ಅಪರೂಪದ ಶಿಲ್ಪ ವಿರೂಪ
ಬಾದಾಮಿ: ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ಸುಕ್ಷೇತ್ರ ಮಹಾಕೂಟದಲ್ಲಿ ಚಾಲುಕ್ಯರ ಕಾಲದಲ್ಲಿ ಸ್ಥಾಪಿತವಾದ ಸಂಗಮೇಶ್ವರ ದೇವಾಲಯದ ಹಿಂಬದಿ ಗೋಡೆಯ ಮೇಲೆ ಕೆತ್ತಿದ ಅಪರೂಪದ ಅರ್ಧ ನಾರೀಶ್ವರ ಶಿಲ್ಪವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಚಾಲುಕ್ಯರ ಶಿಲ್ಪಕಲೆಯಲ್ಲಿ ಅತ್ಯಂತ ಆಕರ್ಷಣೀಯ ಮೂರ್ತಿ ಇದಾಗಿದ್ದು, ಅಮೆರಿಕದ ಕೆರೋಲ್ ಗೋಲನ್ ಎಂಬ ಮಹಿಳೆ ಮೂರು ಬಾರಿ ಮಹಾಕೂಟ ಕ್ಷೇತ್ರಕ್ಕೆ ಆಗಮಿಸಿ ಈ ಶಿಲ್ಪದ ಅಧ್ಯಯನ ನಡೆಸಿದ್ದಳು. ಈ ಘಟನೆ ಶಿಲ್ಪ ಅಧ್ಯಯನಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ, ಇತಿಹಾಸ ಪ್ರಿಯರಿಗೆ ಮತ್ತು ಸಂಶೋಧಕರಿಗೆ ನೋವನ್ನುಂಟು ಮಾಡಿದೆ. ಐತಿಹಾಸಿಕ ಪರಂಪರೆ ಹೇಳುತ್ತಿರುವ ಸ್ಮಾರಕ, ದೇವಾಲಯಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೋಡುವ ಭಾಗ್ಯ ಕಲ್ಪಿಸಬೇಕಾಗಿದೆ.