ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಂಗಕರ್ಮಿಗಳು ನೂತನ ಪ್ರಯೋಗಗಳತ್ತ ತೊಡಗಿ

Vishwanath S
Updated On : 2 Feb 2014, 12:03 pm

ಬಳ್ಳಾರಿ: ಜಾನಪದ ಸಾಹಿತ್ಯವನ್ನು ರಂಗಭೂಮಿಗೆ ಅಳವಡಿಸುವ ಕಾರ್ಯದ ಜತೆಗೆ ಹೊಸ ಹೊಸ ಪ್ರಯೋಗಗಳತ್ತ ರಂಗಭೂಮಿಯ ಯುವ ನಿರ್ದೇಶಕರು ತೊಡಗಿಸಿಕೊಳ್ಳಬೇಕಾಗಿದೆ ಎಂದು ಹಿರಿಯ ರಂಗಕರ್ಮಿ ಬಸವಲಿಂಗಯ್ಯ ಹಿರೇಮಠ ಹೇಳಿದರು. ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗಜಂಗಮ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿರುವ 3 ದಿನಗಳ ಮಕ್ಕಳ ರಂಗ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು. ರಂಗ ನಿರ್ದೇಶಕಿ ವಿಶ್ವೇಶ್ವರಿ ಬಸವಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೃತ್ತಿರಂಗಭೂಮಿ ಕಲಾವಿದರಾದ ಆದೋನಿ ವೀಣಾ ಕುಮಾರಿ ಹಾಗೂ ಕೊಟ್ನೆಕಲ್ ರಂಗಮ್ಮ ಅವರಿಗೆ ಪ್ರಸಕ್ತ ಸಾಲಿನ ರಂಗಜಂಗಮ ಗೌರವ ಪುರಸ್ಕಾರ ನೀಡಲಾಯಿತು. ನಿಷ್ಠಿ ರುದ್ರಪ್ಪ, ಬಿಸಿಲಹಳ್ಳಿ ಬಸವರಾಜ್, ಹಿರಿಯ ರಂಗಕರ್ಮಿ ಶಂಕರನಾಯ್ಡು, ಯಲ್ಲನಗೌಡ ಶಂಕರಬಂಡೆ, ಅಣ್ಣಾಜಿ ಕೃಷ್ಣಾರೆಡ್ಡಿ, ವೈ. ದೊಡ್ಡ ಬಸಪ್ಪ, ಮತ್ತಿತರರು ಉಪಸ್ಥಿತರಿದ್ದರು.

ಕೂಡ್ಲಿಗಿ: ಉಚಿತ ನೇತ್ರ ತಪಾಸಣಾ ಶಿಬಿರ
ಕೂಡ್ಲಿಗಿ:  ತಾಲೂಕಿನ ಉಜ್ಜಿನಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಾಗಟಗೆರೆ ಪತ್ರಿಬಸವೇಶ್ವರ ಗ್ರಾಮೀಣಭಿವೃದ್ಧಿ ಸಂಸ್ಥೆ, ಶ್ರೀ ಕಂಚಿಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಈಚೆಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಆಡಳಿತ ವ್ಯೆದ್ಯಾಧಿಕಾರಿ ಡಾ. ಗಂಗಾ ಅರುಣ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. 1284 ಜನ ನೇತ್ರ ತಪಾಸಣೆಗೊಳಗಾಗಿದ್ದು, 163 ಜನ ಶಸ್ತ್ರಚಿಕಿತ್ಸೆಗೆ ಅರ್ಹರಿದ್ದಾರೆ ಎಂದು ವೈದ್ಯರು ತಿಳಿಸಿದರು. ಜೆ.ಎಂ. ಮರುಳಾರಾಧ್ಯ, ಜೆ.ಆರ್. ಗೌರಮ್ಮ, ಕೊಟ್ಟೂರು ಗಣೇಶ್, ಡಾ. ಪ್ರಸನ್ನಕುಮಾರ್, ಜೆ.ಎಂ. ಗಡದಯ್ಯ, ಎಚ್. ಕೋಟ್ರೇಶ್, ಆನಂದ, ಸುಧೀರ್‌ಬಾಬು, ಸುದರ್ಶನ್, ಕೆ. ಬಸವರಾಜ ಇತರರಿದ್ದರು.

ಹೂವಿನಹಡಗಲಿ: ಪರೀಕ್ಷಾ ಪೂರ್ವ ತರಬೇತಿ ಶಿಬಿರ
ಹೂವಿನಹಡಗಲಿ:  ತಾಲೂಕಿನ ಹಿರೇಹಡಗಲಿ ವಿಕೆಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಎಐಡಿಎಸ್‌ಒ ಘಟಕ ಪರೀಕ್ಷಾ ಪೂರ್ವ ತರಬೇತಿ ಶಿಬಿರ ನಿಮಿತ್ತ ಮೆದುಳಿನ ಆರೋಗ್ಯ ಮತ್ತು ಶಿಕ್ಷಣ ಎಂಬ ವಿಷಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪ್ರೋತ್ಸಾಹಿಸುವ ಕಾರ್ಯಕ್ರಮ ಆಯೋಜಿಸಿತ್ತು. ಸಂಚಾಲಕ ರೆಹಮತ್ ಬೀರಬ್ಬಿ ಮಾತನಾಡಿ, ಮೆದುಳಿನ ಬೆಳವಣಿಗೆ, ನೆನಪಿನ ಶಕ್ತಿ, ಮನಸ್ಸಿನ ಕೇಂದ್ರೀಯತೆಯ ಪ್ರಮಾಣ ಕಲಿಯಬೇಕೆಂಬ ಅಭಿಲಾಷೆ, ದೈಹಿಕ, ಮಾನಸಿಕ, ಭಾವನಾತ್ಮಕ ಸ್ಥಿತಿ, ವಾತಾವರಣ, ಕಲಿಯುವ ಪದ್ಧತಿಗಳು, ಓದುವ ಹವ್ಯಾಸದ ಮೇಲೆ ಅವಲಂಬಿಸಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ನಟರಾಜ ಪಾಟೀಲ್, ನಿಂಗಪ್ಪ ತೊಗರಿಕಟ್ಟಿ ಮಾತನಾಡಿದರು.

ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಸಮಾರೋಪ
ಕಂಪ್ಲಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಳಗಾನೂರು ಶ್ರೀ ಶಿವಶಾಂತವೀರ ಶರಣರ ನೇತೃತ್ವದಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿದ್ದ 17ನೇ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದ ಸಮಾರೋಪ ಜರುಗಿತು. ಬಳ್ಳಾರಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬೆಂಗಳೂರು ವಿವೇಕಾನಂದ ಸೇವಾಶ್ರಮ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಉಚಿತ ನೇತ್ರ ಚಿಕಿತ್ಸೆ ಪಡೆದ 338 ಜನಕ್ಕೆ ಎಂ.ಆರ್. ಟ್ರೇಡಿಂಗ್ ಕಂಪನಿಯ ರಣಜೀತ್ ಮಲ್, ಜೋರಾವರ್ ಮಲ್, ಇಂದರ್ ಮಲ್, ಜವೇರಿಲಾಲ್ ಶ್ರೀಗೇವರ್ ಚಂದ್ ಸ್ಮರಣಾರ್ಥ ಉಚಿತ ಪ್ರಸಾದ ಸೇವೆ, ಷಾ.ಅಚಲ್ ಚಂದ್ ರಿಕಬ್ ಚಂದ್ ಜೀ ರಾಂಕಾ ಉಚಿತ ಕನ್ನಡಕ ಔಷಧಿ ಸೇವೆ ಮಾಡಿದರು. ಎಚ್. ಪ್ರಕಾಶಗೌಡ, ಡಾ. ಜಂಬುನಾಥಗೌಡ, ಡಾ. ಮಂಜುನಾಥ, ಸಂತೋಷ ತಾಡಪತ್ರಿ, ಡಾ. ಮಲ್ಲೇಶ, ಡಾ. ಜಗನ್ನಾಥ ಹಿರೇಮಠ, ಆಸ್ಪತ್ರೆ ಸಿಬ್ಬಂದಿ ಇತರರಿದ್ದರು.

ಸರ್ಕಾರದ ಕ್ರಮಕ್ಕೆ ರೈತ ಸಂಘ ಖಂಡನೆ
ಹೊಸಪೇಟೆ: ಬೆಂಗಳೂರಿನಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಕುಳಿತ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರೈತರನ್ನು ಜೈಲಿಗೆ ಕಳುಹಿಸಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು. ರೈತರು ಬೆಳೆದ ಕಬ್ಬಿಗೆ ಪ್ರತಿಟನ್‌ಗೆ ರು. 2,650 ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿದರೂ ಸಕ್ಕರೆ ಕಾರ್ಖಾನೆಯವರು ರು. 2,200 ನೀಡುತ್ತಿದ್ದಾರೆ. ಇಷ್ಟಾದರೂ ಸರ್ಕಾರ ದಿವ್ಯ ಮೌನವಹಿಸುತ್ತಿದೆ. ರಾಜ್ಯದಲ್ಲಿರುವ ಮಿಕ್ಸಿಂಗ್ ರಸಗೊಬ್ಬರ ಕಂಪನಿಗಳ ಮಾನ್ಯತೆ ರದ್ದುಪಡಿಸಿ ರೈತರಿಗೆ ಕೊಡುತ್ತಿರುವ ಕಳಪೆ ಗೊಬ್ಬರವನ್ನು ತಕ್ಷಣ ನಿಲ್ಲಿಸಿ, ಕಬ್ಬಿಗೆ ನಿಗದಿಪಡಿಸಿದ ದರ ನೀಡಬೇಕೆಂದರು.

ಬಳ್ಳಾರಿ ಗಾಂಧಿ ಭವನ: ಹುತಾತ್ಮರ ದಿನಾಚರಣೆ
ಬಳ್ಳಾರಿ: ಇಲ್ಲಿನ ಗಾಂಧಿ ಭವನದಲ್ಲಿ ಗುರುವಾರ ಮಲ್ಲಸಜ್ಜನ ವ್ಯಾಯಾಮ ಶಾಲೆ, ಭಾರತ ಸೇವಾದಳದ ಸಹಯೋಗದಲ್ಲಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಮಾತನಾಡಿದ ವಿಮ್ಸ್ ವೈದ್ಯಕೀಯ ಕಾಲೇಜ್‌ನ ನಿವೃತ್ತ ಪ್ರಾಚಾರ್ಯ ಡಾ. ಟೇಕೂರು ರಾಮನಾಥ್, ಗಾಂಧೀಜಿಯವರ ರಾಮರಾಜ್ಯ ಹಾಗೂ ಗ್ರಾಮ ಸ್ವರಾಜ್ಯದ ಕನಸುಗಳನ್ನು ನನಸು ಮಾಡುವುದು ಇಂದಿನ ಯುವ ಪೀಳಿಗೆಯ ಜವಾಬ್ದಾರಿಯಾಗಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ, ಕೋಮು ಸೌಹಾರ್ದತೆ ಕಾಪಾಡುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು. ಗಾಂಧಿ ಭವನದ ಕಾರ್ಯದರ್ಶಿ ಟಿ.ಜಿ. ವಿಠಲ್ ಪ್ರಾಸ್ತಾವಿಕ ಮಾತನಾಡಿದರು.

ಬಳ್ಳಾರಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ
ಬಳ್ಳಾರಿ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಈಚೆಗೆ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಯಿತು. ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ಐಟಿಐ ವಿದ್ಯಾರ್ಥಿಗಳು ವಾಕ್‌ಥಾನ್ ನಡೆಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ರೇಡಿಯೋ ಪಾರ್ಕ್ ವರೆಗೆ, ಮತ್ತಿತರ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಈ ವಾಕ್‌ಥಾನ್ ರಸ್ತೆ ಸುರಕ್ಷತೆ ಕುರಿತು ಹಲವು ಘೋಷಣೆಗಳನ್ನು ಕೂಗುತ್ತ ಸಾಗಿತು. ರಸ್ತೆ ಸುರಕ್ಷತೆ ಕುರಿತ ಸಂಕೇತಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ಚರ್ಚಾಕೂಟ  ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

ವಲ್ಲಭಭಾಯಿ ಪಟೇಲ್‌ಪುತ್ಥಳಿಗೆ ಲೋಹ ಸಂಗ್ರಹ
ಕೂಡ್ಲಿಗಿ: ತಾಲೂಕು ಬಿಜೆಪಿ ಘಟಕದಿಂದ ಹೊಸಹಳ್ಳಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಪುತ್ಥಳಿ ನಿರ್ಮಾಣಕ್ಕಾಗಿ ಲೋಹ ಸಂಗ್ರಹಿಸುವ ಕಾರ್ಯಕ್ರಮ ನಡೆಯಿತು. ಬಿಜೆಪಿ ತಾಲೂಕು ಅಧ್ಯಕ್ಷ ಸಿ. ರೇವಣಸಿದ್ಧಪ್ಪ ಮಾತನಾಡಿ, ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರ ವಹಿಸಿಕೊಂಡು ನರೇಂದ್ರ ಮೋದಿ ಪ್ರಧಾನಿ ಆಗುವುದು ನಿಶ್ಚಿತ. ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲವುದು ಖಚಿತ. ಈಗಾಗಲೆ ಬಿಜೆಪಿ ಬೆಂಬಲಿಸಲು ಪ್ರತಿಯೊಬ್ಬರೂ ಉತ್ಸುಕತೆ ತೋರುತ್ತಿದ್ದಾರೆ ಎಂದರು. ತಾಲೂಕು ಉಪಾಧ್ಯಕ್ಷ ಕೆ. ಕರಿವೀರಪ್ಪ, ಪ್ರಧಾನ ಕಾರ್ಯದರ್ಶಿ ಆರ್.ಪಿ. ರವಿಕುಮಾರ್, ರೈತ ಮೋರ್ಚಾ ಅಧ್ಯಕ್ಷ ಹಳೂರು ಬಸವರಾಜ, ಎಸ್ಟಿ ಮೋರ್ಚಾ ಅಧ್ಯಕ್ಷ ಎಂ. ಕೃಷ್ಣಮೂರ್ತಿ, ಎನ್. ನಾಗಣ್ಣ, ಸಿ. ಮರುಳಸಿದ್ಧಪ್ಪ, ಎಚ್.ಕೆ. ಎರ್ರಿಸ್ವಾಮಿ, ಕೆ.ಜಿ. ವಿಜಯಕುಮಾರ್ ಗೌಡ್ರು, ಕೆ.ವಿ. ವೀರೇಶಪ್ಪ, ಫೋಟೋ ತಿಪ್ಪೇಸ್ವಾಮಿ, ಪಿ. ಜಯರಾಜ್, ಜಿ. ಗಂಗಣ್ಣ,  ಗ್ರಾಪಂ ಸದಸ್ಯ ಜಿ. ವೀರಣ್ಣ ಇತರರಿದ್ದರು.

ಜನರ ಕಲ್ಯಾಣ ಕಾರ್ಯಕ್ಕೆ ಕಲ್ಯಾಣ ಮಂಟಪ ನಿರ್ಮಾಣ
ಕಂಪ್ಲಿ: ಬಡ ಜನತೆ ಕಲ್ಯಾಣ ಕಾರ್ಯಕ್ಕಾಗಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ ಎಂದು ಕಂಪ್ಲಿ ಸಕ್ಕರೆ ಕಾರ್ಖಾನೆಯ ಮುಕ್ತಿನಾಥೇಶ್ವರ ಟ್ರಸ್ಟ್ ಅಧ್ಯಕ್ಷ ಅರವಿ ಬಸವನಗೌಡ ತಿಳಿಸಿದರು. ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮುಕ್ತಿನಾಥೇಶ್ವರ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಂಪ್ಲಿ ಸಾಂಗತ್ರಯ ಸಂಸ್ಕೃತ ಪಾಠಶಾಲೆಯವರು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಾಮದೇವ ಮಹಾಂತ ಶಿವಾಚಾರ್ಯರು ಕಲ್ಯಾಣ ಮಂಟಪ ಉದ್ಘಾಟಿಸಿದರು. ನಾಗಭೂಷಣ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕೆ.ಎಂ. ಹೇಮಯ್ಯಸ್ವಾಮಿ, ಪಿ. ಮೂಕಯ್ಯಸ್ವಾಮಿ, ಎಂ. ರಾಜೇಂದ್ರಕುಮಾರ ಸ್ವಾಮಿ, ಅಗಳಿ ಪಂಪಾಪತಿ ಇತರರಿದ್ದರು.

ಭ್ರಷ್ಟಾಚಾರ ತಡೆಗೆ ಯುವಕರು ಕಟಿಬದ್ಧರಾಗಿ
ಕಂಪ್ಲಿ: ಭ್ರಷ್ಟಾಚಾರ ಮುಕ್ತ ಕರ್ನಾಟಕ ರೂಪಿಸಲು ಯುವ ಜನತೆ ಕಟಿಬದ್ಧರಾಗಬೇಕು ಎಂದು ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಸ್ಥೆ ರಾಜ್ಯಾಧ್ಯಕ್ಷ ಪ.ಯ. ಗಣೇಶ ತಿಳಿಸಿದರು. ಪಟ್ಟಣಕ್ಕೆ ಸಮೀಪದ ದೇವಸಮುದ್ರದ ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಸ್ಥೆಯ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ದೇವಸಮುದ್ರ ಗ್ರಾಮ ಘಟಕ ಅಧ್ಯಕ್ಷ ವಿ. ಗೌರೀಶ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎ.ಎಂ. ಬಸವರಾಜ್, ಉಪಾಧ್ಯಕ್ಷ ಎನ್. ಕಿರಣ್, ಸುಮೇಶ್, ಖಜಾಂಚಿ ಕೆ. ಮಲ್ಲಿಕಾರ್ಜುನ, ಸಂಘಟನ ಕಾರ್ಯದರ್ಶಿ ಪಿ. ಅಂಜಿನಿ, ಸುಗ್ಗೆನಳ್ಳಿ ಘಟಕದ ಅಧ್ಯಕ್ಷ ವಿ.ಬಿ. ಶ್ರೀನಿವಾಸ್, ಎಚ್. ಹನುಮಂತಪ್ಪ, ವಿ. ಹುಲಿಗೇಶ್ ಇತರರಿದ್ದರು.

5ರಿಂದ ಹಡಗಲಿ, ಎಚ್.ಬಿ. ಹಳ್ಳಿಯಲ್ಲಿ ಜನ ಜಾಗೃತಿ
ಬಳ್ಳಾರಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಫೆ. 5 ರಿಂದ 7ರ ವರೆಗೆ 3 ದಿನಗಳ ಕಾಲ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಅಂತರ್ಜಲ ಕುರಿತು ಜನ ಜಾಗೃತಿ ಶಿಬಿರಗಳನ್ನು ಹಮ್ಮಿಕೊಂಡಿದೆ ಎಂದು ಹಿರಿಯ ಭೂ ವಿಜ್ಞಾನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಡಗಲಿ ತಾಲೂಕಿನ ಸೋಗಿ ಗ್ರಾಮದ ಪಟ್ಟೆದ ಸಿದ್ಧಮಲ್ಲಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಫೆ. 5ರಂದು, ಎಚ್.ಬಿ. ಹಳ್ಳಿ ತಾಲೂಕಿನ ಅಲಬೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಫೆ. 6ರಂದು ಹಾಗೂ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದದಲ್ಲಿ ಫೆ. 7ರಂದು ಈ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಂತರ್ಜಲ ಅಭಿವೃದ್ಧಿ, ಸದ್ಬಳಕೆ ಹಾಗೂ ನಿರ್ವಹಣೆ ಕುರಿತು ಜನಜಾಗೃತಿ ಮೂಡಿಸಲಾಗುವುದು. ಜನತೆ ಪಾಲ್ಗೊಳ್ಳುವಂತೆ ಕೋರಿದ್ದಾರೆ.

ಅಂಗಡಿಗಳಿಗೆ ಎಡಿಸಿ ಭೇಟಿ:ಅಹವಾಲು ಸ್ವೀಕಾರ
ಬಳ್ಳಾರಿ: ನಗರದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಶನಿವಾರ ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು. ಸರ್ಕಾರದ ಪಡಿತರ ಖಾತ್ರಿ ಯೋಜನೆಯನ್ನು ಜಿಲ್ಲಾದ್ಯಂತ ಜಾರಿಗೆ ತರಲಾಗಿದೆ. ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ತಿಂಗಳ 1ರಿಂದ 10ರ ವರೆಗೆ ಪಡಿತರ ಚೀಟಿದಾರರಿಗೆ  ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ (ಊಟದ ವೇಳೆ, ರಾಷ್ಟ್ರೀಯ ರಜಾ ದಿನ ಹೊರತುಪಡಿಸಿ) ಪಡಿತರ ಧಾನ್ಯವನ್ನು ಕಡ್ಡಾಯವಾಗಿ ವಿತರಿಸಬೇಕು. ಉಳಿದಂತೆ ದಿನಾಂಕ 11ರಿಂದ 30ರ ವರೆಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಮತ್ತು ಸಂಜೆ 4 ರಿಂದ 8ರವರೆಗೆ (ಮಂಗಳವಾರ ಹೊರತುಪಡಿಸಿ) ಕಾರ್ಯನಿರ್ವಹಿಸಬೇಕು ಎಂದರು.  ನಗರದ 16 ನ್ಯಾಯಬೆಲೆ ಅಂಗಡಿಗಳಿಗೆ ಅವರು ಭೇಟಿ ನೀಡಿ ಆಹಾರ ಧಾನ್ಯದ ಪ್ರಮಾಣ ಮತ್ತು ದರದ ಬಗ್ಗೆ ವಿಚಾರಿಸಿದರು. ಎಸಿ ಅನಿರುದ್ಧ್ ಶ್ರವಣ್, ಇಲಾಖೆ ಉಪನಿರ್ದೇಶಕ ಮಂಟೆಸ್ವಾಮಿ ಇದ್ದರು.

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿ: ಡಾ. ಪಾಟೀಲ್
ಬಳ್ಳಾರಿ: ರೈತರು ಕೃಷಿಯಲ್ಲಿ ಕಡಿಮೆ ಕ್ಷೇತ್ರ, ಕಡಿಮೆ ಸಂಪನ್ಮೂಲ ಬಳಕೆಯಿಂದ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚಿನ ಆದಾಯ ಗಳಿಸುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕೆಂದು ತೋಟಗಾರಿಕೆ ವಿಜ್ಞಾನಗಳ ವಿವಿ ವಿಸ್ತರಣಾ ನಿರ್ದೇಶಕ ಡಾ.ಎ.ಬಿ. ಪಾಟೀಲ ತಿಳಿಸಿದರು. ಅವರು ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ ಹಾಗೂ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ತರಕಾರಿ ಹಾಗೂ ಪುಷ್ಪ ಬೆಳೆಗಳ ಸಂರಕ್ಷಿತ ಬೇಸಾಯ ತರಬೇತಿ ಶಿಬಿರ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್. ಹಿರೇಮಠ, ತಾಂತ್ರಿಕ ಮಾಹಿತಿ ಅನುಸರಿಸಿ ತೋಟಗಾರಿಕೆ ಮಾಡಿ ಎಂದರು.

ಬದುಕಿಗೆ ಗುಡಿ ಕೈಗಾರಿಕೆ ಆಸರೆ: ಮಲ್ಲಿಕಾರ್ಜುನ
ಕೂಡ್ಲಿಗಿ: ಪ್ರತಿಯೊಬ್ಬರೂ ಸ್ವಾವಲಂಬಿ ಬದುಕಿಗಾಗಿ ಗುಡಿ ಕೈಗಾರಿಕೆ ಮಾಡಿ ಆರ್ಥಿಕ ಸಬಲತೆ ಹೊಂದಬಹುದು ಎಂದು ಕನ್ನಡ ಕ್ರಾಂತಿದಳ ಅಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದರು.
ಅವರು ಶನಿವಾರ ತಾಲೂಕಿನ ಗುಡೇಕೋಟೆಯಲ್ಲಿ ಯುವ ಸಂಘಗಳ ಆಶ್ರಯದಲ್ಲಿ ನಡೆದ ಅಲ್ಪಾವಧಿ ವೃತ್ತಿ ವೈರ್ ಬ್ಯಾಗ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ನೌಷಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾರೆಕ್ಕ, ರುದ್ರಮ್ಮ, ರತ್ನಮ್ಮ, ಮಂಜುನಾಥ, ಬಸವರಾಜ್, ಚಂದ್ರು, ಅವಿನಾಶ್, ಶಿವು, ಆನಂದ್, ನರೇಶ್, ಹಂತೇಶ್, ಅಶೋಕ್, ಕ್ರಾಂತಿದಳ ಉಪಾಧ್ಯಕ್ಷ ತಿಪ್ಪೇಸ್ವಾಮಿ ಇತರರಿದ್ದರು.

ಮೌನೇಶ ಆಚಾರ ಕಾಣೆ: ಪ್ರಕರಣ ದಾಖಲು
ಬಳ್ಳಾರಿ: ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಕಾಣೆಯಾದ ಘಟನೆ ಜರುಗಿದೆ. ಮೌನೇಶ ಆಚಾರ (30) ನಾಪತ್ತೆಯಾದ ವ್ಯಕ್ತಿ. ಈತನಿಗೆ ಮದ್ಯಪಾನದ ಚಟವಿದ್ದು, ಆಗಸ್ಟ್ 30, 2013ರಂದು ಮನೆಯಿಂದ ಹೋದವನು ಮರಳಿ ಬಂದಿಲ್ಲ ಎಂದು ಆತನ ಪತ್ನಿ ಕೆ. ಶ್ಯಾಮಲಾ ದೂರು ನೀಡಿದ್ದಾಳೆ. ಈತ 5.6 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡುಮುಖ, ಬಿಳಿ ಅಂಗಿ, ಬಿಳಿ ಪಂಚೆ ಧರಿಸಿದ್ದು, ಕನ್ನಡ, ತೆಲುಗು ಭಾಷೆ ಬಲ್ಲವನಾಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ದೂ. 08392-276461, ಪೊಲೀಸ್ ಕಂಟ್ರೋಲ್ ರೂಂ- 08392258100 ಸಂಪರ್ಕಿಸುವಂತೆ ಠಾಣೆಯ ಪಿಎಸ್‌ಐ ಕೆ. ಹೊಸಕೇರಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.

ರೋಟರಿ ಸಂಸ್ಥೆ ಸೇವೆ ಅನನ್ಯ: ಬಿಲ್ ಚೆನ್
ಹೊಸಪೇಟೆ: ಪೊಲಿಯೋ ಮುಕ್ತ ಭಾರತ ಎಂದು ಘೋಷಿಸಲು ರೋಟರಿ ಸಂಸ್ಥೆ ಸೇವೆ ಅನನ್ಯ. ಸದಾ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ತೈವಾನ್ ದೇಶದ ರೋಟರಿಯನ್ ಬಿಲ್ ಚೆನ್ ಹೇಳಿದರು.  ನಗರದಲ್ಲಿ ನಡೆದ ರೋಟರಿ ಕ್ಲಬ್ ಡಿಸ್ಟ್ರಿಕ್ಟ್ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೆಎಸ್‌ಡಬ್ಲ್ಯೂ ಎಂಡಿ ಡಾ. ವಿನೋದ ನಾವೆಲ್, ಆರ್. ಗೋಪಿನಾಥ್, ಎಚ್. ಶ್ರೀನಿವಾಸರಾವ್, ಸಯ್ಯದ್ ಮಹ್ಮದ್, ಚಂದ್ರಶೇಖರ ಪಿ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ. ತಿರುಪತಿ ನಾಯ್ಡು ಸ್ವಾಗತಿಸಿದರು. ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಹಾಗೂ ಆಂಧ್ರಪ್ರದೇಶದ ಅನಂತಪುರ, ಕರ್ನೂಲು, ಕಡಪ, ನೆಲ್ಲೂರು ಜಿಲ್ಲೆಗಳು ಸೇರಿದಂತೆ ಇತರೆ ಜಿಲ್ಲೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಇಂದು ಉದ್ಯೋಗಿಗಳ ಸಮಾವೇಶ
ಬಳ್ಳಾರಿ: ಪ್ರಗತಿ-ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ಹೊಸದಾಗಿ ನೇಮಕವಾಗಿರುವ ನೌಕರರಿಗೆ ಫೆ. 2ರಂದು ಯುವ ಉದ್ಯೋಗಿಗಳ ಸಮಾವೇಶ ಏರ್ಪಡಿಸಲಾಗಿದೆ. ಪ್ರಗತಿ ಕೃಷ್ಣಾ ಬ್ಯಾಂಕ್ ನೌಕರರ ಸಂಘ ಹಾಗೂ ಅಧಿಕಾರಿಗಳ ಸಂಘದಿಂದ ಸಮಾವೇಶ ಆಯೋಜಿಸಲಾಗಿದೆ. ಬ್ಯಾಂಕಿನಲ್ಲಿ 500ಕ್ಕೂ ಅಧಿಕ ಹೊಸದಾಗಿ ನೌಕರರು ನೇಮಕವಾಗಿದ್ದು, ಇವರಿಗೆ ಕಾರ್ಮಿಕ ಚಳವಳಿಗಳನ್ನು ಮುಂದುವರಿಸಲು, ಹೋರಾಟಗಳ ಇತಿಹಾಸ, ಸಂಘದ ಅವಶ್ಯಕತೆಗಳನ್ನು ತಿಳಿಸಿಕೊಡುವ ಜತೆಗೆ ಅವರೊಂದಿಗೆ ಮುಕ್ತ ಸಂವಾದ ನಡೆಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ನೂತನ ನೌಕರರು ಅಂದಿನ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಸಂಘದ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಗಣಪತಿ ಹೆಗಡೆ ತಿಳಿಸಿದ್ದಾರೆ.

ಇಂದಿನಿಂದ ಗ್ರಾಮೀಣ ಪೈಕಾ ಕ್ರೀಡಾಕೂಟ
ಬಳ್ಳಾರಿ: ನವದೆಹಲಿಯ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತ ಕ್ರೀಡಾ ಪ್ರಾಧಿಕಾರದ ಪೈಕಾ ನಿರ್ದೇಶಲನಾಲಯ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸಹಯೋಗದಲ್ಲಿ ಫೆ. 2ರಿಂದ 5ರ ವರೆಗೆ ವಿಮ್ಸ್ ಕ್ರೀಡಾಂಗಣದಲ್ಲಿ 6ನೇ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಗ್ರಾಮೀಣ ಪೈಕಾ ಕ್ರೀಡಾಕೂಟ ನಡೆಯಲಿದೆ. ಬೆಳಗ್ಗೆ 11ಕ್ಕೆ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಉದ್ಘಾಟಿಸಲಿದ್ದು, ಬೆಳಗ್ಗೆ 11.25 ಗಂಟೆಗೆ ಕ್ರೀಡಾ ಧ್ವಜಾರೋಹಣ, 11.25ಕ್ಕೆ ಗೌರವ ಸ್ವೀಕಾರ, ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ. ಫೆ. 5ರ ಸಂಜೆ 4ಕ್ಕೆ ಸಮಾರೋಪ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement