ಬೆಂಕಿ ಆಕಸ್ಮಿಕ: ಎತ್ತು ಸಾವು, ಮನೆ ಭಸ್ಮ
ಕೂಡ್ಲಿಗಿ: ತಾಲೂಕಿನ ಕುರಿಹಟ್ಟಿ ಗ್ರಾಮದಲ್ಲಿ ಎರಡು ಕಣಗಳಿಗೆ ಬುಧವಾರ ಆಕಸ್ಮಿಕ ಬೆಂಕಿ ಅನಾಹುತದಿಂದಾಗಿ ಕಣದಲ್ಲಿದ್ದ ಒಂದು ಎತ್ತು ಅಸುನೀಗಿದ್ದು, ಇನ್ನೊಂದು ಎತ್ತು ತೀವ್ರ ಗಾಯಗೊಂಡಿದೆ. ಪಕ್ಕದ ಕಣಗಳಲ್ಲಿದ್ದ ನಾಲ್ಕು ಮೇವಿನ ಬಣವೆಗಳು, ಗುಡಿಸಿಲು ಸುಟ್ಟು ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಕುರಿಹಟ್ಟಿ ಗ್ರಾಮದ ಪೂಜಾರಿ ಬೋಮ್ಮಯ್ಯನಿಗೆ ಸೇರಿದ ಎತ್ತುಗಳನ್ನು ತನ್ನ ಕಣದಲ್ಲಿ ಕಟ್ಟಿದ ಆನಂತರ ಬೆಂಕಿ ಅನಾಹುತದ ಘಟನೆ ಜರುಗಿದೆ. ಬೆಂಕಿಯ ಕೆನ್ನಾಲಿಗೆ ಬಳಿಕ ಪಕ್ಕದ ಕಣದಲ್ಲಿದ್ದ ಪೂಜಾರಿ ನಿಂಗಮ್ಮ, ಅಕ್ಕಮ್ಮ, ನಿಂಗಯ್ಯ, ಸಣ್ಣೋಬಯ್ಯನವರ ಕಣಗಳನ್ನು ಆವರಿಸಿದೆ. ಅಲ್ಲಿದ್ದ ಅಪಾರ ಮೇವಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಕೂಡ್ಲಿಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ತಾಲೂಕಿನ ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೋಲ್ಡ್ಗೋಲ್ಡ್ ಕದ್ದು ಮಂಕಾದರು!
ಬಳ್ಳಾರಿ: ಕಳ್ಳತನ ಮಾಡಲು ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ, ರೋಲ್ಡ್ಗೋಲ್ಡ್ ಕದ್ದು ಮಂಕರಾದ ಘಟನೆ ಬುಧವಾರ ಬೆಳಗಿನ ಜಾವ ನಗರದಲ್ಲಿ ನಡೆದಿದೆ. ಕಳ್ಳರು ಇಲ್ಲಿನ ರಾಮೇಶ್ವರ ನಗರದ ವೆಂಕಟೇಶ್ವರ ದೇವಸ್ಥಾನಕ್ಕೆ ಕದಿಯಲು ಹೋದ ಕಳ್ಳರು ದೇವಸ್ಥಾನದಲ್ಲಿ ಪದ್ಮಾವತಿ, ಲಕ್ಷ್ಮೀ ಕೊರಳಲ್ಲಿದ್ದ ಬಂಗಾರದ ಸರವೆಂದು ಕದ್ದಿದ್ದಾರೆ. ರೋಲ್ಡ್ಗೋಲ್ಡ್ ಆಗಿತ್ತು. ದೇವಸ್ಥಾನದಲ್ಲಿ ಬಂಗಾರದ ಆಭರಣಗಳು ಕಳ್ಳತನವಾಗಿಲ್ಲ. ದೇವಸ್ಥಾನವು ಬಳ್ಳಾರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿದೆ. ದೂರು ದಾಖಲಾಗಿಲ್ಲ.
ಆಕಸ್ಮಿಕ ಬೆಂಕಿ: ಗುತ್ತಿಗೆದಾರ ಮೇಲೆ ದೂರು
ಬಳ್ಳಾರಿ: ಎಸ್ಪಿ ಕಚೇರಿಯಲ್ಲಿರುವ ಎಎಸ್ಪಿ ಚೇಂಬರ್ ಮತ್ತು ಚೇಂಬರ್ನಲ್ಲಿರುವ ವಸ್ತುಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸುಟ್ಟುಹೋಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಟ್ಟಡದ ಗುತ್ತಿಗೆದಾರ ನಾರಾಯಣ ಮೇಲೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಟ್ಟಡ ನಿರ್ಮಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಸರಿಯಾಗಿ ಯೋಜನಾಬದ್ಧವಾಗಿ ಕಟ್ಟಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ಎಎಸ್ಪಿ ಚೇಂಬರ್ನಲ್ಲಿರುವ ಟಿವಿ, ಎಸಿ, ಸೋಪಾ ಸೆಟ್ ಸೇರಿದಂತೆ ರು. 5 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಡಿಎಆರ್ ಡಿಎಸ್ಪಿ ಎಸ್. ಯಾದವ್ ದೂರು ನೀಡಿದ್ದಾರೆ. ಗುತ್ತಿಗೆದಾರ ನಾರಾಯಣ ಮೇಲೆ ಐಪಿಸಿ ಸೆಕ್ಷನ್ 290ರಡಿ ಉಪದ್ರವ, ಸೆಕ್ಷನ್ 418 ಒಪ್ಪಂದಗಳ ನಿಯಮಗಳ ಪಾಲನೆ ಮಾಡದಿರುವುದು, ಸೆಕ್ಷನ್ 406 ನಂಬಿಕೆ ದ್ರೋಹ ಪ್ರಕರಣ ದಾಖಲಾಗಿದೆ. ಗಾಂಧಿನಗರ ಇನ್ಸ್ಪೆಕ್ಟರ್ ರವಿಕುಮಾರ್ ದೂರು ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಸಿಡಿಲಿಗೆ ಯುವಕ ಬಲಿ
ಬಳ್ಳಾರಿ: ಹೊಲದಿಂದ ಮನೆಗೆ ಬರುತ್ತಿದ್ದ ಯುವಕನೊಬ್ಬನಿಗೆ ಸಿಡಿಲು ಬಡಿದು ಮೃತಪಟ್ಟ ಘಟನೆ ತಾಲೂಕಿನ ಕರ್ಚೇಡು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತನನ್ನು ಮಂಜುನಾಥ್ (20) ಎಂದು ಗುರುತಿಸಲಾಗಿದೆ. ಈತ ಮಂಗಳವಾರ ಹೊಲದಿಂದ ಮನೆಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಮಾಹಿತಿಯ ಆಧಾರದಡಿ ಮೋಕಾ ಪೊಲೀಸರು ಕರ್ಚೇಡ್ ಗ್ರಾಮಕ್ಕೆ ಹೋದಾಗ, ಮಂಜುನಾಥ್ನ ತಂದೆ ರಾಮಣ್ಣನಿಗೆ ಕೇಸು ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಅಮಾವಾಸ್ಯೆ ಇದ್ದರಿಂದ ಪ್ರಕರಣ ದಾಖಲಿಸಲು ಮುಂದಾಗಿಲ್ಲ ಎನ್ನಲಾಗುತ್ತಿದೆ.
ರು. 15 ಲಕ್ಷ ದೋಚಿ ಪರಾರಿ
ಬಳ್ಳಾರಿ: ಯುವಕರಿಬ್ಬರು ಎಸ್ಬಿಎಂ ಬ್ಯಾಂಕಿನಿಂದ ರು. 15 ಲಕ್ಷ ಡ್ರಾ ಮಾಡಿಕೊಂಡು ಬೈಕ್ನಲ್ಲಿ ತೆರಳುತ್ತಿದ್ದಾಗ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಹಣ ಕಿತ್ತುಕೊಂಡು ಪರಾರಿಯಾದ ಘಟನೆ ನಗರದ ಜಿಲ್ಲಾ ಕ್ರೀಡಾಂಗಣ ಸಮೀಪದ ಸರ್ಕಾರಿ ಗಾರ್ಮೆಂಟ್ ತರಬೇತಿ ಶಾಲೆ ಹತ್ತಿರ ಬುಧವಾರ ಮಧ್ಯಾಹ್ನ ನಡೆದಿದೆ. ಬಳ್ಳಾರಿಯ ಜೀನತ್ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮಹ್ಮದ್ ಗೌಸ್, ನವೀನ್ ಅವರು ರು. 15 ಲಕ್ಷದ 4 ಚೆಕ್ಗಳನ್ನು ಎಸ್ಬಿಎಂ ಬ್ಯಾಂಕಿನ ಮುಖ್ಯ ಶಾಖೆಗೆ ಹೋಗಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ಕೌಲ್ ಬಜಾರ್ನ ದೋಬಿ ಸ್ಟ್ರೀಟ್ನಲ್ಲಿರುವ ಜೀನತ್ ಕಚೇರಿಗೆ ಹಿಂತಿರುಗುತ್ತಿದ್ದಾಗ ಸರ್ಕಾರಿ ಗಾರ್ಮೆಂಟ್ಸ್ ತರಬೇತಿ ಶಾಲೆ ಹತ್ತಿರ ಹೆಲ್ಮೆಟ್ ಹಾಕಿಕೊಂಡ ಬೈಕ್ ಸವಾರರಿಬ್ಬರು ಹಿಂದಿನಿಂದ ಬಂದು ಹಣದ ಚೀಲ ಕಸಿದುಕೊಂಡು ಬೈಕ್ ಒದ್ದು ಪರಾರಿಯಾಗಿದ್ದಾರೆ. ಕೌಲ್ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚು ಮಾತ್ರೆ ಸೇವಿಸಿ ಸಾವು
ಬಳ್ಳಾರಿ: ಪಿಟ್ಸ್ ರೋಗಕ್ಕೆ ಹೆಚ್ಚಿನ ಮಾತ್ರೆಗಳನ್ನು ಸೇವಿಸಿ ಯುವತಿಯೊಬ್ಬಳು ಮೃತಪಟ್ಟ ಘಟನೆ ಇಲ್ಲಿನ ರೆಡ್ಡಿ ಸ್ಟ್ರೀಟ್ನಲ್ಲಿ ನಡೆದಿದೆ. ರಾಖಿ ಶರ್ಮಾ (17) ಮೃತ ಯುವತಿ. 10 ವರ್ಷಗಳಿಂದ ಪಿಟ್ಸ್ ರೋಗದಿಂದ ಬಳಲುತ್ತಿದ್ದ ರಾಖಿ ನಿತ್ಯವೂ ಮಾತ್ರೆಗಳನ್ನು ಸೇವಿಸುತ್ತಿದ್ದಳು. ಆದರೆ, ಏ. 28ರಂದು ಅಚಾನಕ್ ಆಗಿ ಗೊತ್ತಿಲ್ಲದೆ ಹೆಚ್ಚು ಮಾತ್ರೆಗಳನ್ನು ಸೇವಿಸಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸಿದೆ ಗುರುವಾರ ಮೃತಪಟ್ಟಿದ್ದಾಳೆ. ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಿಕೆಗೆ ಎಲ್ಲರೂ ಸಮಾನರು
ಬಳ್ಳಾರಿ: ಸಮಾಜದಲ್ಲಿನ ಎಲ್ಲ ವರ್ಗದ ಮಕ್ಕಳಿಗೂ ಉಚಿತ ವೃತ್ತಿ ಶಿಕ್ಷಣ ತರಬೇತಿ ನೀಡುವ ಮೂಲಕ ಮಕ್ಕಳಲ್ಲಿ ಉತ್ತಮ ಬಾಂಧವ್ಯ ಬೆಳೆಸಲು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್. ರಾಜಪ್ಪ ಹಾಳಿದರು. ಅವರು ಸ್ಥಳೀಯ ಬ್ರಾಹ್ಮಣ ಸಂಘರ್ಷ ಸಮಿತಿ ನಗರದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಆ್ಯಂಡ್ ಕಾಲೇಜಿನಲ್ಲಿ 15 ದಿನಗಳ ಕಾಲ ಹಮ್ಮಿಕೊಂಡಿದ್ದ ಸಿಇಟಿ ಉಚಿತ ತರಬೇತಿ ಶಿಬಿರದಲ್ಲಿ ಶನಿವಾರ ಮಾತನಾಡಿದರು. ಜಾತಿ, ಭೇದವಿಲ್ಲದೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ. ಪ್ರಸ್ತುತ ಹಲವೆಡೆ ಆಯಾ ಸಮುದಾಯಗಳಿಗೆ ಸೀಮಿತವಾದ ಕೆಲವು ತರಬೇತಿ, ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಬ್ರಾಹ್ಮಣ ಸಮಾಜ ತಾರತಮ್ಯವಿಲ್ಲದೆ ಸಿಇಟಿ ಉಚಿತ ತರಬೇತಿ ನೀಡಿರುವುದು ಎಲ್ಲ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಂತಸ ಎಂದರು. ಈ ವೇಳೆ 15 ದಿನಗಳ ಕಾಲ ಸಿಇಟಿ ಉಚಿತ ತರಬೇತಿ ಹಾಗೂ ಇಂಗ್ಲಿಷ್ ವ್ಯಾಕರಣ ಕಲಿಸಿದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ತರಬೇತಿ ಮುಖ್ಯಸ್ಥ ಹರಿಕುಮಾರ್, ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ್, ಟಿಇಎಚ್ ಚೇರ್ಮನ್ ಡಾ. ಮಹಿಪಾಲ್, ಬಿಐಟಿಎಂ ಕಾಲೇಜು ಪ್ರಾಚಾರ್ಯ ಫೃಥ್ವಿರಾಜ್ ಭೂಪಾಲ್, ಬಿಪಿಎಸ್ಸಿ ಕಾಲೇಜು ಆಡಳಿತ ಮಂಡಳಿ ಸದಸ್ಯ ವಿಕ್ರಮ್ ಮಹಿಪಾಲ್, ಪ್ರಾಚಾರ್ಯ ಹರಿಕುಮಾರ್, ಸಂಘರ್ಷ ಸಮಿತಿ ಗೌರವಾಧ್ಯಕ್ಷ ಡಾ.ಬಿ.ಕೆ. ಶ್ರೀನಿವಾಸ್ ಮೂರ್ತಿ, ಸದಸ್ಯ ನಾಗರಾಜ್, ವೇಣುಗೋಪಾಲ್, ಲೋಕನಾಥ್, ನೇಮಕಲ್ ರಾವ್(ಕಲ್ಲಿ), ಗುರುರಾಜ್, ಕರಾಟೆ ಮಾಸ್ಟರ್ ವಿಜಯ್ ವಿಠಲ್, ಪ್ರಹ್ಲಾದ್ ಇತರರಿದ್ದರು. ಜನತಾ ಗುರುರಾಜ್, ವಸುದೇಂದ್ರ, ಲಕ್ಷ್ಮೀಪವನ್ ಕುಮಾರ್, ಹರಿಣಿ ನಿರ್ವಹಿಸಿದರು.
ಪ್ರತಿಭೆ ಹೊರತರಲು ಶಿಬಿರ ಸಹಾಯಕ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 30
ಸ್ಲಂ ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಅವಕಾಶ ಸಿಗಲು ಬೇಸಿಗೆ ಶಿಬಿರಗಳು ಸಹಾಯಕ ಎಂದು ಸ್ಥಳೀಯ ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸ ರಾವ್ ಹೇಳಿದರು.
ನಗರದ ಚಿತ್ತವಾಡ್ಗಿ ಆದರ್ಶ ವಿದ್ಯಾಲಯದ ಆವರಣದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಮತ್ತು ಸಮಾನ ಮಕ್ಕಳ ಮಂಟಪ ಹಮ್ಮಿಕೊಂಡಿದ್ದ ಸ್ಲಂ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ ಮಾತನಾಡಿ, ನಾಲ್ಕು ವರ್ಷದಿಂದ ಮಕ್ಕಳ ಬೇಸಿಗೆ ಶಿಬಿರ ನಡೆಸುತ್ತಿದ್ದು, ಸ್ಲಂ ಮಕ್ಕಳಲ್ಲಿರುವ ಪ್ರತಿಭೆ ಹೊರ ತೆರಲು ಬೇಸಿಗೆ ಶಿಬಿರ ಅನುಕೂಲವಾಗಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರ ಹಾಕಲು ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಗಳಾಗಿವೆ. ಈ ವೇದಿಕೆಗಳಲ್ಲಿ ಹೊರ ಬಂದ ಪ್ರತಿಭಾವಂತರು ಮುಂದೆ ತಮ್ಮ ಕಲೆಯನ್ನು ಮತಷ್ಟು ಹೆಚ್ಚಿಸಿಕೊಂಡು ಪ್ರತಿಭಾವಂತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲಿ ಎಂದು ಹೇಳಿದರು.
ಸಮಾನ ಮಕ್ಕಳ ಮಂಟಪದ ಸಂಚಾಲಕ ವೆಂಕಟೇಶಲು, ಎನ್. ಹುಲಿಗೆಮ್ಮ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಬಸವ ಜ್ಯೋತಿ ಸ್ವಾಗತ ತಂಡಕ್ಕೆ ಬೀಳ್ಕೊಡುಗೆ
ಬಳ್ಳಾರಿ: ಜಿಲ್ಲಾ ವೀರಶೈವ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ದರೂರು ಶಾಂತನಗೌಡ ನೇತೃತ್ವದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಬಸವ ಜ್ಯೋತಿಯನ್ನು ನಗರಕ್ಕೆ ತರಲು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮಕ್ಕೆ ಬುಧವಾರ ತೆರಳಿದರು. ಸಂಘಟನೆ ಸದಸ್ಯರ ತಂಡಕ್ಕೆ ನಗರದ ರಾಷ್ಟ್ರೀಯ ಬಸವದಳದ ಬಸವಮಂಟಪದಲ್ಲಿ ಬುಧವಾರ ಬೀಳ್ಕೊಡಲಾಯಿತು. ಕೆ.ವಿ. ರವಿಶಂಕರ್, ಎಚ್.ಕೆ. ಗೌರಿಶಂಕರ್, ಕೋಳೂರು ಜಿತೇಂದ್ರಗೌಡ, ಕೆ.ಎಂ. ರವಿಶಂಕರ್, ನಿಷ್ಠಿರುದ್ರಪ್ಪ, ಕುಂದಾಪುರ ನಾಗರಾಜ, ಎಸ್.ಎಂ. ಭೀಮಲಿಂಗಸ್ವಾಮಿ, ಎಸ್. ಮಂಜುನಾಥಗೌಡ, ಎಂ. ಲೋಕನಾಥರೆಡ್ಡಿ, ಎಸ್. ರಾಜಶೇಖರಗೌಡ, ದರೂರು ವೀರೇಶ್ ಗೌಡ, ಗುಂಡಿ ವೀರೇಶ್ ಗೌಡ, ಪ್ರತಾಪ್ ಗೌಡ, ಜೀರ್ರ ಗುರುಮೂರ್ತಿ ಇದ್ದರು.