ಪಿಡಿಒ ಮೇಲೆ ಹಲ್ಲೆ: 8 ಆರೋಪಿಗಳ ಸೆರೆ
ಹೂವಿನಹಡಗಲಿ: ತಾಲೂಕಿನ ಉತ್ತಂಗಿ ಗ್ರಾಮ ಪಂಚಾಯಿತಿ ಪಿಡಿಒ ಎ. ಅರವಿಂದ ಮೇಲೆ ಹಲ್ಲೆ ಮಾಡಿದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿರುವ ಆರೋಪದಡಿ ಐಪಿಸಿ ಸೆಕ್ಷನ್ 353 ಪ್ರಕಾರ 11 ಜನರ ವಿರುದ್ಧ ಇಟ್ಟಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಪೈಕಿ ಮೇವುಂಡಿ ನಾಗರಾಜ, ಪ್ರಭುಗೌಡ, ಡಾ.ಕೆ. ಕೊಟ್ರಬಸಪ್ಪ, ಸುಣಗಾರ ಸಂಗಪ್ಪ, ಕೆಂಚನಗೌಡ್ರ ಸುರೇಶ, ಪಣಿಯಪ್ಪನವರ ಕೊಟ್ರೇಶ, ಕೆಂಚನಗೌಡ್ರ ಶಶಿಧರ, ಎಂ.ಎ. ಕರಿಬಸಪ್ಪ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಆರೋಪಿಗಳಾದ ಪ್ರವೀಣ, ಅಂಗಡಿ ನಾಗರಾಜ, ಚಿಗಟೇರಿ ನಾಗರಾಜ ಎಂಬುವವರು ತಲೆ ಮರೆಸಿಕೊಂಡಿದ್ದಾರೆ. ಪಿಡಿಒ ಮೇಲಿನ ಹಲ್ಲೆ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿರುವುದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಗ್ರಾಮದಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.
ಮಟ್ಕಾ ಜೂಜಾಟ: ಓರ್ವನ ಬಂಧನ
ಬಳ್ಳಾರಿ: ಮಟ್ಕಾ ಅಡ್ಡೆ ಮೇಲೆ ಕೌಲ್ಬಜಾರ್ ಪೊಲೀಸರು ದಾಳಿ ಮಾಡಿ, ಓರ್ವನನ್ನು ಬಂಧಿಸಿ, ಆತನಿಂದ ರು. 46 ಸಾವಿರ ವಶಪಡಿಸಿಕೊಂಡ ಘಟನೆ ನಗರದ ಸತ್ಯಾವಾಣಿ ನಗರದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಕೌಲ್ಬಜಾರ್ ಸಿಪಿಐ ಎಂ.ಬಿ. ಗೋಳಸಂಗಿ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿ, ರಾಮಚಂದ್ರರಾವ್ನನ್ನು ಬಂಧಿಸಿದ್ದಾರೆ. ಕೌಲ್ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ಓರ್ವನ ಬಂಧನ
ಬಳ್ಳಾರಿ: ಮಟ್ಕಾ ಜೂಜಾಟದ ಅಡ್ಡೆ ಮೇಲೆ ಕುಡಿತಿನಿ ಠಾಣೆ ಪೊಲೀಸರು ದಾಳಿ ಮಾಡಿ, ಓರ್ವನನ್ನು ಬಂಧಿಸಿ, ಆತನಿಂದ ರು. 1300 ವಶಪಡಿಸಿಕೊಂಡಿದ್ದಾರೆ. ತಾಲೂಕಿನ ವೇಣಿ ವೀರಾಪುರದಲ್ಲಿ ಮಟ್ಕಾ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರುದ್ರಮುನಿ ಮಾರ್ಗದರ್ಶನದಲ್ಲಿ ಕುಡಿತಿನಿ ಪಿಎಸ್ಐ ವಾಸುಕುಮಾರ್ ಹಾಗೂ ಸಿಬ್ಬಂದಿ ದಾಳಿ ಮಾಡಿ, ದ್ಯಾವಣ್ಣ ಎಂಬಾತನನ್ನು ಬಂಧಿಸಿದ್ದಾರೆ. ಕುಡಿತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣಿ ಕಾರ್ಮಿಕ ನೇಣಿಗೆ ಶರಣು
ಹೊಸಪೇಟೆ: ಹಣದ ಅಡಚಣೆಯಿಂದಾಗಿ ಜೀವನ ನಿರ್ವಹಣೆಗೆ ಕಷ್ಟವಾಗಿದ್ದರಿಂದ ಜಿಗುಪ್ಸೆ ಹೊಂದಿದ ಗಣಿ ಕಾರ್ಮಿಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಇಂಗಳಿಗಿಯಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಕೇರಳ ಮೂಲದ ಹಾಗೂ ಹೊಸಪೇಟೆಯ ಎಂ.ಪಿ. ಪ್ರಕಾಶ್ ನಗರದ ನಿವಾಸಿ ಗೋಪಾಲಕೃಷ್ಣ ನಾಯರ್ (55) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. 6-7 ವರ್ಷಗಳಿಂದ ಹೊಸಪೇಟೆ ತಾಲೂಕಿನ ಇಂಗಳಿಗಿ ಗ್ರಾಮದ ಸಮೀಪದ ಕ್ಲಾರಿಯಾ ಮೈನ್ಸ್ ಪ್ಲಾಟ್ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲ ವರ್ಷಗಳಿಂದ ಮನೆಯಲ್ಲಿ ಹಣದ ಸಮಸ್ಯೆ ಉಂಟಾಗಿದ್ದರಿಂದ ಜಿಗುಪ್ಸೆ ಹೊಂದಿ, ನನ್ನ ಸಾವಿಗೆ ಹಣದ ಅಡಚಣೆಯೆ ಕಾರಣ ಎಂದು ಡೆತ್ನೋಟ್ ಬರೆದಿಟ್ಟು ಸೋಮವಾರ ರಾತ್ರಿ ಇಂಗಳಿಗಿಯ ತನ್ನ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳವಾರ ಬೆಳಗ್ಗೆ ಈ ವಿಷಯ ಬೆಳಕಿಗೆ ಬಂದಿದೆ. ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.