ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರ್ಯಾಗಿಂಗ್ ತಡೆಗೆ ಅಫಿಡವಿಟ್ ಅಸ್ತ್ರ

Mainashree
Updated On : 7 Feb 2014, 10:17 am

ಬಳ್ಳಾರಿ: ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಕಂಡುಬರುತ್ತಿದ್ದ ರ್ಯಾಗಿಂಗ್ ಸಂಸ್ಕೃತಿಗೆ ಸಂಪೂರ್ಣ ಬ್ರೇಕ್ ಹಾಕಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತನ್ನ ಪ್ರಯತ್ನ ಆರಂಭಿಸಿದ್ದು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಅಫಿಡವಿಟ್ ಪಡೆಯುವ ನೂತನ ಯೋಜನೆ ರೂಪಿಸಿದೆ.
ಉನ್ನತ ಶಿಕ್ಷಣ ಪಡೆಯವ ವಿದ್ಯಾರ್ಥಿಗಳಿಗೆ ಅದರಲ್ಲೂ ಮಹಾನಗರಗಳಲ್ಲಿ ಎಂಜಿನಿಯರಿಂಗ್ ಸೇರಿದಂತೆ ದೊಡ್ಡ ದೊಡ್ಡ ಕಾಲೇಜುಗಳಲ್ಲಿ ಕೆಲ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿ ಅದರಿಂದ ಸಂತೋಷಪಡುವ ಮನಸ್ಸುಗಳಿರುತ್ತವೆ. ಇಂತಹ ಮನಸ್ಸುಗಳಿಗೆ ಕಡಿವಾಣ ಹಾಕಲು ಹಾಗೂ ಕಾಲೇಜು ಕ್ಯಾಂಪಸ್‌ನಲ್ಲಿ ರ್ಯಾಗಿಂಗ್ ತಡೆಯಲು ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಪೋಷಕರಿಂದ ರ್ಯಾಗಿಂಗ್ ಮಾಡುವುದಿಲ್ಲವೆಂದು ಅಫಿಡವಿಟ್ ಸಲ್ಲಿಸಬೇಕೆಂಬುದನ್ನು ಕಡ್ಡಾಯ ಮಾಡಿದೆ.
ಇದೀಗ ಬಳ್ಳಾರಿಯ ಎರಡು ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅಫಿಡವಿಟ್ ನೀಡಿದ್ದು, ಆ ಮೂಲಕ ರ್ಯಾಗಿಂಗ್‌ಗೆ ಕಡಿವಾಣ ಹಾಕುವ ಪ್ರಯತ್ನ ಸಾಗಿದೆ.
ವಿವಿಯಿಂದ ಎಚ್ಚರಿಕೆ: ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಎನ್ನುವುದು ಫ್ಯಾಷನ್ ಇದ್ದಂತೆ. ಗ್ರಾಮೀಣ ಪ್ರದೇಶದಿಂದ ನಗರ, ಮಹಾನಗರಗಳಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಶಾಕ್ ಹೆಚ್ಚಾಗಿರುತ್ತದೆ. ಇದರಿಂದಾಗಿ ಕೆಲ ವಿದ್ಯಾರ್ಥಿಗಳು ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಕಾಲೇಜಿನಲ್ಲೆ ಹುಡುಗಿಯರನ್ನು ಚುಡಾಯಿಸಿ ಮಜಾ ತೆಗೆದುಕೊಳ್ಳುವ ಮನಸ್ಥಿತಿಯ ಹುಡುಗರಿಗೆ ಇದೀಗ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ರ್ಯಾಗಿಂಗ್ ಮಾಡುವುದಿಲ್ಲ ಎಂದು ಅಫಿಡವಿಟನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ತೆಗೆದುಕೊಳ್ಳುವ ವ್ಯವಸ್ಥೆ ಮಾಡಿದೆ. ಆ ಮೂಲಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಯುತ್ತಿದ್ದ ರ್ಯಾಗಿಂಗ್ ತಡೆಯುವ ಕೆಲಸಕ್ಕೆ ವಿವಿ ಮುಂದಾಗಿದೆ.
ಬಳ್ಳಾರಿಯಲ್ಲಿ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಬಿಐಟಿಎಂ) ಹಾಗೂ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸದ್ಯ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಬಿಐಟಿಎಂ ಕಾಲೇಜಿನಲ್ಲಿ 2,542 ಹಾಗೂ ರಾವ್ ಬಹದ್ದೂರ್ ಕಾಲೇಜಿನಲ್ಲಿ 2,600 ವಿದ್ಯಾರ್ಥಿಗಳಿಂದ ಈ ಅಫಿಡವಿಟ್ ಪಡೆಯಲಾಗಿದೆ. ಇನ್ನು ಕಾಲೇಜಿನಲ್ಲಿ ಪ್ರಾಚಾರ್ಯರ ನೇತೃತ್ವದಲ್ಲಿ ಆ್ಯಂಟಿ ರ್ಯಾಗಿಂಗ್ ಕಮಿಟಿ ನೇಮಕ ಮಾಡಿ ರ್ಯಾಗಿಂಗ್‌ಗೆ ಬ್ರೇಕ್ ಹಾಕಲಾಗುವುದು. ರ್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನು ಈ ಕಮಿಟಿಯು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುತ್ತದೆ.
ಏನಿದು ಅಫಿಡವಿಟ್ ವ್ಯವಸ್ಥೆ?: ಆಯಾ ಕಾಲೇಜು ವಿದ್ಯಾರ್ಥಿಗಳು ರು. 20 ಬಾಂಡ್ ಪೇಪರ್‌ನಲ್ಲಿ ವಿದ್ಯಾರ್ಥಿ ಹೆಸರು, ದಾಖಲಾತಿ ಸಂಖ್ಯೆ ಇದ್ದು, ನಾನು ಕಾಲೇಜಿನಲ್ಲಿ ರ್ಯಾಗಿಂಗ್ ಮಾಡುವುದಿಲ್ಲ, ರ್ಯಾಂಗಿಗ್ ಮಾಡಿದರೆ ಕಾಲೇಜಿನಿಂದ ಅಮಾನತು ಮಾಡಬಹುದು, ನನ್ನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದು, ದಂಡ ವಿಧಿಸಬಹುದು ಎಂಬ ಷರತ್ತುಗಳಿಗೆ ಬದ್ಧನಾಗಿರುತ್ತೇನೆ, ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಷನ್‌ನ ನಿಯಮಗಳಿಗೆ ಬದ್ಧವಾಗಿ ರ್ಯಾಗಿಂಗ್ ಮಾಡುವುದಿಲ್ಲ ಎಂದು ಈ ಪ್ರಮಾಣ ಪತ್ರದಲ್ಲಿ ಸಹಿಯೊಂದಿಗೆ ಬರೆದುಕೊಡುತ್ತಾನೆ. ಅದರಂತೆ ವಿದ್ಯಾರ್ಥಿಯ ಪೋಷಕರು ಕೂಡ ತಮ್ಮ ಮಗ ರ್ಯಾಗಿಂಗ್ ಮಾಡುವುದಿಲ್ಲ, ರ್ಯಾಗಿಂಗ್ ಮಾಡಿದರೆ ಕ್ರಮ ಕೈಗೊಳ್ಳಬಹುದು ಎಂಬ ವಿಷಯಗಳನ್ನು ಬರೆದು ರು. 20 ಬಾಂಡ್ ಪೇಪರ್‌ನಲ್ಲಿ ಪ್ರಮಾಣಪತ್ರವನ್ನು ದಾಖಲಾತಿ ಸಂದರ್ಭದಲ್ಲಿ ಕಾಲೇಜಿಗೆ ನೀಡುತ್ತಾರೆ. ಈ ಪ್ರಮಾಣಪತ್ರ ಎಂಜಿನಿಯರಿಂಗ್ ಪೂರ್ಣಗೊಳಿಸುವವರಿಗೆ ಕಾಲೇಜಿನಲ್ಲಿರುತ್ತದೆ.
ಈ ಮೊದಲು ರ್ಯಾಗಿಂಗ್ ಮಾಡದಿರುವಂತೆ ಮೌಖಿಕವಾಗಿ ಕಾಲೇಜುಗಳಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ತಿಳಿಸುತ್ತಿದ್ದರು. ಆದರೆ ಅದನ್ನು ತಡೆಯುವುದು ಕಷ್ಟವಾಗಿತ್ತು, ಇಂತಹ ಆದೇಶಕ್ಕೆ ಮತ್ತು ರ್ಯಾಗಿಂಗ್ ತಡೆಯುವುದಕ್ಕೆ ಇದೀಗ ಕಾನೂನಿನ ಟಚ್ ನೀಡಿದಂತಾಗಿದೆ. ಇದೀಗ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಭಯ ಹುಟ್ಟಲು ಇದು ಕಾರಣವಾಗಿ. ರ್ಯಾಗಿಂಗ್ ಮಾಡುವುದಕ್ಕೆ ಮನಸ್ಸು ಮಾಡದಂತೆ ಆಗಿದೆ. ರ್ಯಾಗಿಂಗ್ ಮಾಡಿದರೆ ಕಾಲೇಜಿನಿಂದ ಅಮಾನತಿನ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ರ್ಯಾಗಿಂಗ್ ಭೂತ ಕಡಿಮೆಯಾಗುವ ಮೂಲಕ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.
ಬಿಐಟಿಎಂ ಕಾಲೇಜ್ ನಿರ್ದೇಶಕ ಯಶ್ವಂತ್ ಭೂಪಾಲ್ ಮಾತನಾಡಿ, ಅಫಿಡವಿಟ್ ವ್ಯವಸ್ಥೆಯಿಂದಾಗಿ ಕಾಲೇಜುಗಳಲ್ಲಿ ರ್ಯಾಗಿಂಗ್ ಸಾಕಷ್ಟು ಕಡಿಮೆಯಾಗಿದೆ. ಹುಡುಗರಲ್ಲಿ ಇದು ಭಯ ಹುಟ್ಟಿಸಿದ್ದು, ರ್ಯಾಗಿಂಗ್ ಇಲ್ಲವಾಗಿದೆ ಎನ್ನುತ್ತಾರೆ.

ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement