ರಸ್ತೆ ಕಾಮಗಾರಿ ಅಧ್ವಾನ: ತರಾಟೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 6
ತುಂಗಭದ್ರೆ ನದಿ ನೀರಿಲ್ಲದೆ ಬತ್ತಿ ಹೋಗಿದ್ದು, ಕುಡಿವ ನೀರಿನ ಯೋಜನೆಗಳಿಗೆ ನೀರಿಲ್ಲದೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದೆ. ಮೈಲಾರ- ತೋರಣಗಲ್ಲು ರಾಜ್ಯ ಹೆದ್ದಾರಿ ತುಂಬ ಧೂಳು ತುಂಬಿ ಕಳಪೆ ಕಾಮಗಾರಿಯಾಗಿದ್ದರೂ ಯಾರು ಕೇಳೋರಿಲ್ಲ...
ಹೀಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ತಾಪಂ ಮಲ್ಲಿಗೆ ಸಭಾಂಗಣದಲ್ಲಿ ನಡೆದ ತಾಪಂ ಸಭೆಯಲ್ಲಿ ನಡೆಯಿತು. ಮೈಲಾರ- ತೋರಣಗಲ್ಲು ರಾಜ್ಯ ಹೆದ್ದಾರಿ ಕಳಪೆ ಕಾಮಗಾರಿ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತ, ಅಪರೂಪಕ್ಕೊಮ್ಮೆ ಅನುದಾನ ಬರುತ್ತದೆ. ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿ, ಲೋಕೋಪಯೋಗಿ ಎಂಜಿನಿಯರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಕಾರಿನ ಗ್ಲಾಸ್ ಹಾಕಿಕೊಂಡು ಹೋಗುವ ನಿಮಗೆ(ಅಧಿಕಾರಿಗಳಿಗೆ) ಧೂಳಿನ ಅನುಭವ ಆಗದು, ಸಾರ್ವಜನಿಕರು ನಿತ್ಯ ಧೂಳಿನಿಂದ ಅಸ್ತಮ ಕಾಯಿಲೆಗೆ ತುತ್ತಾಗುತ್ತಿದ್ದಾರೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಹರವಿ ಪ್ರಕಾಶ, ಸದಸ್ಯ ವಾಲ್ಯಾನಾಯ್ಕ ತರಾಟೆ ತೆಗೆದುಕೊಂಡರು.
ಉತ್ತಂಗಿ, ಮಹಾಜನದಹಳ್ಳಿ, ತಳಕಲ್ಲು, ತಳಕಲ್ಲು ಪ್ಲಾಟ್ಗಳಿಗೆ ಕುಡಿಯುವ ನೀರಿಲ್ಲ. ನದಿ ಪೂರ್ಣ ಬತ್ತಿ ಹೋಗಿದೆ. 300 ಅಡಿ ವರೆಗೆ ಕೊಳವೆಬಾವಿ ಕೊರೆದರೂ ನೀರಿಲ್ಲ. ಜಾತ್ರೆಗೆ ಟ್ಯಾಂಕರ್ ಮೂಲಕ ನೀರು ವಿತರಿಸಬೇಕೆಂದು ಸದಸ್ಯೆ ಸಾವಿತ್ರಮ್ಮ ಹೇಳಿದರು. ಸಮಸ್ಯೆ ಬಗೆಹರಿಸುತ್ತೇವೆಂದು ಅಧಿಕಾರಿಗಳು ಹೇಳಿದಾಗ, ಬರಿ ಮಾತಾಗಬಾರದು, ಸಮಸ್ಯೆ ಬಗೆಹರಿಸಬೇಕು. ಜಾತ್ರೆಗೆ ಅಷ್ಟೆ ಸಾಲದು ನಿತ್ಯ ನೀರು ಕೊಡಿ ಎಂದು ಮತ್ತೆ ತರಾಟೆಗೆ ತೆಗೆದುಕೊಂಡರು.
ಅಲ್ಲಿಪುರ, ಮಾಗಳ, ರಾಜವಾಳ ರಸ್ತೇಲಿ ಬೈಕ್ ಕೂಡ ಹೋಗಲ್ಲ, ಅಷ್ಟೊಂದು ರಸ್ತೆ ಹಾಳಾದರೂ ಇಲಾಖೆ ಅಧಿಕಾರಿಗಳು ನಿದ್ದೆ ಮಾಡುತ್ತೀರಾ? ನಮ್ಮೂರಿನ ಶಾಲಾ ಮಕ್ಕಳ ಟಾಂಟಾಂ ವಾಹನದಲ್ಲಿ ಹಡಗಲಿಗೆ ಹೋಗುವಾಗ ಬಿದ್ದು ಗಾಯಗಳಾಗಿವೆ. ರಸ್ತೆ ಸರಿ ಇಲ್ಲದೆ ಬಸ್ಸಿನ ಸೌಕರ್ಯವಿಲ್ಲ. ಮೊದಲು ರಸ್ತೆ ಮಾಡ್ರಿ, ನಂತರ ಬಸ್ ನಾವು ಬಿಡಿಸುತ್ತೇವೆಂದು ಸದಸ್ಯ ದುರುಗಮ್ಮ ಸಭೆ ಗಮನಕ್ಕೆ ತಂದರು.
ಅಂಗನವಾಡಿ ಕಾರ್ಯಕರ್ತೆಯರು ಶೇಂಗಾ, ಹೆಸರು ಕಾಳು, ಬೆಲ್ಲ ಮಾರಾಟ ಮಾಡುತ್ತಾರೆ. ಸಿಡಿಪಿಒ ಅಧಿಕಾರಿ ಭೇಟಿ ನೀಡಿ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಾವಿತ್ರಮ್ಮ ಪ್ರಶ್ನಿಸಿದಾಗ, ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದೇವೆ. ಮಾರಾಟ ಮಾಡಿರುವ ಪ್ರಕರಣಗಳು ಕಂಡು ಬಂದಿಲ್ಲವೆಂದು ಸಭೆಗೆ ರಾಮನಗೌಡ ತಿಳಿಸಿದರು.
ಬಸವ ವಸತಿ ಮನೆಗಳು ಅಸಮರ್ಪಕವಾಗಿರುವುದನ್ನು ಸರಿಪಡಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಆದ್ದರಿಂದ ಫೆ. 28 ಕೊನೆ ದಿನಾಂಕವಾಗಿದ್ದು, ಶೀಘ್ರದಲ್ಲೆ ವರದಿ ಸಿದ್ಧಪಡಿಸಿ ಸಮಸ್ಯೆ ಬಗೆಹರಿಸಬೇಕೆಂದು ತಾಪಂ ಇಒ ರಂಗಪ್ಪ ಸಭೆಗೆ ತಿಳಿಸಿದರು. ದೇವಗೊಂಡನಹಳ್ಳಿ ಕಾರ್ಯದರ್ಶಿ ಜಗದೀಶ ವರ್ಗಾವಣೆ ಪ್ರಸ್ತಾಪವಾಗಿದ್ದು, ಸಭೆಯ ಎಲ್ಲ ಸದಸ್ಯರು ವರ್ಗಾವಣೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಸಭೆ ಆರಂಭಕ್ಕೂ ಮುನ್ನ ಬುಧವಾರ ರಾತ್ರಿ ನಿಧನರಾದ ಮಾಜಿ ಶಾಸಕ ಟಿ. ಸೋಮಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು.