ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಖರ್ಗೆ ಬಳ್ಳಾರಿಗೆ ಬಿಡದಿರಲಿ ರೀಲಿನ ರೈಲು

Mainashree
Updated On : 12 Feb 2014, 1:54 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 11
ಒಂದೆರಡು ದಶಕಗಳಿಂದ ಕೇವಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾಗಿರುವ ಬಳ್ಳಾರಿ ಜನರು ರೈಲು ಸೌಲಭ್ಯಕ್ಕೆ ಈ ಬಾರಿಯಾದರೂ ಕಾಯಕಲ್ಪ ಸಿಗುವುದೇ? ರಾಜ್ಯದವರೆ ಆದ ಅದರಲ್ಲೂ ಹೈದರಾಬಾದ್ ಕರ್ನಾಟಕ ಪ್ರದೇಶದವರಾದ ಮಲ್ಲಿಕಾರ್ಜುನ ಖರ್ಗೆ ಅವರ ಚೊಚ್ಚಲ ರೇಲ್ವೆ ಬಜೆಟ್ನಲ್ಲಿ ಬಳ್ಳಾರಿ ಜನರ ರೇಲ್ವೆ ಬೇಡಿಕೆಗಳನ್ನು ಈಡೇರಿಸುವರೆ ಎಂಬುದನ್ನು ಬಳ್ಳಾರಿ ಜನತೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ರೇಲ್ವೆ ಇಲಾಖೆಗೆ ನಿರೀಕ್ಷಿಗಿಂತ ಹೆಚ್ಚಿನ ಆದಾಯ ತಂದುಕೊಡುವುದಕ್ಕೆ ಸೀಮಿತವಾದ ಬಳ್ಳಾರಿ ಜಿಲ್ಲೆಗೆ ಈ ಬಾರಿಯಾದರೂ ಹತ್ತು ಹಲವು ಯೋಜನೆಗಳ ಬೇಡಿಕೆಗಳು ಈಡೇರುವ ಭರವಸೆಯನ್ನು ಜಿಲ್ಲೆ ಜನತೆ ಇಟ್ಟುಕೊಂಡಿದ್ದಾರೆ. 2-3 ದಶಕಗಳಿಂದ ಹಲವು ಬೇಡಿಕೆಗಳ ಈಡೇರಿಕೆಗೆ ರೇಲ್ವೆ ಹೋರಾಟ ಸಮಿತಿಗಳು ಹಾಗೂ ಜಿಲ್ಲೆ ಜನತೆ ಹಲವು ಬಾರಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ರೇಲ್ವೆ ಸಚಿವರಿಗೆ ಮನವಿ ಸಲ್ಲಿಸಿದರೂ ಬೇಡಿಕೆಗಳು ಮಾತ್ರ ಬೇಡಿಕೆಗಳಾಗಿ ಉಳಿದಿವೆ.
ಆದರೆ ರಾಜ್ಯದವರೆ ಕೇಂದ್ರದಲ್ಲಿ ರೇಲ್ವೆ ಸಚಿವರಾಗಿರುವುದರಿಂದ, ಜಿಲ್ಲೆಯ ರೇಲ್ವೆ ಯೋಜನೆಗಳ ಕುರಿತು ಸಚಿವರ ಗಮನಕ್ಕೆ ತಂದಿರುವುದರಿಂದ ಈ ಬಾರಿ ನಿರೀಕ್ಷಿತ ಮಟ್ಟದಲ್ಲಾದರೂ ಪ್ರಮುಖ ರೇಲ್ವೆ ಬೇಡಿಕೆಗಳನ್ನು ಈಡೇರಿಸುವರೆ ಎಂಬುದು ಪ್ರಶ್ನೆಯಾಗಿದೆ. ಗುಂತಕಲ್ನಿಂದ ಹೊಸಪೇಟೆವರೆಗೆ 115 ಕಿ.ಮೀ.ಗಳ ವಿದ್ಯುತ್ತೀಕರಣ ರೈಲು ಮಾರ್ಗದ ಬೇಡಿಕೆಗಳು ಇದ್ದು, ಈ ಮಾರ್ಗಕ್ಕೆ ಅನುಮತಿ ಇದ್ದರೂ ಈವರೆಗೆ ಸಾಕಾರಗೊಂಡಿಲ್ಲ ಎಂಬುದು ರೈಲು ಹೋರಾಟಗಾರರ ಆರೋಪ. ಇದಕ್ಕೆ ಈ ಬಾರಿ ರೇಲ್ವೆ ಬಜೆಟ್ನಲ್ಲಿ ಮುಕ್ತಿ ಸಿಗುವುದೆ ಎಂದು ನೋಡಬೇಕು.


ರೈಲು ಮಾರ್ಗವಿದ್ರೂ ಎಕ್ಸ್ಪ್ರೆಸ್ ರೈಲ್ಲಿಲ್ಲ
ಬಳ್ಳಾರಿಯಿಂದ ಚಿಕ್ಕಜಾಜೂರಿಗೆ 160 ಕಿ.ಮೀ. ಬ್ರಾಡ್ಗೇಜ್ನ್ನು 15 ವರ್ಷಗಳಿಂದ ಹಾಕಿದರೂ ಪ್ಯಾಸಿಂಜರ್ ಬಿಟ್ಟಂತೆ ಈವರೆಗೆ ಒಂದು ಎಕ್ಸ್ಪ್ರೆಸ್ ರೈಲು ಓಡಿಸುತ್ತಿಲ್ಲ. ಈ ಮಾರ್ಗದಲ್ಲಿ ಎಕ್ಸ್ಪ್ರೆಸ್ ರೈಲನ್ನು ಸೊಲ್ಲಾಪುರದಿಂದ ಮೈಸೂರಿಗೆ ಓಡಿಸಿದರೆ, ಪ್ರವಾಸೋದ್ಯಮ ರೈಲಾಗಿ ಓಡಿಸಬಹುದಾಗಿದೆ ಎಂಬ ಬೇಡಿಕೆ ಇದೆ. ಈ ಭಾಗದಲ್ಲಿ ಎಕ್ಸ್ಪ್ರೆಸ್ ರೈಲು ಓಡಿಸುವುದರಿಂದ ಬಿಜಾಪುರದ ಗೋಲ್ಗುಂಬಜ್, ಬಾಗಲಕೋಟೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಾಸನದ ಶ್ರವಣಬೆಳಗೋಳ, ಬೆಲೂರು, ಹಳೇಬೀಡು,  ಹೊಸಪೇಟೆಯ ಹಂಪಿ, ತುಂಗಭದ್ರಾ ಜಲಾಶಯ, ಚಿತ್ರದುರ್ಗದ ಕಲ್ಲಿನಕೋಟೆ, ಮೈಸೂರು ಸೇರಿದಂತೆ ಇತರ ಪ್ರವಾಸಿ ತಾಣಗಳ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂಬ ದಶಕದ ಈ ಭಾಗದ ಜನರ ಬೇಡಿಕೆ ಈವರೆಗೂ ಈಡೇರಿಸಿಲ್ಲ.


ಎಕ್ಸ್ಪ್ರೆಸ್ ರೈಲುಗಳ ಕೊರತೆ
ಬಳ್ಳಾರಿಯಲ್ಲಿ ನಿತ್ಯ 3 ಎಕ್ಸ್ಪ್ರೆಸ್ ರೈಲುಗಳು ಓಡಿಸಲಾಗುತ್ತಿದೆ. ಇನ್ನು ವಾರಕ್ಕೆ 3 ಬಾರಿ ಓಡಿಸುವ ಎರಡು ರೈಲುಗಳು, ವಾರಕ್ಕೆ ಒಮ್ಮೆ 3 ಎಕ್ಸ್ಪ್ರೆಸ್ ರೈಲುಗಳು ಓಡುತ್ತವೆ. ಈ ರೈಲುಗಳು ನಿತ್ಯವೂ ಓಡಿಸಬೇಕೆಂಬ ಬೇಡಿಕೆ ಇದ್ದರೂ ಈಡೇರಿಲ್ಲ. ಅದರಲ್ಲೂ ಹುಬ್ಬಳ್ಳಿ- ವಿಜಯವಾಡ ರೈಲನ್ನು ಪ್ರತಿದಿನ ಓಡಿಸಬೇಕೆಂಬ ಪ್ರಮುಖ ಬೇಡಿಕೆ ಸಾಕಷ್ಟು ದಿನಗಳಿಂದ ಇದೆ. ಆಂಧ್ರಪ್ರದೇಶದ ವಿಜಯವಾಡ, ಗುಂಟೂರು, ಗುಂತಕಲ್ ಜನರು ವ್ಯಾಪಾರ ವಹಿವಾಟು ಹಾಗೂ ವೈವಾಹಿಕ ಸಂಬಂಧಗಳು ಹೆಚ್ಚಾಗಿ ಬಳ್ಳಾರಿ ಜತೆಗೆ ಇರುವುದರಿಂದ ಬಳ್ಳಾರಿ- ವಿಜಯವಾಡ ರೈಲನ್ನು ಪ್ರತಿದಿನ ಓಡಿಸಬೇಕೆಂಬ ಬೇಡಿಕೆ ಇದೆ. ಹುಬ್ಬಳ್ಳಿ- ಚೆನ್ನೈ ರೈಲನ್ನು ಓಡಿಸಬೇಕು, ಒಂದು ವಲಯದ ಕೇಂದ್ರ ಸ್ಥಾನದಿಂದ ಮತ್ತೊಂದು ವಲಯದ ಕೇಂದ್ರಸ್ಥಾನಕ್ಕೆ ರೈಲು ಓಡಿಸಬೇಕೆಂಬ ನಿಯಮವಿದೆ. ಬಳ್ಳಾರಿ ಮಾರ್ಗವಾಗಿ ಹುಬ್ಬಳ್ಳಿ- ಚೆನ್ನೈ ರೈಲು ಓಡಿಸಬೇಕೆಂಬ ಬೇಡಿಕೆ ಇದೆ. ಈ ಎಲ್ಲ ಬೇಡಿಕೆಗಳು ಪ್ರಸಕ್ತ ರೇಲ್ವೆ ಬಜೆಟ್ನಲ್ಲಿ ಸಾಕಾರಗೊಳ್ಳುವವೆ ಎಂಬುದನ್ನು ಜನತೆ ಕುತೂಹಲದಿಂದ ನೋಡುತ್ತಿದ್ದಾರೆ.




ಇಂಟರ್ಸಿಟಿ ರೈಲು ಅಗತ್ಯ
ಹೊಸಪೇಟೆಯಿಂದ ಬೆಂಗಳೂರಿಗೆ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಓಡಿಸಬೇಕೆಂಬ ಪ್ರಮುಖ ಬೇಡಿಕೆ ಇದೆ. ಈ ಕುರಿತು ರೇಲ್ವೆ ಹೋರಾಟ ಸಮಿತಿಯು ಹಲವು ಸಂದರ್ಭದಲ್ಲಿ ರೇಲ್ವೆ ಸಚಿವರಿಗೆ ಮನವಿಪತ್ರ ಸಲ್ಲಿಸಿದೆ. ಬಳ್ಳಾರಿಯಿಂದ ಗುಂತಕಲ್, ರಾಯಚೂರು, ಗುಲ್ಬರ್ಗ, ಸೊಲ್ಲಾಪುರ, ಬಿಜಾಪುರ, ಗದಗ, ಹೊಸಪೇಟೆ ಮಾರ್ಗವಾಗಿ ಬಳ್ಳಾರಿಗೆ ಬಳ್ಳಾರಿ ಸರ್ಕಲ್ ಟ್ರೈನ್ ಆರಂಭಿಸಬೇಕು. ಕ್ಲಾಕ್ ಅಂಡ್ ಯ್ಯಾಂಟಿ ಕ್ಲಾಸ್ವೈಜ್ ರೈಲು ಓಡಿಸಬೇಕು, ಕೊಟ್ಟೂರು ಹರಿಹರ ರೈಲು ಬೇಗನೆ ಆರಂಭಿಸಬೇಕು, ಈ ರೈಲನ್ನು ಹೊಸಪೇಟೆಯಿಂದಲೇ ಓಡಿಸಬೇಕೆಂಬ ಬೇಡಿಕೆ ಇದೆ. ಇನ್ನು ಕಣಿವಿಹಳ್ಳಿ ಬಳಿ ತಾಂತ್ರಿಕ ದೋಷವಿರುವುದರಿಂದ ಕಾಮಗಾರಿ ವಿಳಂಬವಾಗಿರುವುದರಿಂದ ಕೊಟ್ಟೂರು- ಹರಿಹರದಿಂದ ಓಡಿಸಿ, ಮುಂದಿನ ದಿನಗಳಲ್ಲಿ ತಾಂತ್ರಿಕ ದೋಷ ಸರಿಪಡಿಸಿ ಹೊಸಪೇಟೆಯಿಂದ ಹರಿಹರಕ್ಕೆ ಓಡಿಸಬೇಕೆಂದು ಪ್ರಮುಖ ಬೇಡಿಕೆಗಳು ಜಿಲ್ಲೆಯಲ್ಲಿವೆ.



ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಸಚಿವರಾಗಿನಿಂದಲೂ 12 ರೈಲುಗಳನ್ನು ಹೊಸದಾಗಿ ರಾಜ್ಯದಲ್ಲಿ ಓಡಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ರೇಲ್ವೆ ಬೇಡಿಕೆಗಳ ಕುರಿತಾಗಿ ರೇಲ್ವೆ ಸಚಿವರ ಗಮನಕ್ಕೆ ತಂದಿದ್ದು, ಈ ಭಾಗದ ರೇಲ್ವೆ ಬೇಡಿಕೆಗಳಿಗೆ ಸ್ಪಂದಿಸಿ, ರೇಲ್ವೆ ಬಜೆಟ್ನಲ್ಲಿ ಈ ಭಾಗಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಲು ಮುಂದಾಗಲಿ.
- ಕೆ.ಎಂ. ಮಹೇಶ್ವರಸ್ವಾಮಿ, ರಾಜ್ಯ ರೇಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ
ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement