ಪ್ರಭಾವ ಬೀರುವ ನಾಟಕ ಬೇಕು: ಪನ್ನರಾಜ್
ಬಳ್ಳಾರಿ: ಮಕ್ಕಳ ಬೆಳವಣಿಗೆಯಲ್ಲಿ ಪ್ರಭಾವ ಬೀರುವ ನಾಟಕಗಳು ಪ್ರಸ್ತುತ ದಿನಗಳಲ್ಲಿ ಅಗತ್ಯವಾಗಿವೆ ಎಂದು ಪ್ರಗತಿಪರ ಚಿಂತಕ ಸಿರಿಗೇರಿ ಪನ್ನರಾಜ್ ಅಭಿಪ್ರಾಯಪಟ್ಟರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಏರ್ಪಡಿಸಿದ್ದ ಮಕ್ಕಳ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಮಕ್ಕಳಿಗೆ ಕಲಿಕೆಯ ಹಂತದಲ್ಲೆ ರಂಗಭೂಮಿ ಪರಿಚಯ, ರಂಗ ತರಬೇತಿ ಹಾಗೂ ನಾಟಕಗಳ ಪ್ರದರ್ಶನ ಮಾಡಿಸುವುದು ಉತ್ತಮ ಬೆಳವಣಿಗೆ. ಅವರನ್ನು ಚಿಕ್ಕವಯಸ್ಸಿನಿಂದಲೆ ಜಾಗ್ರತರನ್ನಾಗಿಸುವಲ್ಲಿ ನಾಟಕಗಳು ಉತ್ತಮ ಸಹಕಾರಿಯಾಗಲಿವೆ. ನಾಟಕಗಳಲ್ಲಿನ ಎಲ್ಲ ರೂಪಕಗಳನ್ನು ಅಭಿನಯಿಸಿದಾಗ ಜೀವನ ಸಾರ್ಥಕತೆಯ ಅರಿವು ಮೂಡಲಿದೆ ಎಂದರು.
ಸಮಾರೋಪ ಭಾಷಣ ಮಾಡಿದ ಜನಪದ ರಂಗತಜ್ಞ ಡಾ.ಕೆ.ಆರ್. ದುರ್ಗದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ಅನುದಾನದ ಶ್ರಮ ಸಾರ್ಥಕವಾಗಲಿದೆ. ಮಕ್ಕಳಿಗೆ ಪಾತ್ರಗಳು, ಅಭಿನಯ ಸಂದರ್ಭದ ಪ್ರಸಂಗಗಳು ನಾಟಕದ ಮೂಲಕ ಪರಿಚಯವಾಗುವುದರಿಂದ ಬಾಲ್ಯದಲ್ಲಿಯೆ ಅವರು ಜಾಗ್ರತರಾಗುತ್ತಾರೆ ಎಂದು ಹೇಳಿದರು. ಸಾಂಬಶಿವ ದಳವಾಯಿ, ಮುಖ್ಯಗುರು ಚಾಮಾ ಗಂಗಾಧರಯ್ಯ, ಕಪ್ಪಗಲ್ಲು ಮೆಹತಾಬ್, ಶಿಕ್ಷಕ ಎರ್ರಿಸ್ವಾಮಿ, ವೈ. ದೊಡ್ಡಬಸಪ್ಪ ಇತರರಿದ್ದರು. ಅಮಾತಿ ಬಸವರಾಜ್ ನಿರೂಪಿಸಿದರು. ಕವಿತಾ ಗಂಗೂರ್ ಹಾಗೂ ಸಂಸ್ಥೆಯ ಕಾರ್ಯದರ್ಶಿ ಅಣ್ಣಾಜಿ ಕೃಷ್ಣಾರೆಡ್ಡಿ ಸ್ವಾಗತಿಸಿದರು.