ಐಸಿಡಿಸಿ ಖಾಸಗೀಕರಣ ವಿರೋಧ: ಪ್ರತಿಭಟನೆ
ಬಳ್ಳಾರಿ: ಐಸಿಡಿಸಿ ಖಾಸಗೀಕರಣವನ್ನು ವಿರೋಧಿಸಿ, ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಘಟಕದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವಂತೆ ಸಂಘದ ರಾಜ್ಯ ಘಟಕದ ಸೂಚನೆ ಮೇರೆಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆ ನಗರದ ಗಾಂಧಿ ಭವನದಿಂದ ಆರಂಭವಾಗಿ ಗಡಗಿ ಚನ್ನಪ್ಪ ವೃತ್ತದ ಮೂಲಕ ತಾಲೂಕು ಕಚೇರಿ ತಲುಪಿತು. ರಸ್ತೆಯುದ್ದಕ್ಕೂ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿದರಲ್ಲದೆ, ಹಲವು ದಿನಗಳಿಂದ ಹೋರಾಟ ಮಾಡುತ್ತಿರುವ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಕೂಡಲೆ ಈಡೇರಿಸುವಂತೆ ಒತ್ತಾಯಿಸಿದರು.
ಒಪ್ಪಂದ ರದ್ದುಗೊಳಿಸಿ: ಸಂಘದ ತಾಲೂಕು ಘಟಕದ ಅಧ್ಯಕ್ಷೆ ಲೀಲಾವತಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, 40 ವರ್ಷಗಳಿಂದ ಮಕ್ಕಳ ಲಾಲನೆ- ಪಾಲನೆ ಮಾಡುತ್ತಿರುವ ಐಸಿಡಿಸಿ ಯೋಜನೆಯನ್ನು ರಾಜ್ಯ ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ದೇಶಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತೊಂದರೆ ಅನುಭವಿಸುವಂತಾಗಲಿದೆ. ಹೀಗಾಗಿ ಕೂಡಲೆ ಖಾಸಗೀಕರಣ ರದ್ದುಗೊಳಿಸಿ, ಈ ಹಿಂದಿನಂತೆ ಯೋಜನೆಯನ್ನು ಮುಂದುವರಿಸಬೇಕು. ಸರ್ಕಾರೇತರ ಸಂಘ- ಸಂಸ್ಥೆಗಳ ಪಾಲುದಾರಿಕೆಯಲ್ಲಿ ಈಗಾಗಲೆ ರಾಜ್ಯದ 22 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮಾಡಲು ಹೊರಟಿರುವ ಖಾಸಗೀಕರಣ ರದ್ದುಗೊಳಿಸಬೇಕು. ವೇದಾಂತ ಫೌಂಡೇಷನ್ನ ತಿಳಿವಳಿಕೆ ಒಪ್ಪಂದವನ್ನು ರದ್ದುಗೊಳಿಸಬೇಕು. ಈಗಿರುವ ಕಾರ್ಯಕರ್ತೆಯರನ್ನು ಬೇರೆಡೆಗೆ ವರ್ಗಾಯಿಸಬಾರದು ಎಂದು ಆಗ್ರಹಿಸಿದರು.
ಕೂಡಲೆ ರು. 10 ಸಾವಿರಕ್ಕೆ ವೇತನ ಹೆಚ್ಚಿಸಬೇಕು. ಸರ್ಕಾರಿ ನೌಕರರಂತೆಯೆ ಕಾರ್ಯಕರ್ತೆಯರಿಗೂ ಹೆರಿಗೆ ಭತ್ಯೆ, ಪಿಂಚಣಿ ಯೋಜನೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್ ಪ್ರಮೋದ್ಗೆ ಮನವಿ ಪತ್ರ ಸಲ್ಲಿಸಿದರು.
ಎರ್ರೆಮ್ಮ, ಬಸಮ್ಮ, ಗಂಗಮ್ಮ, ಸುಭದ್ರ, ಜ್ಯೋತಿ, ಬಸವರಾಜ್ ಸೇರಿದಂತೆ ಇತರೆ ನೂರಾರು ಕಾರ್ಯಕರ್ತೆಯರಿದ್ದರು.