ತೀರ್ಪು ಮರು ಪರಿಶೀಲನೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 11
ಸಲಿಂಗಕಾಮ ನೈಸರ್ಗಿಕ ವಿರೋಧಿ ಎಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ನೂರಾರು ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನೆಯು ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ಪೇಟೆ ವೃತ್ತ, ಮೋತಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಪ್ರತಿಭಟನೆಯುದ್ದಕ್ಕೂ ವಿವಿಧ ಘೋಷಣೆಗಳನ್ನು ಕೂಗಿದರು.
ನಾನಾ ಕ್ಷೇತ್ರಗಳಲ್ಲಿ ಸಾಕಷ್ಟು ಹಿಂಸೆ ನಡೆಯುತ್ತಿದ್ದರೂ, ಆತ್ಮವಿಶ್ವಾಸದಿಂದ ಸಂಘಟಿತರಾಗಿ ಹೋರಾಟ ನಡೆಸುತ್ತಿರುವ ಲೈಂಗಿಕ ಅಲ್ಪಸಂಖ್ಯಾತರಾದ ಸಲಿಂಗಕಾಮಿ, ದ್ವಿಲಿಂಗಕಾಮಿ, ಲಿಂಗತ್ವ ಅಲ್ಪಸಂಖ್ಯಾತ, ಹಿಜ್ರಾ, ಕೋಥಿ, ಶಿವಶಕ್ತಿ, ಅರವಾಣಿ ಸೇರಿದಂತೆ ಇತರೆ ಹೆಸರುಗಳಿಂದ ಕರೆಯುವ ಲೈಂಗಿಕ ಅಲ್ಪಸಂಖ್ಯಾತರನ್ನು ಸುಪ್ರೀಂ ಕೋರ್ಟ್ ನಿರ್ಲಕ್ಷ್ಯದಿಂದ ಕಾಣುತ್ತಿದ್ದು, ಸಲಿಂಗಕಾಮ ನೈಸರ್ಗಿಕ ವಿರೋಧಿ ಎಂದು ನೀಡಿರುವ ತೀರ್ಪು ಖಂಡನೀಯ. ಲೈಂಗಿಕತೆ, ಲಿಂಗತ್ವ ಹೊಂದಿರುವವರ ಮೂಲ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಲೈಂಗಿಕ ಅಲ್ಪಸಂಖ್ಯಾತರನ್ನು ಸರ್ಕಾರ ಈಚೆಗೆ ತೀರಾ ನಿರ್ಲಕ್ಷ್ಯದಿಂದ ಕಾಣುತ್ತಿದೆ. ಅಲ್ಪಸಂಖ್ಯಾತರ ಗುಂಪಲ್ಲಿ ಒಬ್ಬೇ ವ್ಯಕ್ತಿ ಇದ್ದರೂ ಅವರನ್ನು ಸಮಾಜದಿಂದ ದೂರ ಇಡಲಾಗುತ್ತಿದ್ದು, ಒಂದು ಸಮುದಾಯದ ಅಸ್ತಿತ್ವವೆ ಕಾನೂನುಬಾಹಿರವೆಂದು ಪರಿಗಣಿಸಿರುವುದು ವಿಷಾದನೀಯ. ಇದು ದೇಶವನ್ನು ಅಪಾಯಕಾರಿ ಸ್ಥಿತಿಯತ್ತ ದೂಡುತ್ತಿದ್ದು, ಕೂಡಲೆ ಸುಪ್ರೀಂ ಕೋರ್ಟ್ 2013 ಡಿ. 11ರಂದು ನೀಡಿದ ತೀರ್ಪನ್ನು ರದ್ದುಗೊಳಿಸಲು ಆಗ್ರಹಿಸಿದರು.
2009ರಲ್ಲಿ ದೆಹಲಿ ಹೈಕೋರ್ಟ್ ಐಪಿಸಿ ಸೆಕ್ಷನ್ 377ರಡಿ ಸಲಿಂಗಕಾಮ ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಖಂಡನೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಮುಂದೆ ಯಾವುದೆ ಸಮಸ್ಯೆಗಳು ಎದುರಾದರೂ, ನಮ್ಮ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮುಂದುವರೆಸುವುದಾಗಿ ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ವೇದಿಕೆಯ ವೀರೇಶ್ ನಾಯಕ್, ಪ್ರಗತಿ ಸೇವಾ ಸಂಘದ ರಾಮಾಂಜನೇಯ, ಸಮರ ಸಂಸ್ಥೆಯ ಸಾಯಿಲ್, ಸೌಖ್ಯ ಬೆಳಕು ಸಂಸ್ಥೆಯ ಗೀತಾ, ಸಂಗಮ ಸಂಸ್ಥೆಯ ಪ್ರಸನ್ನ, ರಾಣಿ, ಅಂಬಿಕಾ, ಚಾಂದಿನಿ ಪ್ರತಿಭಟನೆಯಲ್ಲಿದ್ದರು.