ಅಕ್ರಮ ಮರಳು ಗಣಿಗೆ ಕಡಿವಾಣ ಹಾಕಿ
ಬಳ್ಳಾರಿ: ತಾಲೂಕಿನ ಅಸುಂಡಿ- ವೈ. ಕಗ್ಗಲ್ ಮಧ್ಯೆ ಸ್ವಾಮಿ ಕನಸ್ಟ್ರಕ್ಷನ್ ಅವರು ನಿಯಮಗಳನ್ನು ಗಾಳಿಗೆ ತೂರಿ ಮರಳು ಗಣಿಗಾರಿಕೆ ನಡೆಸುತ್ತಿದ್ದು, ಕೂಡಲೇ ಅವರ ಪರವಾನಗಿ ರದ್ದುಪಡಿಸಬೇಕೆಂದು ಕರ್ನಾಟಕ ಯುವ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಯಾಳ್ಪಿ ವಲಿಭಾಷಾ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಭಾನುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಕುಮ್ಮಕ್ಕಿನಿಂದಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಮರಳು ಗಣಿಗಾರಿಕೆಯಲ್ಲಿ ಸಂಪೂರ್ಣವಾಗಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ವೇದಾವತಿಯಲ್ಲಿ ದೊಡ್ಡದಾದ, ಆಳವಾದ ಗುಂಡಿಗಳನ್ನು ಮಾಡಿ, ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ. ಈಗಾಗಲೇ ಇಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತಾಗಿ ವಿಡಿಯೋ ತುಣಕುಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಲಾಗಿದೆ, ಆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
ತಾಲೂಕಿನ ಹಗರಿ ನದಿ ದಡದಲ್ಲಿ ನಿರ್ಮಾಣವಾಗಿರುವ 30-40 ಅಡಿ ಆಳದ ಬೃಹತ್ ಗುಂಡಿಗಳೇ ಅಕ್ರಮ ಮರಳು ಸಾಗಾಣಿಕೆಗೆ ಸಾಕ್ಷಿಯಾಗಿದೆ. ಮರಳು ಸಾಗಾಣಿಕೆಯಲ್ಲಿ ಮಾತ್ರವಲ್ಲ, ಟೆಂಡರ್ ಕರೆಯುವಲ್ಲಿಯೂ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದರು.
ಅಕ್ರಮ ಮರಳು ಗಣಿಗಾರಿಕೆ ಕುರಿತಾಗಿ ಪಾದಯಾತ್ರೆ, ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡುತ್ತಾ ಬಂದಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದರೆ, ಕರ್ನಾಟಕ ಯುವ ಜಾಗೃತಿ ವೇದಿಕೆಯ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಲಾಗುತ್ತದೆ. ಆ. 21ರಂದು ನಡೆಯುವ ಮತದಾನ ಬಹಿಷ್ಕಾರಕ್ಕೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಂಘದ ರಮೇಶ್, ವೈ. ಶಫಿ, ಜಿಲಾನ್, ರಾಣಿ ತೋಟ ಸತೀಶ್, ಗೂಡುಸಾಬ್, ಸತೀಶ್, ಕುಮಾರ್ ಇತರರು ಇದ್ದರು.