ಬಿಜೆಪಿ ಹೊಸ್ತಿಲಲ್ಲಿ ನಾರಾ: ಕುತೂಹಲ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 9
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಇಂತಹ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಶಾಸಕ ಎನ್. ಸೂರ್ಯನಾರಾಯಣ ರೆಡ್ಡಿ ಬಿಜೆಪಿ ಸೇರ್ಪಡೆ ವಿಚಾರವೂ ಒಂದು.
ಫೆ. 3ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ವಿಷಯ ಚರ್ಚೆಯಾಗುವ ಮೂಲಕ ಸೂರ್ಯನಾರಾಯಣ ರೆಡ್ಡಿ ಬಿಜೆಪಿ ಸೇರ್ಪಡೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ. ಫೆ. 7ರಂದು ಸೂರ್ಯನಾರಾಯಣ ರೆಡ್ಡಿ ಅವರ ಬಳ್ಳಾರಿ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ನೇಮಿರಾಜ ನಾಯ್ಕ ಇತರರು ಭೇಟಿ ನೀಡಿ, ಮಾತುಕತೆ ಮಾಡಿರುವುದು ಸಹಜವಾಗಿಯೇ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.
ಶ್ರೀರಾಮುಲು ಬಿಜೆಪಿಗೆ ಬರುತ್ತಾರೆ ಎನ್ನುವ ವಿಷಯ ಹೆಚ್ಚು ಪ್ರಚಲಿತವಾಗಿದ್ದರೂ, ಆದರೆ, ಬಿಜೆಪಿ ವರಿಷ್ಠರು ಇದಕ್ಕೆ ಸಮ್ಮತಿಸುತ್ತಿಲ್ಲ ಎಂಬ ವಿಷಯ ಬಹಿರಂಗವಾಗುತ್ತಿದ್ದರೆ, ಇತ್ತಕಡೆ ಸೂರ್ಯನಾರಾಯಣ ರೆಡ್ಡಿ ಬಿಜೆಪಿ ಸೇರುವ ವಿಷಯ ಹೆಚ್ಚು ಪ್ರಚಲಿತವಾಗುತ್ತಿದೆ. ಸೂರ್ಯನಾರಾಯಣ ರೆಡ್ಡಿ ಅವರು ಬಳ್ಳಾರಿ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೆ ಸೂರ್ಯನಾರಾಯಣ ರೆಡ್ಡಿ ಬಿಜೆಪಿಗೆ ಹೋಗುತ್ತಾರೆ. ಕೊಪ್ಪಳ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂಬ ಮಾತಿತ್ತು. ಈ ಮಾತಿನ ಮುಂದುವರಿದ ಭಾಗವಾಗಿಯೇ ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಒಲವು ತೋರಿದರೂ ಆಶ್ಚರ್ಯವಿಲ್ಲ: ಶ್ರೀರಾಮುಲು ಬಿಜೆಪಿಗೆ ಬಂದರೆ ಸಹಜವಾಗಿಯೇ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಲಿದೆ ಎಂಬ ಲೆಕ್ಕಾಚಾರ ಬಿಜೆಪಿಗಿತ್ತು. ಆದರೆ, ಅವರು ಬಿಜೆಪಿ ಸೇರ್ಪಡೆಗೆ ಸುಷ್ಮಾ ಸ್ವರಾಜ್ ಸಮ್ಮತಿಸುತ್ತಿಲ್ಲ ಎಂಬುದು ಬಿಜೆಪಿ ಬಳ್ಳಾರಿಯ ಮಟ್ಟಿಗೆ ಆತಂಕದ ವಿಷಯವಾಗಿತ್ತು. ಇದೀಗ ಸೂರ್ಯನಾರಾಯಣ ರೆಡ್ಡಿ ಬಿಜೆಪಿ ಸೇರ್ಪಡೆಯಾದರೆ ಕೊಪ್ಪಳ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಬಳ್ಳಾರಿಯಲ್ಲೂ ಬಿಜೆಪಿ ಬಲಪಡಿಸಬಹುದು ಎಂಬ ಲೆಕ್ಕಾಚಾರವು ಬಿಜೆಪಿಯ ಆಂತರಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಎಂಬುದಾಗಿ ತಿಳಿಯಲಾಗಿದೆ. ಇದರಿಂದಾಗಿ ಬಿಜೆಪಿ ಸೂರ್ಯನಾರಾಯಣ ರೆಡ್ಡಿ ಬಗ್ಗೆ ಹೆಚ್ಚಿನ ಒಲವು ತೋರಿದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಪ್ರತಿಕ್ರಿಯೆ ಇಲ್ಲ: ಸೂರ್ಯನಾರಾಯಣ ರೆಡ್ಡಿ ಅವರು ಕೊಪ್ಪಳದ ಬಿಜೆಪಿ ಆಕಾಂಕ್ಷಿಯಾಗಿದ್ದು, ಟಿಕೆಟ್ ನೀಡಲಿ, ಬಿಡಲಿ ಬಳ್ಳಾರಿ, ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಗೆಲವಿನ ಜವಾಬ್ದಾರಿ ವಹಿಸುವುದಾಗಿ ಹೇಳಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಆದರೆ, ಈ ಬಗ್ಗೆ ಸೂರ್ಯನಾರಾಯಣ ರೆಡ್ಡಿ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಫೆ. 7ರಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ಜೀ ನೇತೃತ್ವದಲ್ಲಿ ಬಳ್ಳಾರಿಯ ಬಿಜೆಪಿ ಮುಖಂಡ ರಾಮಲಿಂಗಪ್ಪ ಅವರ ನಿವಾಸದಲ್ಲಿ ಕೋರ್ ಕಮಿಟಿ ಸಭೆ ನಡೆದಿದ್ದು, ಸಭೆ ನಂತರ ಬಿಜೆಪಿ ಜಿಲ್ಲಾಧ್ಯಕ್ಷ ನೇಮಿರಾಜ್ ನಾಯ್ಕ್, ಬಿಜೆಪಿ ಮುಖಂಡ ಬೊಮ್ಮಣ್ಣ, ಸಿರುಗುಪ್ಪ ಮಾಜಿ ಶಾಸಕ ಸೋಮಲಿಂಗಪ್ಪ ಮತ್ತಿತರ ಮುಖಂಡರು ಬಳ್ಳಾರಿಯಲ್ಲಿ ಸೂರ್ಯನಾರಾಯಣ ರೆಡ್ಡಿ ಅವರು ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ಸೂರ್ಯನಾರಾಯಣ ರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಷಯಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಇದು ಬಳ್ಳಾರಿಯ ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸೂರ್ಯನಾರಾಯಣ ರೆಡ್ಡಿ ಇದುವರೆಗೆ ಯಾವುದೇ ವಿಷಯವನ್ನು ಬಹಿರಂಗವಾಗಿ ಹೇಳಿಲ್ಲವಾದರೂ ಬಿಜೆಪಿ ಸೇರುವ ಸಾಧ್ಯತೆಯೇ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಇನ್ನು ಲೋಕಸಭೆ ಚುನಾವಣೆಗೆ ಮೂರ್ನಾಲ್ಕು ತಿಂಗಳು ಬಾಕಿ ಉಳಿದಿರುವ ಬೆನ್ನಲ್ಲೆ ಬಳ್ಳಾರಿ ರಾಜಕೀಯ ಪಕ್ಷಗಳಲ್ಲಿ ಕೆಲವು ಪ್ರಮುಖ ಬದಲಾವಣೆಗೆ ಇತ್ತೀಚಿನ ರಾಜಕೀಯ ಬೆಳವಣಿಗೆ ನಾಂದಿ ಹಾಡಿದರೂ ಆಶ್ಚರ್ಯವಿಲ್ಲ. ಯಾರು ಯಾವ ರಾಜಕೀಯ ಪಕ್ಷಕ್ಕೆ ಹೋಗುತ್ತಾರೆ ಎಂಬುದು ತೀರಾ ಕುತೂಹಲದ ಸಂಗತಿ. ಇನ್ನು ಬಳ್ಳಾರಿ ಲೋಕಸಭೆ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವುದರಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಮೇಲೆ ಬಳ್ಳಾರಿ ನಾಯಕರ ಆಸಕ್ತಿ ಹೆಚ್ಚಿದೆ ಎಂದು ಹೇಳಬಹುದು.
ಶಶಿಧರ ಮೇಟಿ