ಹನಸಿ ಭಾಗದಲ್ಲಿ ಹದವಾದ ಮಳೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಹನಸಿ, ಬೆಣಕಲ್ಲು ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು- ಸಿಡಿಲು, ಬಿರುಗಾಳಿ ಸಹಿತ ಹದವಾದ ಮಳೆ ಸುರಿದಿದ್ದು, ಮಳೆಯಿಂದಾಗಿ ಬೆಣಕಲ್ಲು ಗ್ರಾಮದ 10 ಮನೆಗಳ ತಗಡು, ಎಂಚುಗಳು ಹಾರಿ ಹೋಗಿವೆ. ಇತ್ತ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಇತರೆ ಗ್ರಾಮಗಳಲ್ಲೂ ಹನಿ, ಹನಿ ಮಳೆ ಸುರಿಯಿತು.
ಮಧ್ಯಾಹ್ನದಿಂದಲೇ ಬಿರುಗಾಳಿ ಬೀಸಲಾರಂಭಿಸಿತು. ನಂತರ ಗುಡುಗು-ಸಿಡಿಲಿನ ಆರ್ಭಟ. ಆದರೆ, ಅನಾಹುತಗಳಾದ ವರದಿಯಾಗಿಲ್ಲ ಎಂದು ಕಂದಾಯ ಇಲಾಖೆ ತಿಳಿಸಿದೆ.
ಅರ್ಧ ಗಂಟೆಗೂ ಅಧಿಕ ಕಾಲ ಸುರಿದ ಮಳೆ ಹನಸಿ ಭಾಗದಲ್ಲಿ ಬಿತ್ತನೆಗೆ ಭೂಮಿಯನ್ನು ಹದಗೊಳಿಸಲು ರೈತರಿಗೆ ಸಹಕಾರಿಯಾಗಿದೆ. ಈ ಹಿಂದೆಯೂ ಹಲವು ಸಲ ಮಳೆಬಿದ್ದಿತ್ತು.
ಆದರೆ, ಮಂಗಳವಾರದ ಮಳೆ ಹೊಲಗಳನ್ನು ಮಾಗಿ ಮಾಡಿಕೊಳ್ಳಲು ಸಹಕಾರಿಯಾಗಿದ್ದು, ಬುಧವಾರದಿಂದಲೇ ರೈತರು ಹೊಲಗಳತ್ತ ಮುಖ ಮಾಡಿ ಮಾಗಿ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಈ ಋತುವಿನಲ್ಲಿಯೇ ಈ ಮಳೆ ಹದವಾದ ಮಳೆ ಎನ್ನುತ್ತಾರೆ ಹನಸಿ ಎಪಿಎಂಸಿ ಕ್ಷೇತ್ರದ ಸದಸ್ಯ ಶಿವಕುಮಾರಗೌಡ.
ಈ ನಡುವೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಂಜಾನೆಯಿಂದಲೇ ಬಿಸಿಲಿನ ತಾಪಮಾನ ಗರಿಷ್ಠ ಪ್ರಮಾಣದಲ್ಲಿತ್ತು. ಮಧ್ಯಾಹ್ನ ಎರಡು ಗಂಟೆ ವೇಳೆಗಂತೂ ತಾಳಲಾರದಷ್ಟು ಸೆಕೆಯಿತ್ತು. ನಂತರ ಮೋಡಕವಿಯುತ್ತಿದ್ದಂತೆಯೇ ವಾತಾವರಣದಲ್ಲಿ ತಂಪು ಅವರಿಸಿತು. ಸಂಜೆ ಐದು ಗಂಟೆವರೆಗೂ ಮೋಡಕವಿದ ವಾತಾವರಣ ಮುಂದುವರಿದಿತ್ತು.