ನೀರಿಗಾಗಿ ಗುಂಡ್ಲುವದ್ದಿಗೇರಿ ಗ್ರಾಮಸ್ಥರ ನಿತ್ಯ ಪರದಾಟ
ಹೊಸಪೇಟೆ: ತಾಲೂಕಿನ ಗುಂಡ್ಲುವದ್ದಿಗೇರಿ ಗ್ರಾಮದಲ್ಲಿ ಅನೇಕ ದಿನಗಳಿಂದಲೂ ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿದ್ದು, ನೀರನ್ನು ತರಲು ಕಿ.ಮೀ. ದೂರ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವವಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದಲ್ಲಿ ಕೊಳವೆ ಬಾವಿಗಳಿದ್ದರೂ ನಿಲ್ಲದ ವಿದ್ಯುತ್ನಿಂದ ಸಮರ್ಪಕ ನೀರು ಲಭ್ಯವಾಗುತ್ತಿಲ್ಲ. ಪದೇ ಪದೇ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಆಗುತ್ತಿಲ್ಲ. ಮಕ್ಕಳಿಂದ ಹಿಡುದು ಮಹಿಳೆಯರು, ವಯೋವೃದ್ದರೂ, ಸುಡು ಬಿಸಿಲಿನಲ್ಲಿ ಬಹು ದೂರ ಹೋಗಿ ಕುಡಿಯಲು ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಹೊರಗಿನ ರಾಜ್ಯ ಹೆದ್ದಾರಿ(47)ಯಲ್ಲಿ ಇರುವ ಸಿಹಿ ನೀರಿನ ಪೈಪ್ನಿಂದ ನೀರು ತರಬೇಕಾಗಿದೆ. ರಸ್ತೆಯಲ್ಲಿ ಸಂಚರಿಸುವ ಭಾರಿ ವಾಹನಗಳ ಓಡಾಟ ಗ್ರಾಮಸ್ಥರಿಗೆ ಕಂಟಕಪ್ರಾಯವಾಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಬವಣೆಗೆ ಬಸವಳಿದ ಗ್ರಾಮಸ್ಥರು, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ರಾಜ್ಯ ಹೆದ್ದಾರಿ(47) ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.