ವರಕನಹಳ್ಳಿ: ನೂತನ ದೇಗುಲಗಳ ಮೂರ್ತಿಗಳ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 11
ತಾಲೂಕಿನ ವರಕನಹಳ್ಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ದೇವಸ್ಥಾನದಲ್ಲಿ ಶ್ರೀ ಆಂಜನೇಯಸ್ವಾಮಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ವಿಘ್ನೇಶ್ವರ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.
ನಂತರ ನಡೆದ ಧರ್ಮಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಉದ್ಘಾಟಿಸಿ ಮಾತನಾಡಿ, ನೂತನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಗೋಪುರ ನಿರ್ಮಾಣಕ್ಕೆ ರು. 3 ಲಕ್ಷ ಹಾಗೂ ದಾಸಪ್ಪ ದೇಗುಲಕ್ಕೆ ರು. 1 ಲಕ್ಷ ಅನುದಾನ ಮಂಜೂರು ಮಾಡುವ ಭರವಸೆ ನೀಡಿದರು.
ಮಾಜಿ ಶಾಸಕ ಬಿ. ಚಂದ್ರನಾಯ್ಕ ಮಾತನಾಡಿ, ಯಾವುದೆ ರಾಜಕಾರಣಿ ಧಾರ್ಮಿಕ ಸಭೆಗಳಲ್ಲಿ ಸುಳ್ಳು ಹೇಳಬಾರದು. ಕ್ಷೇತ್ರಾದ್ಯಂತ ಕುಡಿಯುವ ನೀರಿನ ಯೋಜನೆಗಳಿಗೆ ಹಿಂದಿನ ಸರ್ಕಾರ ಮುಂಜೂರಾತಿ ನೀಡಿದೆ. ಈ ಕುರಿತು ದಾಖಲೆ ಬಿಡುಗಡೆಗೊಳಿಸಲು ತಾವು ಸಿದ್ಧವಿರುವುದಾಗಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮೂಹ ದೇವಸ್ಥಾನಗಳ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಿ. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಎಂ. ಪರಮೇಶ್ವರಪ್ಪ, ಜಿಪಂ ಸದಸ್ಯೆ ನಳಿನಾ ವೀರಭದ್ರಪ್ಪ, ತಾಪಂ ಸದಸ್ಯ ಕೆ.ಜಿ. ಜಗದೀಶ, ಮುಖಂಡರಾದ ಸಿ. ಮೋಹನರೆಡ್ಡಿ, ವಾರದ ಗೌಸ್ ಮೊಹಿದ್ದೀನ್, ಅಟವಾಳಗಿ ಕೊಟ್ರೇಶ, ಕೆ.ಬಿ. ವೀರೇಶ್, ಜಿ. ನೂರಪ್ಪ, ಸಕಲಪ್ಪ, ಜಿ. ಸುಭಾಷ್, ಕೆ. ಭಾಸ್ಕರ್ ಇದ್ದರು.