ಇನ್ಯಾವತ್ತೂ ಕಾಂಗ್ರೆಸ್ ಸೇರಲ್ಲ್ಲ: ಬೊಮ್ಮಣ್ಣ
ಕೂಡ್ಲಿಗಿ: ಕೂಡ್ಲಿಗಿಯ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಕಾಂಗ್ರೆಸ್ ಪಕ್ಷ ತೊರೆದು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಷಿ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರ ಸಮ್ಮುಖದಲ್ಲಿ ಸೇರ್ಪಡೆಯಾದರು.
ವೀರಪ್ಪ ಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೂಡ್ಲಿಗಿ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಎನ್.ಟಿ. ಬೊಮ್ಮಣ್ಣ, ಇಂದಿನ ಜಿಲ್ಲಾ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರ ವರ್ತನೆಗಳಿಗೆ ಬೇಸತ್ತು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಿರುವುದು ಕೂಡ್ಲಿಗಿ ಕ್ಷೇತ್ರದ ಜನತೆಗೆ ಅಚ್ಚರಿ ಮೂಡಿಸಿದೆ. ಎನ್.ಟಿ. ಬೊಮ್ಮಣ್ಣ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಸೇರ್ಪಡೆಯಾಗಿರುವ ವಿಷಯ ಕೂಡ್ಲಿಗಿ ಕ್ಷೇತ್ರದ ರಾಜಕೀಯ ವಲಯದಲ್ಲಿಯೂ ಗೊತ್ತಿಲ್ಲ. ಸ್ವತಃ ಎನ್.ಟಿ. ಬೊಮ್ಮಣ್ಣನವರಿಗೆ ಸಹ ಬುಧವಾರ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ತಿಳಿದಿದ್ದಿಲ್ಲ.
ಅನಿವಾರ್ಯವಾಗಿತ್ತು: ಈ ಬಗ್ಗೆ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ 'ಕನ್ನಡಪ್ರಭ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಬುಧವಾರ ಬೆಳಗ್ಗೆ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಲು ನಾನು ಮತ್ತು ನನ್ನ ಬೆಂಬಲಿಗರು ಬೆಂಗಳೂರಿನ ಬಿಜೆಪಿ ಕಚೇರಿಗೆ ಹೋಗಿದ್ದೆವು, ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಶಾಸಕ ಸಿ.ಟಿ. ರವಿ ಹಾಗೂ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನೇಮಿರಾಜನಾಯ್ಕ, ಸಿರುಗುಪ್ಪ ಮಾಜಿ ಶಾಸಕ ಸೋಮಲಿಂಗಪ್ಪ ಸೇರಿದಂತೆ ಅನೇಕರು ಇಂದೇ ಸೇರ್ಪಡೆಯಾಗುವಂತೆ ಒತ್ತಾಯಿಸಿದರು. ಹೀಗಾಗಿ ಬುಧವಾರವೆ ಬಿಜೆಪಿ ಸೇರಬೇಕಾದ ಅನಿವಾರ್ಯ ಬಂದಿತು ಎಂದು ಹೇಳಿದರು.
ಕಾಂಗ್ರೆಸ್ ಸೇರಲಾರೆ: ನಾನು ನನ್ನ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿ ಬಿಜೆಪಿಗೆ ಸೇರಬೇಕೆಂಬ ಉದ್ದೇಶ ಇತ್ತು, ಆದರೆ ಅನಿವಾರ್ಯವಾಗಿ ರಾಜ್ಯ ನಾಯಕರ ಒತ್ತಡಕ್ಕೆ ಮಣಿದು ಬುಧವಾರವೇ ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದ ಬೊಮ್ಮಣ್ಣ, ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ವರ್ಷಗಳಿಂದ ದುಡಿದಿದ್ದೇನೆ ಆದರೆ ರಾಜ್ಯದ ಯಾವೊಬ್ಬ ನಾಯಕರು, ಈಗಿನ ಜಿಲ್ಲಾ ಕಾಂಗ್ರೆಸ್ ನಾಯಕರು ಯಾವುದೇ ವಿಷಯಕ್ಕೂ ನನ್ನಂತ ಹಿರಿಯ ಮುಖಂಡರ ಅಭಿಪ್ರಾಯ ಕೇಳಲಿಲ್ಲ. ನನ್ನನ್ನು ರಾಜಕೀಯವಾಗಿ ತುಳಿಯುವ ಷಡ್ಯಂತ್ರ ನಡೆಸಿದರು. ಹೀಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರ ವರ್ತನೆಗೆ ಬೇಸತ್ತಿದ್ದೇನೆ. ಇನ್ನುಮುಂದೆ ನನ್ನ ಜೀವನದಲ್ಲಿ ಎಂದಿಗೂ ಕಾಂಗ್ರೆಸ್ ಸಹವಾಸಕ್ಕೆ ಮಾತ್ರ ಹೋಗುವುದಿಲ್ಲ ಎಂದು ತಮ್ಮ ಮನದಾಳದ ನೋವನ್ನು ಹೇಳಿಕೊಂಡರು.
ನಾನು ರಾಜಕೀಯವಾಗಿ ನಿವೃತ್ತಿ ಬಗ್ಗೆ ಯೋಚನೆ ಮಾಡುವುದಿಲ್ಲ, ನನಗೆ ಉತ್ಸಾಹ ಇದೆ, ಕೂಡ್ಲಿಗಿ ಕ್ಷೇತ್ರದಲ್ಲಿ ಹೇಗೆ ರಾಜಕೀಯ ಮಾಡಬೇಕೆಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.