ಇಂದಿನಿಂದ ಮೈಲಾರಲಿಂಗೇಶ್ವರ ಜಾತ್ರೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 5
ನಾಡಿನ ಪ್ರಸಿದ್ಧ ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರೆಗೆ ರಥಸಪ್ತಮಿಯ ದಿನ ಫೆ. 6ರಂದು ದೇವಸ್ಥಾನದ ಆವರಣದಲ್ಲಿ ಹಾಲು ಉಕ್ಕಿಸುವ ಮೂಲಕ ಚಾಲನೆ ಪಡೆಯಲಿದೆ.
ಮೈಲಾರಲಿಂಗೇಶ್ವರ ದೇವಸ್ಥಾನದ ರಂಗಮಂಟಪದಲ್ಲಿ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಶ್ರೀಸ್ವಾಮಿಗೆ ಹಾಗೂ ಕಾರ್ಣಿಕ ನುಡಿಯುವ ಗೊರವಪ್ಪ ಏರುವ ಐತಿಹಾಸಿಕ ಬಿಲ್ಲಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ಬಾಬುದಾರರು ಮತ್ತು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಸಂಪ್ರದಾಯದ ಪ್ರಕಾರ ಹಾಲುಕ್ಕಿಸುವ ಮೂಲಕ ಜಾತ್ರಾ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಶ್ರೀಸ್ವಾಮಿಯ ಪಲ್ಲಕ್ಕಿಯ ಮೌನ ಸವಾರಿ ಉತ್ಸವವು ಡೆಂಕನ ಮರಡಿಗೆ ತೆರಳಿ 11 ದಿನ ಅಲ್ಲಿಯೇ ಪ್ರತಿಷ್ಠಾಪನೆಗೊಳ್ಳುವುದು. ದೇವಸ್ಥಾನ ಅರ್ಚಕರು ಸ್ವಾಮಿ ಇರುವ ಡೆಂಕನ ಮರಡಿಗೆ ದಿನಕ್ಕೆರಡು ಬಾರಿಯಂತೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಸಂಪ್ರದಾಯದಂತೆ ಸ್ವಾಮಿ ಇಲ್ಲದ ದೇವಸ್ಥಾನದಲ್ಲಿ ಘಂಟೆನಾದ ಮೊಳಗುವುದಿಲ್ಲ, ಮಂಗಳಾರತಿ ಬೆಳಗುವುದಿಲ್ಲ.
ವಿವಿಧ ಧಾರ್ಮಿಕ ಕಾರ್ಯಕ್ರಮ: ದೇವಲೋಕದ 7 ಕೋಟಿ ದೇವಾನುದೇವತೆಗಳು ಮಾರು ವೇಷದಲ್ಲಿ ಧರೆಗಿಳಿದ ದಿನವೇ ರಥಸಪ್ತಮಿ ದಿನ, 11 ದಿನಗಳ ಕಾಲ ಡೆಂಕನ ಮರಡಿ ಪಕ್ಕದಲ್ಲಿರುವ ಅವ್ವನ ಮರಡಿ (ಗಂಗಿ ಮಾಳಮ್ಮನ ಮರಡಿ)ಯಲ್ಲಿ ರಾಕ್ಷಸರೊಂದಿಗೆ ಕದನ ಮಾಡುವ ಮೈಲಾರಲಿಂಗ (ಶಿವ), ಗಂಗಿಮಾಳಮ್ಮ (ಪಾರ್ವತಿ) ಸೇರಿದಂತೆ 7 ಕೋಟಿ ದೇವಾನುದೇವತೆಗಳು ಪೌರಾಣಿಕ ಹಿನ್ನೆಲೆಯಂತೆ ರಥಸಪ್ತಮಿಯ ದಿನ ಭಕ್ತರು ನೈವೇದ್ಯಕ್ಕೆ ತರುವ ಸಜ್ಜಿ ಕಡುಬು ಮತ್ತು ಗ್ವಾರಪ್ಪ ಬಳಿ ಇರುವ ಬಿಲ್ಲು, ಗುರುಗಳ ಕೈಯಲ್ಲಿ ಬತ್ತಳಿಕೆಗಳನ್ನು ಇಟ್ಟುಕೊಂಡು ಪರಸ್ಪರ ಹೊಡೆದಾಡಿಕೊಳ್ಳುವ ಕಡುಬಿನ ಕಾಳಗ ರಾತ್ರಿ 8 ಗಂಟೆಗೆ ನಡೆಯಲಿದೆ ಎಂದು ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ತಿಳಿಸಿದರು.
ತಮ್ಮ ಇಷ್ಟಾರ್ಥ ನೆರೆವೇರಿಸುವಂತೆ ಶ್ರೀಸ್ವಾಮಿಗೆ ಹರಕೆ ಹೊತ್ತ ಭಕ್ತರು 11 ದಿನಗಳ ಕಾಲ ಡೆಂಕನ ಮರಡಿ ಕಾಯುವ ಕಾಯಕ ಕೈಗೊಂಡಿರುತ್ತಾರೆ. ಮೈಲಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹರಕೆ ಹೊತ್ತ ನೂರಾರು ಭಕ್ತರಿಗಾಗಿ ಅಂಬಲಿ, ಮಜ್ಜಿಗೆ, ಬೆಲ್ಲದ ಪಾನಕವನ್ನು ಪ್ರಸಾದ ರೂಪದಲ್ಲಿ ನೀಡಿ ತಮ್ಮ ಸೇವಾ ಕೈಂಕರ್ಯ ಮೆರೆಯುತ್ತಾರೆ.
11 ದಿನಗಳವರೆಗೂ ಡೆಂಕನ ಮರಡಿಯಲ್ಲಿ ಪ್ರತಿ ದಿನವೂ ಧಾರ್ಮಿಕ ಆಚರಣೆಗಳು ಜರುಗುವವು. ಕಾರ್ಣಿಕೋತ್ಸವ ದಿನದಂದು ಯುದ್ಧ ಜಯಿಸಿದ ಸಂಭ್ರಮದೊಂದಿಗೆ ಮೈಲಾರಲಿಂಗಸ್ವಾಮಿ ದೇವಸ್ಥಾನ ಪ್ರವೇಶಿಸುವ ಪ್ರತೀತಿಯಂತೆ ಪ್ರತಿವರ್ಷ ಜಾತ್ರಾ ಸಂದರ್ಭದಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಭಕ್ತಾದಿಗಳು ದೀಡ್ ನಮಸ್ಕಾರ, ಜವುಳ ಮುಂತಾದ ಹರಕೆ ತೀರಿಸುವ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳುವರು.