ನಮೋ ಟೀ ಸ್ಟಾಲ್‌ಗೆ ಚಾಲನೆ: ಟೀ ಉಚಿತ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 7
ನಗರದ ಟೀ ಪ್ರಿಯರಿಗೊಂದು ಸಿಹಿ ಸುದ್ದಿ ಇದೆ. ನೀವು ಇಲ್ಲಿಗೆ ಬಂದು ಎಷ್ಟೆ ಕಪ್ ಟೀ ಕುಡಿದರೂ ಅದಕ್ಕೆ ಹಣ ಕೊಡಬೇಕಿಲ್ಲ. ಸಂಪೂರ್ಣ ಉಚಿತವಾಗಿ ಟೀ ಸವಿಯಬಹುದು.
ಹೌದು, ಈ ಆಫರ್‌ನ್ನು ಸಾರ್ವಜನಿಕರಿಗೆ ನೀಡಿರುವುದ ಬಳ್ಳಾರಿಯ ಬಿಜೆಪಿ ಯುವ ಮೋರ್ಚಾ ಘಟಕ.
ಅದು ಹೇಗೆ ಅಂತಿರಾ? ನಮೋ ಟೀ ಸ್ಟಾಲ್ ಆರಂಭಿಸುವ ಮೂಲಕ ಬಳ್ಳಾರಿ ನಗರದಲ್ಲಿ ಶುಕ್ರವಾರ ಜನಸಾಮಾನ್ಯರಿಗೆ ಉಚಿತವಾಗಿ ಟೀ ಹಂಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಇದಕ್ಕೆಲ್ಲ ಕಾರಣ ದೇಶದಲ್ಲಿ ಟೀ ಮಾರುವ ವ್ಯಕ್ತಿಯನ್ನು ಬಿಜೆಪಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುತ್ತದೆ ಎಂದು ತೋರಿಸುವ ಕೆಲಸವನ್ನು ಮಾಡಲು ಹೊರಟಿದೆ. ಆ ಮೂಲಕ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಭರ್ಜರಿ ತಯಾರಿಗೆ ಬಿಜೆಪಿ ಮುಂದಾಗಿದೆ.
ಟೀ ಸ್ಟಾಲ್‌ಗೆ ಚಾಲನೆ: ಬಳ್ಳಾರಿಯ ದುರ್ಗಮ್ಮ ದೇವಸ್ಥಾನದ ಸಮೀಪದ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಏರ್ಪಡಿಸಿದ್ದ ನಮೋ ಟೀ ಸ್ಟಾಲ್‌ಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನೇಮಿರಾಜ್ ನಾಯ್ಕ ಜನತೆಗೆ ಟೀ ಹಂಚುವ ಮೂಲಕ ಸ್ಟಾಲ್ ಉದ್ಘಾಟಿಸಿ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ಯಾರಾದರೂ ಗೆಲವು ಸಾಧಿಸುತ್ತಾರೆ, ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ನಿರ್ಣಯದಂತೆ ಬಳ್ಳಾರಿ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡಲಾಗುತ್ತದೆ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು.
ಪಿಎಂ ಮಟ್ಟಕ್ಕೂ ಬೆಳೆಯಬಹುದು: ನರೇಂದ್ರ ಮೋದಿ ಅವರು ಟೀ ಮಾರಿ ಜೀವನ ಸಾಗಿಸುತ್ತಿದ್ದರು ಎಂದು ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಮೋದಿ ಅವರು ಟೀ ಮಾರುವ ಮೂಲಕ ಜೀವನ ಸಾಗಿಸಿ ಇದೀಗ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಮೋದಿ ಅವರು ಸಾಮಾನ್ಯರಾಗಿ ಹೇಗೆ ಬೆಳೆದರು ಎಂಬುದಕ್ಕೆ ಅವರೆ ಸಾಕ್ಷಿ. ಗುಜರಾತಿನ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ, ನಂತರ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾಗಿರುವುದು ಬಿಜೆಪಿಯಲ್ಲಿ ಎಲ್ಲರೂ ಸಿಎಂ ಮಟ್ಟಕ್ಕೂ, ಪಿಎಂ ಮಟ್ಟಕ್ಕೂ ಬೆಳೆಯಬಹುದು ಎಂಬುದನ್ನು ತಿಳಿಸುತ್ತದೆ ಎಂದರು.
ಮಾಜಿ ಜಿಲ್ಲಾಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ ಮಾತನಾಡಿ, ದೇಶ ಮಾರುವವರನ್ನು ಗೆಲ್ಲಿಸಬಾರದು, ಟೀ ಮಾರುವವರನ್ನು ಗೆಲ್ಲಿಸಬೇಕು. ಜನರು ಚಹಾ ಕುಡಿಯುತ್ತ ದೇಶದ ಕುರಿತು ಚರ್ಚೆ ಮಾಡಬೇಕು, ಮೋದಿ ಅವರು ಮುಖ್ಯಮಂತ್ರಿಯಾಗಿ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ? ರಾಜ್ಯದಲ್ಲಿ 10-11 ತಿಂಗಳಿಂದ ಕಾಂಗ್ರೆಸ್ ಸರ್ಕಾರದ ಆಡಳಿತದ ವಿಫಲತೆಗಳು, ಯಾವುದೇ ಪೂರ್ವ ನಿಯೋಜನೆ ಇಲ್ಲದೆ ಯೋಜನೆಗಳು ಯಾವ ರೀತಿ ವಿಫಲತೆ ಕಂಡಿವೆ ಎಂಬ ಬಗ್ಗೆ ನಮೋ ಟೀ ಸ್ಟಾಲ್‌ನಲ್ಲಿ ಟೀ ಕುಡಿಯುತ್ತ ಸಾರ್ವಜನಿಕರು ಚರ್ಚೆ ಮಾಡಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಕೆ.ಎ. ರಾಮಲಿಂಗಪ್ಪ ಮಾತನಾಡಿ, ಟೀ ಮಾರಾಟ ಮಾಡುತ್ತಿದ್ದ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ, ಇದೀಗ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದಾರೆ ಎಂಬುದಕ್ಕೆ ಪ್ರತಿಯೊಬ್ಬರೂ ಸಂತೋಷ ಪಡಬೇಕು. ಇಂತಹ ವ್ಯಕ್ತಿ ಮುಂದಿನ ಪ್ರಧಾನಿಯಾಗಲಿದ್ದಾರೆ. ಪ್ರತಿ ವಾರ್ಡ್‌ಗಳಲ್ಲಿ ಒಂದೊಂದು ನಮೋ ಟೀ ಸ್ಟಾಲ್ ಆರಂಭಿಸಲಾಗುತ್ತದೆ ಎಂದರು.
ಮುಖಂಡರಾದ ಸಂಜಯ್, ಸುಧೀರ್‌ಕುಮಾರ್, ಅನಿಲ್ ನಾಯ್ಡು, ರಾಮಚಂದ್ರಯ್ಯ, ಶಿವು, ಮಂಜಮ್ಮ, ಶರಣಮ್ಮ, ಸುಮಾರೆಡ್ಡಿ, ಶಿವಕೃಷ್ಣಮ್ಮ, ದತ್ತಾತ್ರೇಯ ರೆಡ್ಡಿ, ಕುಮಾರ ರೆಡ್ಡಿ, ಗಿರಿಧರ್, ಜಯಗೋಪಲ್, ಭೀಮ್‌ದಾಸ್, ಹಂಪೇರ್ ಹಾಲೇಶ್ವರಗೌಡ ಸೇರಿದಂತೆ ಇತರರು ಇದ್ದರು.
ನರೇಂದ್ರ ಮೋದಿ ಟೀ ಮಾರಿ ಜೀವನ ಸಾಗಿಸುತ್ತಿದ್ದರು ಎಂದು ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಮೋದಿ ಟೀ ಮಾರುವ ಮೂಲಕ ಜೀವನ ಸಾಗಿಸಿ ಇದೀಗ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಮೋದಿ ಸಾಮಾನ್ಯರಾಗಿ ಹೇಗೆ ಬೆಳೆದರು ಎಂಬುದಕ್ಕೆ ಅವರೇ ಸಾಕ್ಷಿ. ಗುಜರಾತಿನ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ, ನಂತರ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾಗಿರುವುದು ಬಿಜೆಪಿಯಲ್ಲಿ ಎಲ್ಲರೂ ಸಿಎಂ ಮಟ್ಟಕ್ಕೂ, ಪಿಎಂ ಮಟ್ಟಕ್ಕೂ ಬೆಳೆಯಬಹುದೆಂಬುದನ್ನು ತಿಳಿಸುತ್ತದೆ.
- ನೇಮಿರಾಜ್ ನಾಯ್ಕ