ಇಂದು ವಾರ್ಷಿಕೋತ್ಸವ
ಬಳ್ಳಾರಿ: ಸ್ಥಳೀಯ ಶಾಂತಿ ಶಿಶು ವಿಹಾರ ಹಾಗೂ ವಿಜಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 58ನೇ ವಾರ್ಷಿಕೋತ್ಸವ ಕಾರ್ಯಕ್ರಮ ಫೆ. 9ರಂದು ಸಂಜೆ 5ಕ್ಕೆ ಜರುಗಲಿದೆ. ಕರ್ನಾಟಕ ರಾಜ್ಯ ಜನಶಕ್ತಿ ಸಂಘದ ರಾಜ್ಯಾಧ್ಯಕ್ಷ ವೈ. ಪ್ರತಾಪರೆಡ್ಡಿ ಕಾರ್ಯಕ್ರಮ ಉದ್ಘಾಟಿಸುವರು. ಶಿಕ್ಷಣ ತಜ್ಞ ಪ್ರಕಾಶ್ ವಿ. ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪಿ. ಹುಸೇನ್ ಸಾಹೇಬ್, ಡಾ. ಆಶಾರಾಣಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಶಾಲೆ ವಾರ್ಷಿಕೋತ್ಸವ
ಬಳ್ಳಾರಿ: ಸ್ಥಳೀಯ ಸ್ಫೂರ್ತಿ ಚಾರಿಟೆಬಲ್ ಟ್ರಸ್ಟ್ನ ಸ್ಫೂರ್ತಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಫೆ. 9ರಂದು ಸಂಜೆ 5.30ಕ್ಕೆ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಲಿದೆ. ಪರಿಸರವಾದಿ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಕಾರ್ಯಕ್ರಮ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಮಾಜಿ ಸಂಸದ ಐ.ಜಿ. ಸನದಿ ಪಾಲ್ಗೊಳ್ಳುವರು. ಸ್ಫೂರ್ತಿ ಚಾರಿಟೆಬಲ್ ಟ್ರಸ್ಟ್ನ ಕಾರ್ಯದರ್ಶಿ ಜೆ. ಮೈಬೂನ್ ಬೀ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಇಂದು ಸಾಂಸ್ಕೃತಿಕ ಸೌರಭ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಫೆ. 9ರಂದು ನಗರದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಏರ್ಪಡಿಸಿದೆ ಎಂದು ಸಹಾಯಕ ನಿರ್ದೇಶಕ ಬಿ. ನಾಗರಾಜ್ ತಿಳಿಸಿದ್ದಾರೆ. ಬಳ್ಳಾರಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಫೆಬ್ರವರಿ 9ರಂದು ಸಂಜೆ 6-30ಕ್ಕೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಳ್ಳಾರಿಯ ವಿಜಯ ಕಿಶೋರ್ ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಲಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಶುದ್ಧ ಕುಡಿವ ನೀರಿನ ಘಟಕ ಉದ್ಘಾಟನೆ
ಕೂಡ್ಲಿಗಿ: ಫ್ಲೋರೈಡ್ಯುಕ್ತ ಕುಡಿವ ನೀರು ಸೇವನೆಯಿಂದ ಜನತೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಅದಕ್ಕೆ ಶುದ್ಧ ಕುಡಿವ ನೀರು ಆರೋಗ್ಯಕ್ಕೆ ಉತ್ತಮ ಎಂದು ಜಿಪಂ ಸದಸ್ಯ ಕೆ.ಎಂ. ಶಶಿಧರ ತಿಳಿಸಿದರು.
ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿಯ ರಾಜ್ಯ ವಾಟರ್ ಲೈಫ್ ಇಂಡಿಯಾ ಆಶ್ರಯದಲ್ಲಿ ಕುಡಿವ ನೀರಿನ ಶುದ್ಧೀಕರಣ ಘಟಕ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಪ್ರಸನ್ನಕುಮಾರ್, ಪಿಡಿಒ ಎಚ್. ಬೋರಣ್ಣ, ಜೆಇ ಅಶೋಕ್, ವಾಟರ್ ಲೈಫ್ ಕಂಪನಿಯ ಮೃತ್ಯುಂಜಯ ಹಿರೇಮಠ, ಮುಖಂಡರಾದ ವಿಜಯಕುಮಾರ್, ಬುಡಗಟ್ಟಿ ಕೆ. ರಮೇಶ್, ಟಿ.ನಾಗರಾಜ, ಮೌಲಾಸಾಬ್ ಇತರರಿದ್ದರು.
ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಅಲಬೂರು, ನೆಲ್ಕುದ್ರಿ, ಕೊಗಳಿ ತಾಂಡಗಳಲ್ಲಿ ಶನಿವಾರ ಮಧ್ಯಾಹ್ನ ಸುಮಾರು ರು. 50 ಲಕ್ಷ ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್. ಭೀಮಾನಾಯ್ಕ ಭೂಮಿಪೂಜೆ ನೇರವೇರಿಸಿದರು. ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಸೇರಿದ ನಾಲ್ಕು ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೇರವೇರಿಸಿದ ಬಳಿಕ ನೆಲ್ಕುದ್ರಿ ಗ್ರಾಮದಲ್ಲಿ ಮಾತನಾಡಿದ ಶಾಸಕ ಎಸ್. ಭೀಮಾನಾಯ್ಕ, ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಮಂಜೂರಾಗಿದ್ದು, ಇನ್ನು ಮುಂದೆ ಕ್ಷೇತ್ರದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಭರದಿಂದ ಸಾಗಲಿದೆ ಎಂದರು. ಎಸ್ಇಪಿ ಹಾಗೂ ಟಿಎಸ್ಪಿ ಯೋಜನೆಯಡಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಂದಿದೆ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ,ಪಂಗಡದ ಜನರು ಅಧಿಕವಾಗಿ ವಾಸಿಸುತ್ತಿರುವ ಕೇರಿ, ತಾಂಡಾ, ಕಾಲೋನಿಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ ಎಂದರು. ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಖಂಡರಾದ ಕೊಗಳಿ ಮಂಜುನಾಥಗೌಡ, ಎಚ್.ಎಂ. ಚೋಳರಾಜ, ಉಡೇದ್ ಗುರುಬಸವರಾಜ, ಹಂಚಿನಮನಿ ಹನುಮಂತಪ್ಪ, ಬಂಗಾರಿ ಗಾಳಿರಾಜ, ಎಂಜೇಪ್ಪ, ವರದಾಪುರ ಕುಮಾರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹನಸಿ ದೇವರಾಜ, ಎಪಿಎಂಸಿ ಸದಸ್ಯ ಶಿವಕುಮಾರಗೌಡ ಬಿ. ದೇವೇಂದ್ರ, ತ್ಯಾವಣಿಗಿ ಕೊಟ್ರೇಶ, ಸೋಗಿ ಕೊಟ್ರೇಶ, ಕಲೋಇ ಎಇಇ ಗುರುಬಸಪ್ಪ, ಪಂರಾಇ ಎಇ ಈಶಪ್ಪ ಇತರರಿದ್ದರು.
ವಂಚನೆ: ಆರೋಪಿಗಳ ಬಂಧನ
ಬಳ್ಳಾರಿ: ಬಿಟಿಪಿಎಸ್ನಲ್ಲಿ ನೇಮಕಾತಿ ಮಾಡಿಸುತ್ತೇವೆ ಎಂದು ಹೇಳಿ ರು. 4.80 ಲಕ್ಷಗಳನ್ನು ನಾಲ್ಕು ಜನರಿಂದ ಪಡೆದು ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ನಾಲ್ಕು ಜನರಿಗೆ ನೀಡಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಕುಡಿತಿನಿ ಪೊಲೀಸರು ಬಂಧಿಸಿದ್ದಾರೆ. ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ಬಿಟಿಪಿಎಸ್ಗೆ ಹಾಗೂ ಸಾರ್ವಜನಿಕರಿಗೆ ವಂಚಿಸಲು ಮುಂದಾದವರು ಬಳ್ಳಾರಿಯ ಮಂಜುನಾಥ್ ಮತ್ತು ಸತ್ಯನಾರಾಯಣ ಇದೀಗ ಕಂಬಿ ಎಣಿಸುತ್ತಿದ್ದಾರೆ. ಇವರು ಬಿಟಿಪಿಎಸ್ನಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ನಾಲ್ವರಿಂದ ತಲಾ ರು. 1.20 ಲಕ್ಷ ನಗದು ತೆಗೆದುಕೊಂಡು ನಕಲಿ ನೇಮಕಾತಿ ಪತ್ರ ನೀಡಿದ್ದರು. ಹುಡುಗರು ನೇಮಕಾತಿ ಪತ್ರವನ್ನು ಬಿಟಿಪಿಎಸ್ಗೆ ನೀಡಿದ್ದರೂ, ಇದು ನಕಲಿ ನೇಮಕಾತಿ ಪತ್ರವೆಂದು ತಿಳಿದು ಬಿಟಿಪಿಎಸ್ನ ಅಧಿಕಾರಿಗಳು ಕುಡಿತಿನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಕುಡಿತಿನಿ ಪಿಎಸ್ಐ ವಾಸುಕುಮಾರ್ ತನಿಖೆ ನಡೆಸಿ, ಮಂಜುನಾಥ ಮತ್ತು ಸತ್ಯನಾರಾಯಣ ಎನ್ನುವ ಆರೋಪಿಗಳನ್ನು ಬಳ್ಳಾರಿಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಾಂಗಲ್ಯ ದೋಚಿ ಪರಾರಿ
ಬಳ್ಳಾರಿ: ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬಳ ಕತ್ತಿನಲ್ಲಿದ್ದ 100 ಗ್ರಾಮ್ನ ರು. 50 ಸಾವಿರ ಮೌಲ್ಯದ ಮಾಂಗಲ್ಯ ಸರವನ್ನು ಬೈಕ್ನಲ್ಲಿ ಬಂದ ಕಳ್ಳರು ಕಿತ್ತುಕೊಂಡು ಹೋಗಿರುವ ಘಟನೆ ನಗರದ ರಾಘವೇಂದ್ರ ಕಾಲೋನಿಯ 1ನೇ ಹಂತದಲ್ಲಿ ಶನಿವಾರ ಬೆಳಗ್ಗೆ 7.20ರ ಸುಮಾರಿಗೆ ನಡೆದಿದೆ. ರಾಘವೇಂದ್ರ ಕಾಲೋನಿಯ ಶಾರದಾ (64) ಅವರ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಬೈಕ್ನಲ್ಲಿ ಕ್ಯಾಪ್ ಹಾಕಿಕೊಂಡು ಬಂದಿದ್ದ ಕಳ್ಳರು ಮಾಂಗಲ್ಯದ ಸರ ಕಿತ್ತುಕೊಂಡು ಹೋಗಿದ್ದಾರೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ದೋಚಿ ಪರಾರಿ
ಬಳ್ಳಾರಿ: ದಾರಿ ಹೋಕನಿಗೆ ಬ್ಲೇಡ್ನಿಂದ ಕೈಗೆ ಕುಯ್ದು ಅವನಲ್ಲಿದ್ದ ರು. 550 ಸುಲಿಗೆ ಮಾಡಿಕೊಂಡು ಹೋಗಿರುವ ಘಟನೆ ನಗರದ ಕಾಗೆ ಪಾರ್ಕ್ ಸಮೀಪದಲ್ಲಿ ನಡೆದಿದೆ. ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಬೀರಪ್ಪ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಕಾಗೆ ಪಾರ್ಕ್ನ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಳ್ಳಾರಿಯ ನಾರಾಯಣಸ್ವಾಮಿ, ಇಬ್ರಾಹಿಂ ಎನ್ನುವ ವ್ಯಕ್ತಿಗಳು ಬೀರಪ್ಪನನ್ನು ತಡೆದು, ಆತನಿಗೆ ಬ್ಲೇಡ್ ತೋರಿಸಿ ಭಯ ಬೀಳಿಸಿ, ಕೈಗೆ ಬ್ಲೇಡಿನಿಂದ ಕುಯ್ದು ಅವನಲ್ಲಿದ್ದ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್ಪೆಕ್ಟರ್ ಮಾಲತೇಶ್ ತನಿಖೆ ನಡೆಸುತ್ತಿದ್ದಾರೆ.
ಜೂಜಾಟ: ಓರ್ವ ಬಂಧನ
ಬಳ್ಳಾರಿ: ಮಟಕಾ ಜೂಜಾಟ ಅಡ್ಡೆಯ ಮೇಲೆ ಕುಡಿತಿನಿ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ ರು. 4,800ಗಳನ್ನು ವಶಪಡಿಸಿಕೊಂಡಿರುವ ಘಟನೆ ಠಾಣೆ ವ್ಯಾಪ್ತಿಯ ಸಿದ್ದನಮ್ಮಹಳ್ಳಿಯಲ್ಲಿ ನಡೆದಿದೆ. ಸಿದ್ದಮ್ಮನಹಳ್ಳಿಯಲ್ಲಿ ಮಟಕಾ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕುರುಗೋಡು ಸಿಪಿಐ ಲಕ್ಷ್ಮಿಕಾಂತಯ್ಯ ಮಾರ್ಗದರ್ಶನದಲ್ಲಿ ಕುಡಿತಿನಿ ಪಿಎಸ್ಐ ವಾಸಕುಮಾರ್ ದಾಳಿ ಮಾಡಿ, ರಾಮಾಂಜಿನಿ ಎನ್ನುವ ಆರೋಪಿಯನ್ನು ಬಂಧಿಸಿ, ಬಂಧಿತನಿಂದ ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: 7 ಜನರ ಬಂಧನ
ಬಳ್ಳಾರಿ: ನಗರದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೌಲ್ಬಜಾರ್ ಪೊಲೀಸರು ದಾಳಿ ಮಾಡಿ, 7 ಜನ ಆರೋಪಿಗಳನ್ನು ಬಂಧಿಸಿ ಬಂಧಿತರಿಂದ ರು. 4800 ವಶಪಡಿಸಿಕೊಂಡಿರುವ ಘಟನೆ ನಗರದ ಶಾದಿಮಹಲ್ ಸಮೀಪದಲ್ಲಿ ನಡೆದಿದೆ. ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೌಲ್ಬಜಾರ್ ಇನ್ಸ್ಪೆಕ್ಟರ್ ಎಂ.ಬಿ. ಗೋಳಸಂಗಿ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ, ಮುನಿರಾಜ್ ಸೇರಿದಂತೆ 7 ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.