ಗುಣಾತ್ಮಕ ಶಿಕ್ಷಣ ನೀಡಿ: ನಿವೃತ್ತ ನ್ಯಾ. ಪಲ್ಲೇದ
ಕನ್ನಡಪ್ರಭ ವಾರ್ತೆ, ಯಲಬುರ್ಗಾ ಫೆ. 9
ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿದಾಗ ಮಾತ್ರ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ನಿವೃತ್ತ ನ್ಯಾಯಾಧೀಶ ಎಸ್.ಎನ್. ಪಲ್ಲೇದ ಹೇಳಿದರು.
ಪಟ್ಟಣದ ಮಂಜುನಾಥ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಂಜೆ ನಡೆದ 9ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಮತ್ತು ವಿದ್ಯಾ ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿಗೆ ಮಂಜುನಾಥ ಶಿಕ್ಷಣ ಸಂಸ್ಥೆ ಉತ್ತಮ ಮಾರ್ಗದರ್ಶಕವಾಗಿದೆ ಎಂದರು.
ಕುಕನೂರಿನ ಜವಾಹರ ನವೋದಯ ವಿದ್ಯಾಲಯದ ಉಪನ್ಯಾಸಕ ಎಂ. ಪ್ರಹ್ಲಾದ್ ಉಪನ್ಯಾಸ ನೀಡಿ, ಶಿಸ್ತು, ವಿದ್ಯೆ, ವಿನಯ ಇವುಗಳು ಇಂದಿನ ವಿದ್ಯಾರ್ಥಿಗಳಲ್ಲಿ ಇರಬೇಕಾದ ಅತ್ಯಂತ ಮೌಲ್ಯಯುತವಾದ ಗುಣಗಳಾಗಿವೆ. ಶಿಕ್ಷಕರಲ್ಲಿ ಕರ್ತವ್ಯ ಪ್ರಜ್ಞೆ ಇದ್ದರೆ ಶಿಕ್ಷಣ ಸುಧಾರಣೆಯಾಗುವುದು ಖಚಿತ ಎಂದು ಹೇಳಿದರು.
ಬಸವರಾಜ ಉಳ್ಳಾಗಡ್ಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸೃಜನಶೀಲತೆಯನ್ನು ಬೆಳೆಸಿಕೊಂಡು ಸಾಧನೆಯತ್ತ ಸಾಗಬೇಕು. ಆಗ ಹೆತ್ತ ತಂದೆ-ತಾಯಿ, ಶಿಕ್ಷಕರು ಮತ್ತು ಕಲಿತ ಸಂಸ್ಥೆಗೆ ಹೆಚ್ಚು ಗೌರವ ಬರುತ್ತದೆ ಎಂದು ಹೇಳಿದರು.
ಸನ್ಮಾನ: ನಿವೃತ್ತ ನ್ಯಾಯಾಧೀಶರಾದ ಎಸ್.ಜಿ. ಪಲ್ಲೇದ, ಎಂ. ಪ್ರಹ್ಲಾದ್, ಪಪಂ ಅಧ್ಯಕ್ಷೆ ಭಾಗೀರಥಿ, ಉಪಾಧ್ಯಕ್ಷೆ ಜಯಶ್ರೀ ಅರಕೇರಿ ಮತ್ತು ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಅವರ ಪಾಲಕರನ್ನು ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎನ್. ಗದ್ದಿ, ಪಪಂ ಸದಸ್ಯರಾದ ಮಲ್ಲೇಶಗೌಡ ಪಾಟೀಲ, ಸಿದ್ದರಾಮೇಶ ಬೇಲೇರಿ, ಮೆಹಬೂಬಿ, ಶರಣಮ್ಮ ಪೂಜಾರ, ಈರಮ್ಮ,ಸುಧೀರ ಕೊರ್ಲಳ್ಳಿ, ಸಂಸ್ಥೆಯ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಡಾ.ಬಿ.ವಿ. ಇಟಗಿ, ಸುಭಾಸ ಹೊಂಬಳ, ಕಾರ್ಯದರ್ಶಿ ಶರಣಪ್ಪ ಗಾಂಜಿ, ಶಿಕ್ಷಕ ಬಸವರಾಜ ಮಾಸ್ತಿ ಮತ್ತಿತರರು ಉಪಸ್ಥಿತರಿದ್ದರು. ಕಲ್ಲೇಶ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಗಂಗಾಧರ ದಫೇದ ನಿರೂಪಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.