ರಾಜ್ಯದಿಂದ ಸಂಭಾಜಿ ಗಡಿಪಾರು ಮಾಡಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 9
ಕರ್ನಾಟಕ-ಮಹಾರಾಷ್ಟ್ರ ಜನರಲ್ಲಿ ದ್ವೇಷ ಹುಟ್ಟುಹಾಕುವ ಬೆಳಗಾವಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲರನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಯಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ, ಸಂಭಾಜಿ ಪಾಟೀಲರ ಪ್ರತಿಕೃತಿ ದಹಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಭಾಜಿ ಪಾಟೀಲ್ ವಿರುದ್ಧ ಪ್ರತಿಭಟನೆಯುದ್ದಕ್ಕೂ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಹೆಣ್ಣರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೂರಾರು ಹಳ್ಳಿಗಳಲ್ಲಿ ಕನ್ನಡ ನಾಮಫಲಕಗಳನ್ನು ತೆಗೆಸಿ ಮರಾಠಿ ನಾಮಫಲಕಗಳನ್ನು ಅಳವಡಿಸುವ ಮೂಲಕ ಕನ್ನಡ ನಾಡು, ನುಡಿಗೆ ದ್ರೋಹ ಬಗೆದು, ಗೊಂದಲ ಸೃಷ್ಟಿಸುತ್ತಿದ್ದಾರೆ. ನಮ್ಮ ರಾಜ್ಯದ ಜನರಿಂದಲೇ ಶಾಸಕರಾಗಿ ಆಯ್ಕೆಯಾಗಿ ಇದೀಗ ರಾಜ್ಯಕ್ಕೆ ದ್ರೋಹ ಬಗೆಯುತ್ತಿರುವ ಪಾಟೀಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಾನೂನಿನ ಕ್ರಮ ಕೈಗೊಳ್ಳಬೇಕು. ಕೂಡಲೇ ಶಾಸಕ ಸಂಭಾಜಿ ಪಾಟೀಲ್ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಜೆ.ಎಂ. ಬಸವರಾಜ್ ಸ್ವಾಮಿ, ನಾಗರಾಜಗೌಡ, ಜಗನ್, ಮೃತ್ಯುಂಜಯ ಸ್ವಾಮಿ, ಶಿವಕುಮಾರ್, ತಿಮ್ಮಪ್ಪ, ತಿಪ್ಪಾರೆಡ್ಡಿ, ಬೆಳಗಲ್ ಯುವರಾಜಗೌಡ, ಶಂಕರ್, ಅಮರೇಶ್, ಗಂಗಾಧರ, ಈಶ್ವರ್, ಶಿದ್ದಮೂರ್ತಿ ಸ್ವಾಮಿ, ಸೂರಿ, ಪಂಪಾಪತಿ, ರಾಜಶೇಖರ್, ರವಿಗೌಡ, ಶಂಕರಗೌಡ, ಹುಸೇನ್ ಸಾಬ್, ರಮೇಶ್, ಕುಮಾರಸ್ವಾಮಿ, ರಾಜು, ನಾಗರಾಜ, ಬಸವರಾಜ ಮಲ್ಲಿಕಾರ್ಜುನ, ಲೋಕರೆಡ್ಡಿ ಇತರರು ಪಾಲ್ಗೊಂಡಿದ್ದರು.