ಕೆಪಿಎಸ್ಸಿ ನೇಮಕಾತಿ ಪಟ್ಟಿ ಬಿಡುಗಡೆಗೊಳಿಸಿ: ಮಲ್ಲಯ್ಯ
ಬಳ್ಳಾರಿ: ಕೆಪಿಎಸ್ಸಿ 2011ರ ಗೆಜಿಟೆಡ್ ಹುದ್ದೆಗಳಿಗೆ ಈಗಾಗಲೆ ಅಂತಿಮ ಆಯ್ಕೆ ಹಂತಕ್ಕೆ ತಲುಪಿರುವ ಎಲ್ಲ 362 ಅಭ್ಯರ್ಥಿಗಳ ಪಟ್ಟಿಯನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಮಲ್ಲಯ್ಯ ಹೆಗಡೆ ಸರ್ಕಾರವನ್ನು ಒತ್ತಾಯಿಸಿದರು. ನಗರದಲ್ಲಿ ಸೋಮವಾರ ಸಂಜೆ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿಯು 2011ರಲ್ಲಿ 362 ಗೆಜಿಟೆಡ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ 1,38,800 ಅರ್ಜಿಗಳು ಬಂದು ಅದರಲ್ಲಿ 91,367 ಪ್ರಿಲಿಮಿನರಿ ಪರೀಕ್ಷೆ ಬರೆದಿದ್ದರು. ಈ ಪೈಕಿ 7,188 ಅಭ್ಯರ್ಥಿಗಳು ಪರೀಕ್ಷೆಗೆ ಆಯ್ಕೆಯಾಗಿದ್ದರು. 2012ರ ಡಿಸೆಂಬರ್ನಲ್ಲಿ ನಡೆದ ಮುಖ್ಯಪರೀಕ್ಷೆಯಲ್ಲಿ 1,085 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಪ್ರತಿಯೊಬ್ಬರೂ ಗಳಿಸಿದ ಅಂಕಗಳು ಪ್ರಕಟಗೊಂಡು 362 ಅಭ್ಯರ್ಥಿಗಳು ಅಂತಿಮ ಆಯ್ಕೆಯ ಹಂತಕ್ಕೆ ತಲುಪಿದ್ದಾರೆ. ಈ ಹುದ್ದೆಗಳಿಗೆ ಎಸ್ಸಿ, ಎಸ್ಟಿ ವರ್ಗದ 90ರಿಂದ 100, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ 130ಕ್ಕೂ ಹೆಚ್ಚು ಹಾಗೂ ಸಾಮಾನ್ಯ ವರ್ಗದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಮೆರಿಟ್ನಲ್ಲಿ ಆಯ್ಕೆಯಾಗಿದ್ದಾರೆ. ಎಸ್ಸಿ, ಎಸ್ಟಿ ಹಾಗೂ ಒಬಿಸಿ ವರ್ಗಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ರಾಜಕೀಯ ಮುಖಂಡರು ಕೆಪಿಎಸ್ಸಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಅಪಪ್ರಚಾರ ನಡೆಸಿದ್ದರಿಂದ ಸರ್ಕಾರ ಸಿಐಡಿ ತನಿಖೆಗೆ ವಹಿಸಿತು. ನಂತರ ಸಿಐಡಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದು, ಆ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಅಡ್ವೋಕೇಟ್ ಜನರಲ್ ಸಲಹೆ ಮೇರೆಗೆ ಈ ಗೆಜಿಟೆಡ್ ಹುದ್ದೆಗಳ ಪುನರ್ ಅಧಿಸೂಚನೆ ಹೊರಡಿಸಲು ಸರ್ಕಾರ ಮುಂದಾಗಿರುವುದು ಎಸ್ಸಿ, ಎಸ್ಟಿ, ಒಬಿಸಿ ಸೇರಿದಂತೆ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಕೂಡಲೆ 362 ಅಭ್ಯರ್ಥಿಗಳ ಪಟ್ಟಿಯನ್ನು ಕೂಡಲೆ ಬಿಡುಗಡೆ ಮಾಡಬೇಕು. ಕೆಪಿಎಸ್ಸಿಯಲ್ಲಿ ಮುಂದೆ ಯಾವುದೆ ರೀತಿಯ ಅಕ್ರಮಗಳಾಗದಂತೆ ಪ್ರತಿಭಾವಂತರಿಗೆ ಅನ್ಯಾಯವಾಗದಂತೆ ಆಯ್ಕೆ ವಿಧಾನವನ್ನು ಉತ್ತಮಗೊಳಿಸಬೇಕು ಎಂದು ಒತ್ತಾಯಿಸಿದರು. ಬಿಎಸ್ಪಿ ಜಿಲ್ಲಾ ಸಂಯೋಜಕ ಅಬ್ದುಲ್ ಲತೀಫ್, ರಜನಿಮಣಿ, ಬಿ. ಶಂಕರ್, ಅಂಬಣ್ಣ, ರುದ್ರಪ್ಪ, ವಿಶ್ವನಾಥ, ಲಕ್ಷ್ಮಣ, ಉಮಾಪತಿ ಇದ್ದರು.