ವಿಎಸ್‌ಕೆ ವಿವಿಯಿಂದ ಅಣ್ಣಾಗೆ 'ಗೌಡಾ'
ಬಳ್ಳಾರಿ: ಹಿರಿಯ ಗಾಂಧೀವಾದಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ಮುಂದಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಡಾಕ್ಟರೇಟ್ ಪದವಿ ನೀಡಲು ಅಣ್ಣಾ ಹಜಾರೆ ಅವರಿಗೆ ಪತ್ರ ಬರೆದು ಅವರ ಒಪ್ಪಿಗಾಗಿ ಮುಂದಾಗಿದ್ದು, ಅವರು ಒಪ್ಪಿದಲ್ಲಿ ರಾಜ್ಯಪಾಲರ ಸಮ್ಮತಿ ಮೇರೆಗೆ ಪದವಿ ಪ್ರದಾನ ಮಾಡಲಿದೆ.
ದೇಶದ ಸಾಮಾಜಿಕ ಹೋರಾಟಗಳಲ್ಲಿ ಅಣ್ಣಾ ಹೆಸರು ಪ್ರಮುಖವಾಗಿ ಇದೆ. ಹೀಗಾಗಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಆಸಕ್ತಿ ವಿಶ್ವವಿದ್ಯಾಲಯಕ್ಕಿದ್ದು, ಈ ನಿಟ್ಟಿನಲ್ಲಿ ವಿವಿಯು ಅಣ್ಣಾ ಹಜಾರೆ ಅವರಿಗೆ ಪತ್ರ ಬರೆದು, ಪದವಿ ನೀಡಬೇಕೆಂದು ಇಚ್ಛಿಸಿದ್ದು, ಇದಕ್ಕೆ ತಾವು ಒಪ್ಪಿಗೆ ನೀಡಬೇಕೆಂದು ಅನುಮತಿ ಕೇಳಿದೆ.
ಅಣ್ಣಾ ಒಪ್ಪಿದರೆ ಪದವಿ: ವಿವಿ ಬರೆದ ಪತ್ರವನ್ನು ಸ್ವೀಕರಿಸಿರುವ ಅಣ್ಣಾ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ. ಒಂದುವೇಳೆ ಅಣ್ಣಾ ಪದವಿ ಸ್ವೀಕರಿಸಲು ಒಪ್ಪಿಗೆ ನೀಡಿದಲ್ಲಿ, ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಕೈಗೊಂಡು, ರಾಜ್ಯಪಾಲರ ಸಮ್ಮತಿ ನೀಡಿದಲ್ಲಿ ಅಣ್ಣಾಗೆ ಗೌರವ ಡಾಕ್ಟರೇಟ್ ಪದವಿ ನೀಡಲಿದೆ. ಅಣ್ಣಾ ಸಮ್ಮತಿಗಾಗಿ ವಿವಿ ಕಾದು ಕುಳಿತಿದ್ದು, ಅವರು ಒಪ್ಪಿಗೆ ಸೂಚಿಸಿದರೆ ಮುಂದಿನ ಕಾರ್ಯಕ್ಕೆ ವಿವಿ ಮುಂದಾಗಲಿದೆ.
ಅನುಮತಿ ಕೇಳುವ ಪರಿಪಾಟ: ಮಹಾನ್ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡುವುದಿದ್ದರೆ ಪದವಿ ನೀಡುವ ಪೂರ್ವದಲ್ಲಿ ಅವರ ಅನುಮತಿ ಕೇಳುವ ಪರಿಪಾಟ ಕೆಲವು ಕಡೆಗಳಲ್ಲಿ ಇದೆ. ಏಕೆಂದರೆ 3-4 ವರ್ಷಗಳ ಹಿಂದೆ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿತ್ತು. ಆದರೆ ತೆಂಡೂಲ್ಕರ್ ಅವರು ಪದವಿ ಸ್ವೀಕರಿಸಿರಲಿಲ್ಲ, ಇಂತಹ ಅಭಾಸಗಳು ಆಗಬಾರದು ಎನ್ನುವ ಕಾರಣಕ್ಕೆ ಇದೀಗ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಅಣ್ಣಾ ಅವರಿಗೆ ಪದವಿ ನೀಡಲು ಅನುಮತಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್‌ನಲ್ಲಿ ವಿವಿಯ ಘಟಿಕೋತ್ಸವ ನಡೆಯಲಿದ್ದು, ಆಗ ಹಜಾರೆ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಉದ್ದೇಶವನ್ನು ವಿವಿ ಹೊಂದಿದೆ. ಅಣ್ಣಾ ಒಪ್ಪಿದರೆ ಹಾಗೂ ರಾಜ್ಯಪಾಲರು ಸಮ್ಮತಿಸಿದರೆ ಈ ಬಾರಿಯ ವಿವಿ ಘಟಿಕೋತ್ಸವದಲ್ಲಿ ಅಣ್ಣಾ ಹಜಾರೆ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ.
- ಶಶಿಧರ ಮೇಟಿ