ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಿ

Vishwanath S
Updated On : 1 May 2014, 11:26 am

ಹೂವಿನಹಡಗಲಿ: ವಿದ್ಯಾರ್ಥಿಗಳು ಕಾನೂನು ಶಿಬಿರದಲ್ಲಿ ಭಾಗವಹಿಸುವುದಲ್ಲದೆ, ತಮ್ಮ ನೆರೆ-ಹೊರೆಯವರಿಗೆ ಕಾನೂನಿನ ಅರಿವು ಮೂಡಿಸಬೇಕು. ಕಾನೂನು ಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಗೊಳ್ಳುವುದು ಎಂದು ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆಹನುಮಂತಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಜೆಎಸ್‌ಎಸ್ ಶಿಕ್ಷಣ ಮಹಾ ವಿದ್ಯಾಲಯ ಸಹಯೋಗದಲ್ಲಿ ಬಿಇಡಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎಂಬುದು ಸಂವಿಧಾನದ ಆಶಯವಾಗಿದೆ ಎಂದರು.
ರಾಷ್ಟ್ರ ಕಾನೂನು ಸೇವೆ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅಧೀನ ಸಂಸ್ಥೆಗಳಾದ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ನುರಿತ ನ್ಯಾಯಾಧೀಶರು ಮತ್ತು ವಕೀಲರಿಂದ ರಾಜ್ಯದ ಮೂಲೆ ಮೂಲೆಗಳಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ. ವಿದ್ಯಾರ್ಥಿ ಯುವಕರು ಕಾನೂನಿನ ಅರಿವು ಪಡೆದು ನೆರೆ-ಹೊರೆಯವರಿಗೆ ಅರಿವು ಮೂಡಿದಾಗ ಮಾತ್ರ ಇದಕ್ಕೆ ಪೂರ್ಣ ಪ್ರಮಾಣದ ಫಲ ಸಿಗುತ್ತದೆ ಎಂದರು.
ತಹಸೀಲ್ದಾರ್ ವಿಶ್ವಜಿತ್ ಮೆಹತಾ ಮಾತನಾಡಿ, ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ ನೇಮಕಾತಿ ಮೀಸಲಾತಿ ಅನುಚ್ಛೇದ 371 (ಜೆ) ಅಡಿಯಲ್ಲಿ ತಹಸೀಲ್ದಾರ್ ಕಚೇರಿಯಿಂದ ದೊರೆಯುವ ಪ್ರಮಾಣಪತ್ರಗಳು, ಆಯುಕ್ತರು ನೀಡುವ ಪ್ರಮಾಣಪತ್ರಗಳ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಎಂ. ಬಸವಲಿಂಗ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು, ಮಹಿಳೆಯರು, ಕಟ್ಟಡ ಕಾರ್ಮಿಕರು ಪ್ರಸ್ತುತ ಚಾಲ್ತಿಯಲ್ಲಿರುವ ದಿನನಿತ್ಯದ ಕಾನೂನುಗಳಾದ ಜನನ, ಮರಣ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಹೈಕ ಮೀಸಲಾತಿ ಅವುಗಳ ಸದುಪಯೋಗ ಪಡೆಯಬೇಕು ಎಂದರು.
ವಕೀಲರಾದ ಸೊಪ್ಪಿನ ಸುರೇಶ, ಜನನ ಮತ್ತು ಮರಣ ನೋಂದಣಿ ಅಧಿನಿಯಮ, ಬಿ.ಎಚ್. ವೀರನಗೌಡ, ಶಿಕ್ಷಣ ಹಕ್ಕು ಕಾಯ್ದೆ, ಎಸ್. ಬಸವರಾಜ, ಮಾಹಿತಿ ಹಕ್ಕು ಅಧಿನಿಯಮ, ಎಂ.ಎನ್. ಮಂಜುನಾಥ ವಿವಾಹ ವಿಚ್ಛೇದನ, ಜೀವನಾಂಶ ಬಗ್ಗೆ ಉಪನ್ಯಾಸ ನೀಡಿದರು. ವಕೀಲರ ಸಂಘದ ಕಾರ್ಯದರ್ಶಿ ಎಂ. ಗಂಗಾಧರ, ಸಿದ್ದನಗೌಡ, ಅಟವಾಳಗಿ ಕೊಟ್ರೇಶ, ಎ. ರುದ್ರಪ್ಪ, ಕೆ. ಸೈಪುಲಾ, ಕೆ. ಭಾಸ್ಕರ, ಗುರುರಾಜ, ಕಾಲೇಜು ಪ್ರಾಚಾರ್ಯ ಡಾ. ರಮೇಶ ಇದ್ದರು. ಎ. ಅನಿತಾ, ರೂಪಾಶ್ರೀ ಪ್ರಾರ್ಥಿಸಿದರು. ಎಚ್.ಎಂ. ಶ್ರೀದೇವಿ ಸ್ವಾಗತಿಸಿದರು. ಹುಲುಗಪ್ಪ ನಿರೂಪಿಸಿದರು. ವಿಜಯಲಕ್ಷ್ಮಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement