ಹಲ್ಲೆ ಖಂಡಿಸಿ ನೌಕರರ ಸಂಘ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 10
ತಾಲೂಕಿನ ಉತ್ತಂಗಿಯಲ್ಲಿ ಕರ್ತವ್ಯ ನಿರತ ಗ್ರಾಪಂ ಕಾರ್ಯದರ್ಶಿ ಅರವಿಂದ ಲಿಂಗನಗೌಡರ್ ಮೇಲೆ ನಡೆದ ಹಲ್ಲೆ ಖಂಡಿಸಿ ಇಲ್ಲಿನ ಕರ್ನಾಟಕ ರಾಜ್ಯ ನೌಕರರ ಸಂಘದವರು ಪ್ರತಿಭಟನೆ ಮಾಡಿದರು.
ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಂಬಯ್ಯ ಮಾತನಾಡಿ, ನೌಕರರ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಿ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ, ಘಟನೆಯನ್ನು ಖಂಡಿಸಿ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವುದು ನೌಕರರಿಗೆ ಕಷ್ಟವಾಗಿದೆ ಎಂದರು.
ತಾಲೂಕು ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ ಮಾತನಾಡಿ, ನೌಕರರಿಗೆ ಸರ್ಕಾರ ಸೂಕ್ತ ಭದ್ರತೆ ನೀಡಬೇಕು, ತಪ್ಪು ಮಾಡಿದರೆ ಅಂಥವರ ವಿರುದ್ಧ ನಿಯಾಮಾವಳಿ ಪ್ರಕಾರ ಕ್ರಮ ಜರುಗಿಸಬಹುದು. ಆದರೆ ಕಾನೂನು ಕೈಗೆ ತೆಗೆದುಕೊಳ್ಳುವುದು ಅಪರಾಧ. ಇಂತಹ ಘಟನೆಗಳನ್ನು ಎಲ್ಲರೂ ಒಗ್ಗಟಾಗಿ ಪ್ರತಿಭಟಿಸಿ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೌಕರರ ಸಂಘದ ಕಾರ್ಯದರ್ಶಿ ಎಂ. ತವನಪ್ಪ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಟಿ.ಪಿ. ವೀರೇಂದ್ರ ಮಾತನಾಡಿ, ಉತ್ತಂಗಿ ಗ್ರಾಪಂ ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿರುವುದು ಹೇಯ ಕೃತ್ಯವಾಗಿದೆ. ತಾವು ಒಗ್ಗಟಾಗಿ ಪ್ರತಿಭಟನೆ ಮಾಡಿದಾಗ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂದರು.
ಸ್ಟಾಫ್ನರ್ಸ್ ಜಯಲಕ್ಷ್ಮಿ, ಡಾ. ಕೊಟ್ರಮ್ಮ, ಕೂಡ್ಲಿಗಿ ಪಿಡಿಒ ಸಂಘದ ಅಧ್ಯಕ್ಷ ಕಾಂತರಾಜ್ ಮಾತನಾಡಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘ ಸಂಸ್ಥೆ, ಕೂಡ್ಲಿಗಿ ಪಿಡಿಒ ಸಂಘ, ಹೊಸಪೇಟೆ ತಾಲೂಕು ತಾಪಂ ನೌಕರರು ಭಾಗವಹಿಸಿದ್ದರು. ಬಸವರಾಜ್ ಕೊಳ್ಳಿ, ಎಂ.ಪಿ.ಎಂ. ಅಶೋಕ್, ಜಿ. ಮಹೇಶ, ಬಸೆಟ್ಟಿ ನಾಗರಾಜ, ವಿಶ್ವನಾಥ ಚಿಂತಿ, ಕರಿಯಪ್ಪ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.
ಪ್ರತಿಭಟನೆ ನಂತರ ತಹಸೀಲ್ದಾರ್ ಪ್ರಭಾಕರಗೌಡರಿಗೆ ಮನವಿಪತ್ರ ನೀಡಿದರು.