ನಾಳೆ ಕ್ಲಾಸಿಕ್ ಕಾರ್ಯಾಗಾರ
ಬಳ್ಳಾರಿ: ಧಾರವಾಡದ ದಿ ಕ್ಲಾಸಿಕ್ ಸ್ಟಡಿ ಸರ್ಕಲ್ ಸಂಸ್ಥೆಯು ಫೆ. 9ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ನಗರದ ರಾಘವ ಕಲಾ ಮಂದಿರದಲ್ಲಿ ಐಎಎಸ್, ಕೆಎಎಸ್ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಚಿತವಾಗಿ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಎಸ್.ಎಂ. ಪ್ರಶಾಂತ್, ರಾಘವೇಂದ್ರ ರಾಯರೆಡ್ಡಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐಎಎಸ್, ಕೆಎಎಸ್, ಬ್ಯಾಂಕ್ ಪರೀಕ್ಷೆಗಳು, ಪಿಡಿಒ, ಎಸ್ಡಿಎ, ಎಫ್ಡಿಎ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಈಗಾಗಲೆ ಉಚಿತ ಕಾರ್ಯಾಗಾರ ನಡೆಯುತ್ತಿದೆ. ಪರೀಕ್ಷಾ ತಯಾರಿಗೆ ಬೇಕಾಗುವ ಮಾರ್ಗದರ್ಶನ, ತಿಳಿವಳಿಕೆಗಳ ಕುರಿತು ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಅದೇ ರೀತಿ ಬಳ್ಳಾರಿಯಲ್ಲೂ ಫೆ. 9ರಂದು ರಾಘವ ಕಲಾ ಮಂದಿರದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಸುಮಾರು ಸಾವಿರ ವಿದ್ಯಾರ್ಥಿಗಳು ಕಾರ್ಯಾಗಾರಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ಅಂದು ಬೆಳಗ್ಗೆ 10ಕ್ಕೆ ಸ್ಪರ್ಧಾ ಸ್ಪೂರ್ತಿಯ ಪ್ರಧಾನ ಸಂಪಾದಕ ಲಕ್ಷ್ಮಣ ಉಪ್ಪಾರ, ಬಸವರಾಜ್, ಮಂಜುನಾಥ್, ಬಳ್ಳಾರಿಯ ತಹಸೀಲ್ದಾರ್ ಶರಣಪ್ಪ, ನಗರ ಡಿವೈಎಸ್ಪಿ ಮುರುಗಣ್ಣವರ್, ಕೊಪ್ಪಳದ ಕಂದಾಯ ಅಧಿಕಾರಿ ಅಮೀನ್ ಅಕ್ತರ್, ಮಂಜುನಾಥ್ ಉಳ್ಳಾಗಡ್ಡಿ, ಐ.ಜಿ. ಚೌಗ್ಲಾ ಸೇರಿದಂತೆ ಹಲವು ಪ್ರಮುಖರು ಕಾರ್ಯಾಗಾರದಲ್ಲಿ ಸೂಕ್ತ ಮಾಹಿತಿ, ಸಲಹೆ, ಮಾರ್ಗದರ್ಶನ ನೀಡುವರು. ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬುದ್ಧಿವಂತರು, ಜಾಣರಿದ್ದು ಅವರಿಗೆ ಸೂಕ್ತ ಮಾರ್ಗದರ್ಶನವಿಲ್ಲದೆ ತಮ್ಮ ಜೀವನವನ್ನು ಸೂಕ್ತವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತವರಿಗೆ ಈ ಕಾರ್ಯಾಗಾರ ಉಪಯುಕ್ತವಾಗಲಿದೆ. ವಿದ್ಯಾರ್ಥಿಗಳಿಗೆ ಅವಕಾಶ, ಮಾಹಿತಿ, ಮಾರ್ಗದರ್ಶನ ಲಭಿಸಿದಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಮರ್ಥರಿದ್ದಾರೆ ಎಂದರು.