ಹಿರಿಯ ವಿದ್ಯಾರ್ಥಿಗಳಿಂದ ಕಿರಿ ವಿದ್ಯಾರ್ಥಿಗಳಿಗೆ ಥಳಿತ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಫೆ. 9
ತಾಲೂಕಿನ ಚಿಕ್ಕಜೋಗಿಹಳ್ಳಿ ಜವಾಹರ ನವೋದಯ ವಿದ್ಯಾಲಯದಲ್ಲಿ ಬುಧವಾರ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳ ಮಧ್ಯೆ ವೈಮನಸ್ಸು ಏರ್ಪಟ್ಟು ಬುಧವಾರ 8ನೇ ತರಗತಿಯಲ್ಲಿ ಓದುತ್ತಿರುವ 3-4 ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
8ನೇ ತರಗತಿ ಕೆಲ ವಿದ್ಯಾರ್ಥಿಗಳಿಗೆ ರಾತ್ರಿ ವೇಳೆ ಹೊಡೆದಿದ್ದಾರೆಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಆದರೆ, ಪ್ರಾಚಾರ್ಯರು ಮತ್ತು ಸಿಬ್ಬಂದಿ ಶನಿವಾರ ನಡೆದ ಪ್ರವೇಶ ಪರೀಕ್ಷೆಗಾಗಿ ಬೇರೆಡೆ ತೆರಳಿದ್ದರು. ಇದನ್ನು ಮನಗಂಡ ಕೆಲ ಪೋಷಕರು ದೂರವಾಣಿ ಮೂಲಕ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರಿಗೆ ದೂರು ಹೇಳಿಕೊಂಡಿದ್ದರಿಂದ ತಕ್ಷಣ ಹೊಸಪೇಟೆ ಎಸಿ ಸುನೀಲ್ಕುಮಾರ್ ಶನಿವಾರ ಸಂಜೆ ವಿದ್ಯಾಲಯಕ್ಕೆ ಆಗಮಿಸಿ ವಿದ್ಯಾರ್ಥಿಗಳು ಮತ್ತು ಉಪ ಪ್ರಾಚಾರ್ಯರಾದ ಮಣಿಬೆನ್ ಮತ್ತು ಕೆಲ ಸಿಬ್ಬಂದಿಯನ್ನು ಘಟನೆಗೆ ಸಂಬಂಧಿಸಿ ವಿಚಾರಣೆ ನಡೆಸಿದರು.
ಈ ಸಂದರ್ಭ ಪೋಷಕರಾದ ಕೃಷ್ಣನಾಯ್ಕ ಮತ್ತು ಪಂಪಾಪತಿ ಮಾತನಾಡಿ, ರಾತ್ರಿ ಹೊತ್ತಲ್ಲಿ ಈ ರೀತಿ ದೊಡ್ಡ ವಿದ್ಯಾರ್ಥಿಗಳು ಚಿಕ್ಕವರನ್ನು ಥಳಿಸಿದ್ದರಿಂದ ಸಾವು-ನೋವು ಸಂಭವಿಸಿದರೆ ಯಾರು ಜವಾಬ್ದಾರಿ. ಇಂಥ ಘಟನೆಗಳನ್ನು ಪ್ರಾಚಾರ್ಯರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಫ್ಯಾನ್, ಲೈಟ್ಗಳು ಇಲ್ಲ. ಹೀಗಾದರೆ ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮುಂದೆ ಈ ತರದ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಸಿಗೆ ಎಚ್ಚರಿಕೆ ನೀಡಿದರು.
ಈ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿದ್ದು, ನವೋದಯ ವಿದ್ಯಾಲಯಕ್ಕೆ ತನ್ನದೇ ಆದ ಘನತೆಯಿದ್ದು, ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮಧ್ಯೆ ಜಗಳ, ಥಳಿತ, ದುರ್ನಡತೆ ಒಳ್ಳೆಯ ಸಂಸ್ಕೃತಿಯಲ್ಲ. ಇಂಥ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಪ್ರಾಚಾರ್ಯರು ಎಚ್ಚರಿಕೆ ವಹಿಸಬೇಕೆಂದು ಸಹಾಯಕ ಆಯುಕ್ತ ಸುನಿಲ್ಕುಮಾರ್ ಸೂಚಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಹೊಸಪೇಟೆ ಸಹಾಯಕ ಆಯುಕ್ತರು ಪೋಷಕರಿಗೆ ಭರವಸೆ ನೀಡಿದರು. ಆಗ ಪರಿಸ್ಥಿತಿ ತಿಳಿಯಾಯಿತು. ಈ ಸಂದರ್ಭದಲ್ಲಿ ಪಿಎಸ್ಐ ರಘುನಾಥ್, ನಾಗರಾಜ್, ರಾಮಚಂದ್ರಪ್ಪ, ನವೋದಯ ಸಿಬ್ಬಂದಿ ಹಾಜರಿದ್ದರು.