15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಬಳ್ಳಾರಿ: ಫೆ. 14ರಿಂದ ಎರಡು ದಿನಗಳ ಕಾಲ ಜೆಡಿಎಸ್ನ ಸಂಸದೀಯ ಮಂಡಳಿ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು, ಇನ್ನೆರಡು ದಿನಗಳಲ್ಲಿ ಲೋಕಸಭೆ ಚುನಾವಣೆಯ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಜೆಡಿಎಸ್ನ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ತಿಳಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ, ಸಾಮೂಹಿಕ ನಾಯಕತ್ವ ಅಡಿಯಲ್ಲಿ ಲೋಕಸಭೆ ಚುನಾವಣೆಯನ್ನು ಎದುರಿಸಲಾಗುತ್ತದೆ. ಅಗತ್ಯ ಬಿದ್ದರೆ ಒಂದೆರಡು ಕ್ಷೇತ್ರದಲ್ಲಿ ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಇನ್ನುಳಿದಂತೆ ಜೆಡಿಎಸ್ ನೋ ಶೇರಿಂಗ್, ನೋ ಕೇರಿಂಗ್ ಓನ್ಲಿ ಫೈಟಿಂಗ್ನಂತೆ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ. ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಜೆಡಿಎಸ್ನ ಎದುರಾಳಿಯಾಗಿವೆ ಎಂದು ತಿಳಿಸಿದರು.
ಶ್ರೀರಾಮುಲು ಜೆಡಿಎಸ್ ಸೇರ್ಪಡೆ ಕುರಿತು ಮಾತನಾಡಿದ ಅವರು, ಜೆಡಿಎಸ್ ಸೇರ್ಪಡೆ ಕುರಿತಾಗಿ ದೇವೇಗೌಡರೊಂದಿಗೆ ಮಾತುಕತೆ ನಡೆದಿದೆ. ರಾಜಕೀಯದಲ್ಲಿ ನೈತಿಕತೆ ಇಲ್ಲ, ಜೈಲಿಗೆ ಹೋದವರು ಹೊರ ಬಂದರೆ ಪಟಾಕಿ ಬಿಡುತ್ತಾರೆ. ಅಂತಹ ಸಂದರ್ಭದಲ್ಲಿ ಪಕ್ಷಕ್ಕೆ ಬರುತ್ತೇವೆ ಎಂದರೆ ಬರುವುದು ಬೇಡ ಎಂದು ಹಿಂದಕ್ಕೆ ಕಳಿಸಬೇಕೆ? ರಾಜಕೀಯದಲ್ಲಿ ನೈತಿಕತೆ ಎಲ್ಲಿದೆ ಎಂದು ಕೃಷ್ಣಪ್ಪ ನೇರವಾಗಿ ಹೇಳಿದ್ದು ಆಶ್ಚರ್ಯವನ್ನುಂಟು ಮಾಡಿತು.
ಜೆಡಿಎಸ್ ಅಪ್ಪ, ಮಕ್ಕಳ ಪಕ್ಷವಲ್ಲ ಎಂಬುದಕ್ಕೆ ಈಗಾಗಲೆ ಹಲವು ಬೆಳವಣಿಗೆಗಳು ನಡೆದಿವೆ. ಎಲ್ಲ ಸಮುದಾಯದ ಜನರಿಗೆ ಆದ್ಯತೆ ನೀಡಲಾಗಿದೆ. ಮೋದಿ ಅವರ ನಮೋ ಸ್ಟೀಲ್ ಸ್ವರೂಪವು ಮಕ್ಕಳು ಆಡಿಸುವ ಗಾಳಿ ಪಟದಂತೆ. ಅದಕ್ಕೆ ಬೆಲೆಯೆ ಇಲ್ಲ, ಯಾವಾಗ ಬೇಕಾದರೂ ಹರಿದು ಹೋಗಬಹುದು ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕುಡಿತಿನಿ ಶ್ರೀನಿವಾಸ ಅವರು ಮಾತನಾಡಿ, ಒಂದು ವಾರದಲ್ಲಿ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಪದಾಧಿಕಾರಿಗಳನ್ನು ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆಯ್ಕೆ ಮಾಡುತ್ತೇವೆ. ಜಿಲ್ಲೆಯಲ್ಲಿ ಪಕ್ಷವನ್ನು ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಗ್ರಾಮ ಮಟ್ಟದಿಂದ ಸಂಘಟಿಸುತ್ತೇವೆ. ಜಿಲ್ಲೆಯ 9 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡಲಾಗುತ್ತದೆ ಎಂದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕೃಷ್ಣಮೂರ್ತಿ, ಮುಖಂಡರಾದ ಮುಂಡ್ರಿಗಿ ನಾಗರಾಜ್, ತಾಯಣ್ಣ, ಸೋಮಲಿಂಗನಗೌಡ, ಕಗ್ಗಲ್ ವೀರೇಶಪ್ಪ ಸೇರಿದಂತೆ ಇತರರು ಇದ್ದರು.