ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಾಗರಿಕರೆಲ್ಲ ಕಾನೂನು ಅರಿವು ಹೊಂದಿ

Vishwanath S
Updated On : 8 Feb 2014, 12:42 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 7
ಕೈಗಾರಿಕೆ ಅಥವಾ ಯಾವುದೆ ಸಾರ್ವಜನಿಕ ಉದ್ದೇಶಗಳಿಗೆ ಭೂಸ್ವಾಧೀನ ಪಡಿಸಿಕೊಳ್ಳುವ ಭೂಸ್ವಾಧೀನ ಕಾಯ್ದೆಯಲ್ಲಿ ಸಾಕಷ್ಟು ತಿದ್ದುಪಡಿಗಳಾಗಿವೆ. ಈ ಬದಲಾವಣೆಗಳ ಕುರಿತು ನಾಗರಿಕರೆಲ್ಲರೂ ಕಾನೂನಿನ ಅರಿವು ಹೊಂದಬೇಕಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ತಿಳಿಸಿದರು.
ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ ಹಾಗೂ ಕುಡಿತಿನಿ ಭೂ ಸಂತ್ರಸ್ತರ ಹೋರಾಟ ಸಮಿತಿಗಳ ಸಹಯೋಗದಲ್ಲಿ ತಾಲೂಕಿನ ಕುಡಿತಿನಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಭೂಸ್ವಾಧೀನ ಕಾಯ್ದೆ 2013 ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಿವು ಅತ್ಯಗತ್ಯ: ಭೂಸ್ವಾಧೀನ ಕಾಯ್ದೆಯ ನೂತನ ತಿದ್ದುಪಡಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪಾರದರ್ಶಕ ಹಾಗೂ ಭೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಉದ್ದೇಶ ವ್ಯಕ್ತಪಡಿಸಲಾಗಿದೆ. ಈ ಕಾನೂನು ತಿದ್ದುಪಡಿ ಕುರಿತು ಅದರ ಲಾಭ ಪಡೆಯಲು ಕಾನೂನಿನ ಅರಿವು ಅತ್ಯಗತ್ಯ. ತಿದ್ದುಪಡಿಯಾಗಿರುವ ನೂತನ ಕಾನೂನಿನಲ್ಲಿ ರೈತರಿಗೆ ತಾವು ಕಳೆದುಕೊಂಡ ಜಮೀನಿನ ಮಾರುಕಟ್ಟೆ ಬೆಲೆಯ ದುಪ್ಪಟ್ಟು ಬೆಲೆ ದೊರೆಯಲಿದ್ದು, ಈಗಾಗಲೆ ವಶಪಡಿಸಿಕೊಂಡಿರುವ ಭೂಮಿಗಳಿಗೆ ಈ ನೂತನ ದರ ಅನ್ವಯವಾಗದೆ ಇರಬಹುದು. ಆದರೆ ಮಾನವೀಯತೆ ನೆಲೆಯ ಆಧಾರದ ಮೇಲೆ ಮತ್ತು ಅಭಿವೃದ್ಧಿಯ ವಿಷಯಗಳಲ್ಲಿ ಘೋಷಿತ ಪರಿಹಾರಕ್ಕಿಂತ ಹೆಚ್ಚಿನ ಪರಿಹಾರವನ್ನು ಭೂ ಸಂತ್ರಸ್ತರು ನ್ಯಾಯಬದ್ಧ ಹೋರಾಟದಿಂದ ಪಡೆಯಬಹುದು ಎಂದು ವಿವರಿಸಿದರು.
ಆತಂಕಕಾರಿ ವಿಷಯ: ಪ್ರಸ್ತುತ ಕೃಷಿಗೆ ಮಹತ್ವ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ರೈತರ ಮತ್ತು ಕೃಷಿ ಕಾರ್ಮಿಕರ ಆಲೋಚನೆಗಳಲ್ಲಿಯೂ ಬದಲಾವಣೆ ಕಂಡುಬರುತ್ತಿವೆ. ಇದು ಆತಂಕಕಾರಿ ವಿಷಯ. ಕೃಷಿ ಕ್ಷೇತ್ರ ಮಾನವ ಸಂಪನ್ಮೂಲದ ಕೊರತೆ ಎದುರಿಸುತ್ತಿದ್ದು, ಎಲ್ಲರಿಗೂ ಅನ್ನ ಕೊಡುವ ಈ ಕ್ಷೇತ್ರ ಯಾಂತ್ರೀಕರಣಗೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ನಮ್ಮನ್ನು ಪೊರೆದು ಸಲಹುವ ಭೂಮಿಯಿಂದ ದೂರವಾಗಬೇಡಿರಿ ಎಂದು ರೈತರಲ್ಲಿ ಮನವಿ ಮಾಡಿದರು.
ಅವಕಾಶವಿದೆ: ಹಿರಿಯ ವಕೀಲ ಜೆ. ಬಸವರಾಜ್ ಮಾತನಾಡಿ, ಭೂಸ್ವಾಧೀನ ಕಾಯ್ದೆಯ ತಿದ್ದುಪಡಿ ಹಲವಾರು ಉತ್ತಮ ಅಂಶಗಳನ್ನು ಹೊಂದಿದ್ದು, ಬ್ರಿಟಿಷ್ ಆಡಳಿತದ ಅವಧಿಯಲ್ಲಿ ರೂಪುಗೊಂಡ ಕಾನೂನು ಇಲ್ಲಿಯವರೆಗೂ ಅಸ್ತಿತ್ವದಲ್ಲಿತ್ತು. ಆದರೆ ಸಮಕಾಲೀನ ಜಗತ್ತಿನ ಆಗು ಹೋಗುಗಳಿಗೆ ಸ್ಪಂದಿಸುವತ್ತ ಸೂಕ್ತ ಬದಲಾವಣೆಗಳನ್ನು ಭೂಸ್ವಾಧೀನ ಕಾಯ್ದೆ 2013ರಲ್ಲಿ ಮಾಡಲಾಗಿದೆ. ಈಗಾಗಲೆ ಭೂ ಸ್ವಾಧೀನವಾದ ಭೂಮಿಗೆ ಪೂರ್ವಾನ್ವಯವಾಗುವಂತೆ ನೂತನ ಕಾನೂನು ತಿದ್ದುಪಡಿಯ ಅಡಿ ಜಮೀನುಗಳಿಗೆ ದರ ಪಡೆಯಲು ಅವಕಾಶವಿಲ್ಲ. ಆದರೆ ರಾಜ್ಯ ಸರ್ಕಾರ ಈ ಕಾನೂನಿನ ಜಾರಿ ವಿಷಯದಲ್ಲಿ ನಿಯಮ ನಿಬಂಧನೆಗಳನ್ನು ರೂಪಿಸಬೇಕಿದ್ದು, ಕಾನೂನಿನ ವ್ಯಾಪ್ತಿಯ ಹೊರಗಡೆಗೂ ಭೂ ಸಂತ್ರಸ್ತರು ಹೆಚ್ಚಿನ ಮೊತ್ತದ ಪರಿಹಾರ ಪಡೆಯಲು ಅವಕಾಶವಿದೆ. ಈ ನಿಟ್ಟಿನಲ್ಲಿ ಕಾನೂನಿನ ನೆರವು ಮತ್ತು ಅರಿವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಹೊಸ ಕ್ರಾಂತಿ: ತಹಶೀಲ್ದಾರ್ ಶರಣಪ್ಪ ಮಾತನಾಡಿ, ಭೂ ಸಂತ್ರಸ್ತರಿಗೆ ಸೂಕ್ತ ಪರಿಹಾರ, ಭೂಸ್ವಾಧೀನ ಕಾಯ್ದೆಯ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಹಾಗೂ ಭೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಈ ತಿದ್ದುಪಡಿ ಹೊಸ ಕ್ರಾಂತಿಯನ್ನೆ ಮಾಡಲಿದೆ. ಈ ನೂತನ ತಿದ್ದುಪಡಿಯ ಭೂಸ್ವಾಧೀನ ಕಾಯ್ದೆ-2013ರಿಂದ ಭೂ ಸಂತ್ರಸ್ತರು ಕೋರ್ಟ್ ಮೆಟ್ಟಿಲು ಹತ್ತಬೇಕಾದ ಸಂದರ್ಭಗಳು ಕಡಿಮೆಯಾಗಲಿವೆ. ರೈತನ ಭೂಮಿಯನ್ನು ಸೂಕ್ತ ಪರಿಹಾರ ನೀಡದೆ ಕಿತ್ತುಕೊಂಡರೆ ಅವನ ಬದುಕುವ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ಈ ದಿಸೆಯಲ್ಲಿ ಭೂಸ್ವಾಧೀನ ಕಾಯ್ದೆ-2013ರಿಂದ ಭೂ ಸಂತ್ರಸ್ತರಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.
ವಿಚಾರ ಸಂಕಿರಣದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಚ್. ಶಾಂತಾ, ವಕೀಲರ ಸಂಘದ ಕಾರ್ಯದರ್ಶಿ ಡಿ. ರಾಮಕೃಷ್ಣ, ಗ್ರಾಮೀಣ ಡಿವೈಎಸ್ಪಿ ರುದ್ರಮುನಿ, ಕುರುಗೋಡು ವಲಯದ ಸಿಪಿಐ ಲಕ್ಷ್ಮಿಕಾಂತಯ್ಯ, ಭೂ ಸಂತ್ರಸ್ತ ಹೋರಾಟ ಸಮಿತಿ ಕಾರ್ಯದರ್ಶಿ ಬಿ. ರವಿಪ್ರಕಾಶ್ ಇದ್ದರು.
ಸೂಕ್ತ ಸಮಯದಲ್ಲಿ ಕಾನೂನಿನ ಅರಿವು- ನೆರವು ಪಡೆಯದಿದ್ದಲ್ಲಿ ಲಾಭಕ್ಕಿಂತ ನಷ್ಟವೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಕಾನೂನಿನ ಅರಿವು ಹೊಂದುವುದು ಮಹತ್ವದ ವಿಷಯವಾಗಿದೆ.
- ಪಾಟೀಲ್ ಸಿದ್ದಾರೆಡ್ಡಿ, ವಕೀಲರ ಸಂಘದ ಅಧ್ಯಕ್ಷ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement