ಸುದ್ದಿ ಸಂಕ್ಷೇಪ
ಅನಧಿಕೃತ ಶೆಡ್ಗಳ ತೆರವು
ಬಳ್ಳಾರಿ: ಅನಧಿಕೃತವಾಗಿ ಸರ್ಕಾರಿ ಸ್ಥಳದಲ್ಲಿ ನಡೆಸುತ್ತಿಸುತ್ತಿದ್ದ ಕರಾವಳಿ ಬಾರ್ ಆ್ಯಂಡ್ ರೆಸ್ಟೋರೆಂಟ್ನ ಕೆಲ ಶೆಡ್ಗಳನ್ನು ಪೊಲೀಸರು ತಹಸೀಲ್ದಾರ್ ನೇತೃತ್ವದಲ್ಲಿ ಭಾನುವಾರ ಮಧ್ಯಾಹ್ನ ಮೋತಿ ವೃತ್ತದ ಸಮೀಪದಲ್ಲಿ ತೆರವುಗೊಳಿಸಿದರು. ನಗರದ ಮೋತಿ ವೃತ್ತದ ಸಮೀಪದಲ್ಲಿದ್ದ ಕರಾವಳಿ ಬಾರ್ ಆಂಡ್ ರೆಸ್ಟೋರೆಂಟ್ನವರು ಎದುರುಗಡೆ ಇದ್ದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶೆಡ್ಗಳನ್ನು ತಹಸೀಲ್ದಾರ್ ಶರಣಪ್ಪ ಅವರು ನೀಡಿದ ದೂರಿನ ಮೇರೆಗೆ ಬ್ರೂಸ್ಪೇಟೆ ಪೊಲೀಸರು ತೆರವುಗೊಳಿಸಿದ್ದಾರೆ. ಈ ಹಿಂದೆ ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸಲಾಗಿತ್ತು. ಆದರೂ ಅದೇ ಸ್ಥಳದಲ್ಲಿ ಮತ್ತೆ ಶೆಡ್ಗಳನ್ನು ಹಾಕಿದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶೆಡ್ಗಳನ್ನು ತೆರವುಗೊಳಿಸಲಾಯಿತು. ಇನ್ನು ಬಾರ್ ಮಾಲೀಕರ ಮೇಲೆ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿಯಲ್ಲಿ ತಹಸೀಲ್ದಾರ್ ದೂರು ನೀಡಿದ್ದಾರೆ.
16ರಂದು ಪಿಕಾರ್ಡ್ ಬ್ಯಾಂಕ್ ಚುನಾವಣೆ: ಯೋಗೇಶ್ವರ
ಕೊಟ್ಟೂರು: ಕೊಟ್ಟೂರು ಪಟ್ಟಣ ಕೇಂದ್ರವಾಗಿರಿಸಿಕೊಂಡಿರುವ ಕೂಡ್ಲಿಗಿ ತಾಲೂಕು ಕೊಟ್ಟೂರೇಶ್ವರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ (ಪಿಕಾರ್ಡ್)ದ ಚುನಾವಣೆ ಫೆಬ್ರವರಿ 16ರಂದು ನಡೆಯಲಿದೆ. ಬ್ಯಾಂಕಿನ ಒಟ್ಟು 11 ನಿದೇರ್ಶಕರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಶನಿವಾರ ಒಟ್ಟು 36 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಎಚ್.ಎಸ್. ಯೋಗೇಶ್ವರ ತಿಳಿಸಿದರು. ನಾಮಪತ್ರ ಸಲ್ಲಿಸಿದವರಲ್ಲಿ 29 ಪುರುಷರು, 7 ಮಹಿಳೆಯರು ಸೇರಿದ್ದಾರೆ. ಸಾಲಗಾರರ 9 ಕ್ಷೇತ್ರಗಳು, ಸಾಲಗಾರರಲ್ಲದ 2 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಸಾಲಗಾರರ ಕ್ಷೇತ್ರದಿಂದ ಮಹಿಳೆಯರಿಗೆ ಕೊಟ್ಟೂರು ಮತ್ತು ಅಮಲಾಪುರ ಕ್ಷೇತ್ರ ಮೀಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗ ಪಂಗಡಕ್ಕೆ ಕೂಡ್ಲಿಗಿ ಕ್ಷೇತ್ರವನ್ನು ಮೀಸಲಿರಿಸಲಾಗಿದೆ. ಹಿಂದುಳಿದ ವರ್ಗಕ್ಕೆ ಚಿಕ್ಕಜೋಗಿಹಳ್ಳಿ ಕ್ಷೇತ್ರ ಮೀಸಲಿರಿಸಲಾಗಿದೆ. ಹೊಸಹಳ್ಳಿ, ಉಜ್ಜಯಿನಿ, ಹೂಡೇಂ, ಗುಡೇಕೋಟೆ, ಬಡೇಲಡಕು ಮತ್ತು ಸಾಲಗಾರರಲ್ಲದ ಕೊಟ್ಟೂರು ಮತ್ತು ಕೂಡ್ಲಿಗೆ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ ಎಂದು ಅವರು ತಿಳಿಸಿದರು. ನಾಮಪತ್ರ ಪರಿಶೀಲನೆ ಕಾರ್ಯ ಫೆ. 9ರಂದು ನಡೆಯಿತು. ನಾಮಪತ್ರ ಹಿಂತೆಗೆದುಕೊಳ್ಳಲು ಫೆ. 10ರಂದು ಮಧ್ಯಾಹ್ನ 3ಗಂಟೆಯವರೆಗೆ ಸಮಯ ನಿಗದಿಗೊಂಡಿತ್ತು. ಅಂದೇ ಕಣದಲ್ಲಿ ಉಳಿಯುವ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಹಂಚಲಾಗುತ್ತಿದೆ ಎಂದು ತಿಳಿಸಿದ ಅವರು, ಫೆ. 16ರಂದು ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರೀ ಬಡಾವಣೆಯಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಚುನಾವಣೆ ನಡೆಯಲಿದೆ. ನಂತರ ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.