ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶ್ರೀರಾಮುಲು ಸೇರ್ಪಡೆ ಹೈಕಮಾಂಡ್‌ಗೆ ಬಿಟ್ಟದ್ದು

Lingaraj Badiger
Updated On : 6 Feb 2014, 1:55 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 5
ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷ ಸೇರುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ ಅವರನ್ನು ತಾವು ಕಾಂಗ್ರೆಸ್ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರೊಂದಿಗೆ ಭೇಟಿ ಮಾಡಿಸಿಲ್ಲ ಎಂದು ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಸ್ಪಷ್ಟಪಡಿಸಿದರು.
ನಗರದ 5ನೇ ವಾರ್ಡ್ ವ್ಯಾಪ್ತಿಯಲ್ಲಿ ಬುಧವಾರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರೊಂದಿಗೆ ಸೇರಿಕೊಂಡು, ನನ್ನ ಮನೆಗೆ ನುಗ್ಗಿ ಕಾರು, ಬೈಕ್‌ಗಳನ್ನು ಸುಟ್ಟು ಹಾಕಿದ್ದಾರೆ. ಅಂತವರನ್ನು ಕರೆದುಕೊಂಡು ದಿಗ್ವಿಜಯ್ ಸಿಂಗ್‌ರೊಂದಿಗೆ ಏಕೆ ಭೇಟಿ ಮಾಡಿಸಲಿ? ಅಂತಹ ಯಾವುದೇ ಸಂದರ್ಭಗಳು ಇಲ್ಲ. ಅಂತಹ ರಾಜಕೀಯ ವ್ಯಕ್ತಿಯೂ ನಾನಲ್ಲ. ಇದನ್ನು ಜನ ಮೆಚ್ಚುತ್ತಾರೆಯೇ ಎಂದ ಪ್ರಶ್ನಿಸಿದ ಅವರು, ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವಿಷಯ ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದಾಗಿದೆ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಒಂದು ವೇಳೆ ಶ್ರೀರಾಮುಲು ಪಕ್ಷ ಸೇರ್ಪಡೆ ಕುರಿತು ಹೈಕಮಾಂಡ್ ಕೇಳಿದಲ್ಲಿ ಆಗ ನನ್ನ ಅಭಿಪ್ರಾಯ ತಿಳಿಸುವೆ ಎಂದು ಹೇಳಿದರು.
ಶೀಘ್ರದಲ್ಲೆ ಲೋಕಸಭೆ ಚುನಾವಣೆ ಆಗಮಿಸಲಿದ್ದು, ಪಕ್ಷದ ಹಿರಿಯ ಮುಖಂಡ ಕೆ.ಸಿ. ಕೊಂಡಯ್ಯ ಕೂಡಲೆ ನಿವೇಶನ ಹಿಂದಿರುಗಿಸಬೇಕು. ಇಲ್ಲದಿದ್ದಲ್ಲಿ ಪಕ್ಷದ ಕಾರ್ಯಕರ್ತರಿಗೆ ತೀವ್ರ ಮುಜುಗರ ಉಂಟಾಗಲಿದೆ. ಪಕ್ಷಕ್ಕಾಗಿ ಸಾಕಷ್ಟು ದುಡಿದ ಅವರು, ಪಕ್ಷದಿಂದ ಅಷ್ಟೆ ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ಇದನ್ನು ತಡಮಾಡದೆ ಕೂಡಲೆ ನಿವೇಶನವನ್ನು ಹಿಂದಿರುಗಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಬೇಕು. ಅಲ್ಲದೆ ಪಕ್ಷದ ಮುಖಂಡರು ತಮ್ಮದೆ ಆದ ರೀತಿ ಮಾಡುತ್ತಿರುವ ಗುಂಪುಗಾರಿಕೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆಯಾಗಲಿದೆ ಎಂದರು. ಪಾಲಿಕೆ ಸದಸ್ಯೆ ಫರ್ವಿನ್‌ಬಾನು, ಎಪಿಎಂಸಿ ಸದಸ್ಯ ಜಿಲಾನ್ ಬಾಷಾ, ಅನಿಲ್‌ಕುಮಾರ್, ಶಂಕರ್, ಪರಶುರಾಮ್ ಸೇರಿದಂತೆ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement