ಸಿಡಿಲಿಗೆ ಬಾಲಕ ಬಲಿ: ಭೀಮಾ ನಾಯ್ಕ ನೆರವು
ಹೊಸಪೇಟೆ: ತಾಲೂಕಿನ ತಿಮ್ಮಲಾಪುರದಲ್ಲಿ ಮಂಗಳವಾರ ಸಿಡಿಲಿಗೆ ಬಲಿಯಾದ ಬಾಲಕ ಕೃಷ್ಣಮೂರ್ತಿ ಮನೆಗೆ ಬುಧವಾರ ಭೇಟಿ ನೀಡಿದ ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾ ನಾಯ್ಕ ವೈಯಕ್ತವಾಗಿ ಸಹಾಯಧನ ನೀಡಿ, ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು.
ತಾಲೂಕಿನಲ್ಲಿ ಮಳೆ, ಸಿಡಿಲಿನಿಂದ ಜನ, ಜಾನುವಾರು ಸಾವು, ಮನೆ, ಬಣವೆ, ಬೆಳೆಹಾನಿ, ಇನ್ನಿತರೆ ನಷ್ಟದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಹಾನಿಗೊಳಗಾದವರಿಗೆ ಸರ್ಕಾರದಿಂದ ನೆರವು, ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಮರಿಯಮ್ಮನಹಳ್ಳಿ ಉಪ ತಹಸೀಲ್ದಾರ್ ಯು. ನಾಗರಾಜ್ ಮಾತನಾಡಿ, ಪ್ರಕೃತಿ ವಿಕೋಪ ಪರಿಹಾರ ನಿಧಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ, ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಮಾತನಾಡಿ, ಸಿಡಿಲಿಗೆ ಬಲಿಯಾದ ಏಳನೇ ತರಗಿತ ವಿದ್ಯಾರ್ಥಿ ಕೃಷ್ಣಮೂರ್ತಿ ಕುಟುಂಬಕ್ಕೆ ಶಿಕ್ಷಣ ಇಲಾಖೆಯಿಂದ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸಹಾಯಧನವನ್ನು ಒದಗಿಸುವುದಾಗಿ ಹೇಳಿದರು.
ತಾಲೂಕು ಪಶು ವೈದ್ಯಾಧಿಕಾರಿ ಡಾ. ಬಸವರಾಜ್ ಬೆಣ್ಣೆ ಮಾತನಾಡಿ, ಸಿಡಿಲಿಗೆ ಬಲಿಯಾದ ಮೇಕೆಗಳಿಗೆ ಪಶು ಸಂಗೋಪನೆ ಇಲಾಖೆಯಿಂದ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಒಂದು ಮೇಕೆಗೆ ರು. 25 ಸಾವಿರದಂತೆ ಪರಿಹಾರ ನೀಡಲಾಗುವುದು. ಮೇಕೆ ವಯಸ್ಸು, ಗರ್ಭದ ಆಧಾರದಡಿ, ಹೆಣ್ಣೋ ಅಥವಾ ಗಂಡೋ ಮುಂತಾದ ಅಂಶಗಳನ್ನು ಆಧರಿಸಿ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯ ಮುಖಂಡ ಕೆ. ಶಿವಮೂರ್ತಿ, ಕಂದಾಯ ಇಲಾಖೆ ಅಧಿಕಾರಿ ಆರ್.ಐ. ನಾಗರಾಜ್, ತಿಮ್ಮಲಾಪುರ ಮತ್ತು ಚಿಲಕನಹಟ್ಟಿ ಗ್ರಾಮಲೆಕ್ಕಿಗ ಮಹೇಶ್, ಮರಿಯಮ್ಮನಹಳ್ಳಿ ಗ್ರಾಮಲೆಕ್ಕಿಗ ಬಿ. ಕೊಟ್ರೇಶ್, ಚಿಲಕನಹಟ್ಟಿ ಪಶು ವೈದ್ಯಾಧಿಕಾರಿ ಪ್ರಕಾಶ್, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಇದ್ದರು.
ಇದೇ ಸಂದರ್ಭದಲ್ಲಿ ಮೃತ ಬಾಲಕನ ಕುಟುಂಬಕ್ಕೆ ಗ್ರಾಪಂದಿಂದ ಧನಸಹಾಯ ನೀಡಲಾಯಿತು.