ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಾತ್ರೋತ್ಸವ: ಉತ್ತಮ ಕಾರ್ಯ ನಿರ್ವಹಿಸಿ

Vishwanath S
Updated On : 8 Feb 2014, 12:42 pm

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಫೆ. 7
ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಫೆ. 24ರ ಸೋಮವಾರ ಅದ್ಧೂರಿಯಿಂದ ಜರುಗಲಿದ್ದು, ರಥೋತ್ಸವದ ಯಶಸ್ವಿಗೆ ತಾಲೂಕು ಆಡಳಿತ ನಿರ್ವಹಿಸುವ ಜವಾಬ್ದಾರಿಗಳನ್ನು ಅಧಿಕಾರಿಗಳು ಉತ್ತಮವಾಗಿ ನಿರ್ವಹಿಸಬೇಕು. ಈ ಕಾರ್ಯದಿಂದ ವಿಮುಖರಾದರೆ ಸೂಕ್ತ ಕ್ರಮ ಜರುಗಿಸಲು ತಹಸೀಲ್ದಾರ್‌ಗೆ ಶಿಫಾರಸು ಮಾಡುವೆ ಎಂದು ಶಾಸಕ ಎಸ್. ಭೀಮಾನಾಯ್ಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಇಲ್ಲಿನ ಹಿರೇಮಠದ ಮುಂಭಾಗದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಧಾರ್ಮಿಕ ದತ್ತಿ ಮತ್ತು ಉಂಬಳಿ ಇಲಾಖೆ ವತಿಯಿಂದ ಶ್ರೀಗುರು ಬಸವೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಜಾತ್ರಾ ಮಹೋತ್ಸವ, ರಥೋತ್ಸವ ಸಂದರ್ಭದಲ್ಲಿ ಮತ್ತು ಪೂರ್ವವಾಗಿ ಕೊಟ್ಟೂರು ಪಟ್ಟಣವನ್ನು ಸ್ವಚ್ಛವಾಗಿಡಲು ಗಮನಹರಿಸಬೇಕು ಎಂದು ತಿಳಿಸಿದರು.
ಸಭೆಯಿಂದ ಹೊರಕ್ಕೆ: ಪೂರ್ವಸಿದ್ಧಾತಾ ಸಭೆಗೆ ಹಾಜರಿರಬೇಕೆಂದು ತಿಳಿವಳಿಕೆ ಪತ್ರ ರವಾನಿಸಿದ್ದರೂ ಜೆಸ್ಕಾಂನ ಎಇಇ ಸಭೆಗೆ ಆಗಮಿಸದೆ ಸ್ಥಳೀಯ ಶಾಖಾಧಿಕಾರಿ ಶರಣಪ್ಪ ಆಗಮಿಸಿದ್ದನ್ನು ತೀವ್ರವಾಗಿ ಆಕ್ಷೇಪಿಸಿದ ಶಾಸಕ ಭೀಮಾನಾಯ್ಕ, ಸಭೆಯಿಂದ ಹೊರ ಹೋಗುವಂತೆ ಸೂಚಿಸಿ, ಎಇಇ ಅವರನ್ನು ಅರ್ಧಗಂಟೆಯೊಳಗೆ ಸಭೆಗೆ ಕರೆಯಿಸುವಂತೆ ತಾಕೀತು ಮಾಡಿದರು. ಶಾಸಕರ ಎಚ್ಚರಿಕೆ ಮನಗಂಡ ಶಾಖಾಧಿಕಾರಿ ಕೂಡಲೆ ಎಇಇ ಉಮಾಶಂಕರ ಅವರನ್ನು ಸಭೆಗೆ ಕರೆಯಿಸಿದರು. ನಂತರ ಫೆ. 22ರಿಂದ ಮಾರ್ಚ್ 1ರ ವರೆಗೆ ಕೊಟ್ಟೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ 24 ತಾಸು ವಿದ್ಯುತ್ ಸರಬರಾಜು ಮಾಡಬೇಕು ಎಂದು ತಾಕೀತು ಮಾಡಿದರು.
ದರ ಹೆಚ್ಚಳ: ಕೊಟ್ಟೂರು ಜಾತ್ರಾ ಮಹೋತ್ಸವಕ್ಕೆ ಹೊಸಪೇಟೆಯ ಈಶಾನ್ಯ ಸಾರಿಗೆ ಸಂಸ್ಥೆ, ದಾವಣಗೆರೆಯ ಕೆಎಸ್‌ಆರ್‌ಟಿಸಿಯ 100ಕ್ಕೂ ಅಧಿಕ ಬಸ್ಸುಗಳನ್ನು ಭಕ್ತರ ಸೇವೆಗೆ ಕಳುಹಿಸಿಕೊಡಲು ಈಗಾಗಲೆ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಸಭೆಗೆ ತಿಳಿಸಿದರು. ಆಗ ಮಾತನಾಡಿದ ತಹಸೀಲ್ದಾರ್ ನಿತೀಶ್ ಪಾಟೀಲ್, ಜಾತ್ರೆಗೆಂದೆ ಓಡಿಸುವ ವಾಹನಗಳ ಪ್ರಯಾಣಿಕರ ದರವನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಸದೆ ಕೇವಲ ಶೇ. 10ರ ಪ್ರಮಾಣದಲ್ಲಿ ಟಿಕೆಟ್ ದರ ನಿಗದಿ ಮಾಡುವಂತೆ ಸೂಚಿಸಿದರು.
ಹೆಲಿಕಾಪ್ಟರ್ ಬಳಕೆ ಸಾಧ್ಯತೆ: ಈ ಬಾರಿ ರಥೋತ್ಸವ ಸಾಗುವ ಫೆ. 24ರಂದು ರಥದ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡುವ ಕಾರ್ಯ ಕೈಗೊಳ್ಳಬೇಕು ಎಂದು ಧರ್ಮಕರ್ತ ಎ.ಎಂ.ಬಿ. ಕೊಟ್ರಯ್ಯ ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯಿಸಿದ ಶಾಸಕ ಭೀಮಾನಾಯ್ಕ, ತಹಸೀಲ್ದಾರ್ ನಿತೀಶ್ ಪಾಟೀಲ್ ಈ ಸಂಬಂಧ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟವರೊಂದಿಗೆ ಸಂಪರ್ಕ ಬೆಳೆಸಿ ಹೆಲಿಕಾಪ್ಟರ್ ಬಳಸುವ ಪ್ರಯತ್ನಕ್ಕೆ ಮುಂದಾಗಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಕ್ರಿಯಾಮೂರ್ತಿ ಶಂಕರಸ್ವಾಮೀಜಿ, ಎಂ.ಎಂ.ಜೆ. ಹರ್ಷವರ್ಧನ್, ಪಪಂ ಅಧ್ಯಕ್ಷೆ ಅನಸೂಯಾ ಸೆರೆಗಾರ, ಉಪಾಧ್ಯಕ್ಷ ಎಸ್. ಗುರುಶಾಂತಪ್ಪ, ಸದಸ್ಯರಾದ ಸುಮಾ ಮಂಜುನಾಥಗೌಡ, ಬಿ.ಎಸ್. ವೀರೇಶ್, ಬುಗ್ಗಳ್ಳಿ ಕೊಟ್ರೇಶ್, ಕರಡಿ ಕೊಟ್ರೇಶ್, ಸಹ ಧರ್ಮಕರ್ತ ಸಿ.ಎಚ್.ಎಂ. ಗಂಗಾಧರ, ದೇವಸ್ಥಾನದ ಸಿಇಒ ಅರವಿಂದ ಸುತಗುಂಡಿ, ಎಂ.ಎಂ.ಜೆ. ಸತ್ಯಪ್ರಕಾಶ್, ಡಿ. ಭುವನೇಶ್ವರ, ಅನಿಲ್ ಹೊಸಮನಿ, ನಾಗಪ್ಪ, ಗುರುರಾಜಗೌಡ, ಸಕ್ರಿಗೌಡ, ಕೆಂಪಳ್ಳಿ ಗುರುಸಿದ್ದನಗೌಡ ಇದ್ದರು. ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಮಹೇಶ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಈ ಬಾರಿ ರಥೋತ್ಸವಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡುವ ಕುರಿತು ತಹಸೀಲ್ದಾರ್ ನಿತೀಶ್ ಪಾಟೀಲ್ ಅವರು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟವರೊಂದಿಗೆ ಸಂಪರ್ಕ ಬೆಳೆಸಿ ಹೆಲಿಕಾಪ್ಟರ್ ಬಳಸಲು ಮುಂದಾಗಲು ಪ್ರಯತ್ನಿಸುತ್ತೇವೆ.
- ಎಸ್. ಭೀಮಾನಾಯ್ಕ, ಹಗರಿಬೊಮ್ಮನಹಳ್ಳಿ ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement