧ್ಯಾಹ್ನ ಗ್ರಾಮದ ಪಕ್ಕದ ಪೋತಲಕಟ್ಟಿ ರಸ್ತೆ ಬಳಿಯ ಅಡವಿಯಲ್ಲಿ ಮೇಕೆ ಮೇಯಿಸುತ್ತಿದ್ದಾಗ ಗುಡುಗು, ಮಿಂಚು, ಸಿಡಿಲು ಸಹಿತ ಮಳೆ ಆರಂಭವಾಗಿದೆ. ಆಗ ಮೇಕೆಗಳನ್ನು ಮರದ ಕೆಳಗೆ ಕೂಡಿ ಹಾಕಿ ಮರದ ಆಶ್ರಯ ಪಡೆದಿದ್ದಾರೆ. ಆಗ ಬಿದ್ದ ಸಿಡಿಲಿಗೆ ಬಾಲಕ ಮತ್ತು 34 ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಸುರೇಶನ ಕೈಯಲ್ಲಿ ಕಬ್ಬಿಣದ ಕೊಡಲಿ ಇದ್ದ ಕಾರಣ, ಸಿಡಿಲಿನ ಆಘಾತ ಅಷ್ಟಾಗಿ ಆಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸುರೇಶ್ನನ್ನು ಚಿಕಿತ್ಸೆಗಾಗಿ ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. 34 ಮೇಕೆಗಳು ಸಾವನ್ನಪ್ಪಿ ರು. 1.50 ಲಕ್ಷ ನಷ್ಟ ಉಂಟಾಗಿದೆ ಎಂದು ಮರಿಯಮ್ಮನಹಳ್ಳಿ ಪೊಲೀಸರು ತಿಳಿಸಿದರು.
3 ಆಕಳು, ಮೇಕೆ ಸಾವು: ಸಿಡಿಲು ಬಡಿದು ಅಗಸರ ಹನುಮಂತಪ್ಪಗೆ ಸೇರಿದ 3 ಆಕಳು, 1 ಮೇಕೆ ಬಲಿಯಾದ ಘಟನೆ ತಾಲೂಕಿನ ಗರಗದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಹಿರೇಹಳ್ಳ ಅಡವಿಯಲ್ಲಿ ಮೇಯುತ್ತಿದ್ದ ದನಗಳು ಸಿಡಿಲಿಗೆ ಸಾವನ್ನಪ್ಪಿವೆ ಎಂದು ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸಿಡಿಲಿಗೆ ಎರಡು ಎತ್ತು ಬಲಿ: ಸಂಡೂರು ತಾಲೂಕಿನ ಬಂಡ್ರಿ ಗ್ರಾಪಂ ವ್ಯಾಪ್ತಿಯ ಹಳೇ ಜೋಗಿಕಲ್ದಲ್ಲಿ ಮಂಗಳವಾರ 3.30ರ ಸುಮಾರಿಗೆ ಸಿಡಿಲು ಬಡಿದು 2 ಎತ್ತುಗಳು ಸಾವಿಗೀಡಾಗಿವೆ. ಗ್ರಾಮದ ನಿಂಗಜ್ಜನವರ ಹನುಮಂತಪ್ಪ ಅವರಿಗೆ ಸೇರಿದ ಎತ್ತುಗಳ ಬೆಲೆ ರು. 80 ಸಾವಿರ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಅಂದಾಜಿಸಿ ತಾಲೂಕಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement