ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಯತ್ನ

Vishwanath S
Updated On : 14 Feb 2014, 1:32 am

ಕನ್ನಡಪ್ರಭ ವಾರ್ತೆ, ಕಂಪ್ಲಿ, ಫೆ. 13
ಪಟ್ಟಣದಲ್ಲಿ ಫೆ. 15ರಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಬಳ್ಳಾರಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಪೂರ್ಣ ಯಶಸ್ವಿಗೊಳಿಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ ತಿಳಿಸಿದರು.
ಇಲ್ಲಿನ ಪರಿವೀಕ್ಷಣಾ ಮಂದಿರದಲ್ಲಿ ಬುಧವಾರ ನಡೆದ ಬಳ್ಳಾರಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಇಲ್ಲಿನ ಕೋಟೆ ಪಂಪಾಪತಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷ ಪ್ರೊ. ಎಸ್. ಶೆಟ್ಟರ್ ಅವರ ಕನ್ನಡದ ಬೃಹತ್ ಮೆರವಣಿಗೆ ಗಂಡುಗಲಿ ಕುಮಾರರಾಮ ಮಂಟಪದ ಸಾಂಸ್ಕೃತಿಕ ರಾಯಭಾರಿ ಎಂ.ಪಿ. ಪ್ರಕಾಶ್ ವೇದಿಕೆವರೆಗೆ ಜರುಗಲಿದೆ ಎಂದರು.
80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ನಾ. ಡಿಸೋಜ ಸಮ್ಮೇಳನವನ್ನು ಉದ್ಘಾಟಿಸುವರು. ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಕುಂ. ವೀರಭದ್ರಪ್ಪ ಕೊಟ್ಟೂರು ಪುಸ್ತಕಗಳ ಬಿಡುಗಡೆ ಮಾಡುವರು. ಖ್ಯಾತ ಸಿನಿಮಾ ನಟಿ ಭವ್ಯ, ನಿಕಟಪೂರ್ವ ಬಳ್ಳಾರಿ ಜಿಲ್ಲಾ ಸಮ್ಮೇಳನಾಧ್ಯಕ್ಷೆ ಡಾ. ಸುಕನ್ಯಾ ಮಾರುತಿ, ಬಳ್ಳಾರಿ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಸಂಸದೆ ಜೆ. ಶಾಂತಾ, ಮಾಜಿ ಮತ್ತು ಹಾಲಿ ಶಾಸಕರು, ಸಚಿವರು ಹಾಗೂ ಜಿಪಂ, ತಾಪಂ, ಗ್ರಾಪಂ, ಪುರಸಭೆ, ಎಪಿಎಂಸಿ ಹಾಗೂ ಸಹಕಾರ ಸಂಘಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಾಹಿತಿಗಳು, ಕಲಾವಿದರು, ಸಾಂಸ್ಕೃತಿಕ ರಾಯಭಾರಿಗಳು, ಎಲ್ಲ ಕಸಾಪ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ನಾಡಗೀತೆ, ರೈತ ಗೀತೆ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಮಹಿಳಾ ಗೋಷ್ಠಿ, ಮಕ್ಕಳ ಗೋಷ್ಠಿ ಮತ್ತು ಕವಿ ಗೋಷ್ಠಿ ಸೇರಿದಂತೆ ಒಟ್ಟು 8 ಗೋಷ್ಠಿಗಳು, ನೃತ್ಯ ರೂಪಕ, ಸುಗಮ ಸಂಗೀತ, ವಚನ ಗಾಯನ, ಹಿಂದೂಸ್ತಾನಿ ಗಾಯನ, 2 ನಾಟಕ, ಭರತನಾಟ್ಯ, ಹಾಸ್ಯ ಸಂಜೆ, 1 ಬಯಲಾಟ, ಪುಸ್ತಕ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮಗಳು ಶಿಸ್ತಿನಿಂದ ನಡೆಯುತ್ತವೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ನೊಳಂಬ ಪಲ್ಲವರ ರಾಜಧಾನಿಯಾಗಿದ್ದ ಐತಿಹಾಸಿಕ ಕಂಪ್ಲಿ ಪಟ್ಟಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು 17 ಸಮಿತಿಗಳೊಂದಿಗೆ ಎಲ್ಲ ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿದರು. ಪ್ರಚಾರ ಸಮಿತಿ ಅಧ್ಯಕ್ಷ ಅರವಿ ಬಸವನಗೌಡ, ವೇದಿಕೆ ಸಮಿತಿ ಅಧ್ಯಕ್ಷ ಬಿ. ಸಿದ್ದಪ್ಪ, ಕಸಾಪ ಕಂಪ್ಲಿ ಹೋಬಳಿ ಅಧ್ಯಕ್ಷ ವಿ. ವಿದ್ಯಾಧರ ಅವರು ಮಾತನಾಡಿದರು.
ಕಸಾಪ ಹೊಸಪೇಟೆ ತಾಲೂಕು ಅಧ್ಯಕ್ಷ ಅಗಳಿ ಪಂಪಾಪತಿ, ಜಿಲ್ಲಾ ಗೌರವ ಕೋಶಾಧ್ಯಕ್ಷ ಡಿ. ನಾಗರಾಜ ಪ್ರಸಾದಶೆಟ್ಟಿ, ವಿವಿಧ ಸಮಿತಿಗಳ ಅಧ್ಯಕ್ಷರಾದ ಕೆ. ಮನೋಹರ, ಬಿ. ಅಂಬಣ್ಣ, ಬಿ. ಹುಸೇನ್‌ಸಾಬ್, ಕೆ.ಎಸ್. ಚಾಂದ್‌ಬಾಷಾ, ಜಿ. ಸತ್ಯನಾರಾಯಣಬಾಬು, ಬಿ. ನಾಗೇಶ್ವರರಾವು, ಏಳುಬೆಂಚಿ ಹನುಮಂತಪ್ಪ, ಬಿ. ನಾಗಪ್ಪ, ಡಿ. ವೆಂಕಟರಮಣ ಸಭೆಯಲ್ಲಿದ್ದರು.
15ರಿಂದ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ
ಕಂಪ್ಲಿ: ಪಟ್ಟಣದ ಹೊಸ ಬಸ್ ನಿಲ್ದಾಣ ಹಿಂಭಾಗದಲ್ಲಿ ನಿರ್ಮಿಸಿರುವ ಇತಿಹಾಸ ಪುರುಷ ಶ್ರೀಗಂಡುಗಲಿ ಕುಮಾರರಾಮ ಮಹಾ ಮಂಟಪದಲ್ಲಿ ನಿರ್ಮಿಸಿರುವ ಸಾಂಸ್ಕೃತಿಕ ರಾಯಭಾರಿ ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ಫೆ. 15 ಮತ್ತು 16ರಂದು ಬಳ್ಳಾರಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ.
ಸಮ್ಮೇಳನದ ನಿಮಿತ್ತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶಿವಶರಣ ಹೇರೂರು ವಿರೂಪಣ್ಣಗೌಡ ತಾತನವರ, ಗುರು ಶ್ರೀಶಾ (ಕುಂಟೋಜಿದಾಸರ) ವಿಠ್ಠಲದಾಸರವರ, ಕನಕಗಿರಿ ವಾದಿರಾಜರವರ, ಬಿ.ಎಚ್.ಎಂ. ಅಮರನಾಥ ಶಾಸ್ತ್ರಿಯವರ, ಭರಮಲಿಂಗಪ್ಪ ಮಾಸ್ತರ್‌ರವರ, ಶಿವಲಿಂಗಪ್ಪ ಮಾಸ್ತರ್‌ರವರ, ವೆಂಕೋಬಸಾಳೆರವರ, ಷಾಪಪೂ ಕಾಲೇಜು ನಿವೃತ್ತ ಪ್ರಾಚಾರ್ಯ ರಾಜಾಸಾಬ್‌ರವರ, ಕ್ಲಾರಿಯೋನೆಟ್ ವಾದಕ ಹನುಮಂತಪ್ಪನವರ, ಸಿದ್ಧವೀರಯ್ಯಗವಾಯಿಗಳವರ (ಒಟ್ಟು-10) ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಫೆ. 15ರ ಬೆಳಗ್ಗೆ 8 ಗಂಟೆಗೆ ಬಳ್ಳಾರಿ ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ ರಾಷ್ಟ್ರ ಧ್ವಜಾರೋಹಣ, ಕಸಾಪ ಬಳ್ಳಾರಿ ಜಿಲ್ಲಾಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಪರಿಷತ್ತು ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭವಿದ್ದು, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ನಾ. ಡಿಸೋಜ ಸಮ್ಮೇಳನ ಉದ್ಘಾಟಿಸುವರು.
ಮಧ್ಯಾಹ್ನ 1ಕ್ಕೆ ಸಣ್ಣಕಥಾ ಗೋಷ್ಠಿ-1 ಛಾಯ ಭಗವತಿ ಉದ್ಘಾಟಿಸುವರು. ಎನ್.ಡಿ. ವೆಂಕಮ್ಮ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿ-2 ಸಂವಾದ ಪ್ರೊ. ಷ. ಶೆಟ್ಟರ್‌ರೊಂದಿಗೆ ಹುರಕಡ್ಲಿ ಶಿವಕುಮಾರ್, ಮೇಟಿ ಕೊಟ್ರಪ್ಪ, ಡಾ. ಮಂಜಪ್ಪ, ಹುಲಿಕಟ್ಟಿ ಚನ್ನಬಸಪ್ಪ ಇತರರು ಪಾಲ್ಗೊಳ್ಳುವರು. ಸಂಜೆ 4ಕ್ಕೆ ಹಿಂದಿನ ಕರ್ನಾಟಕ ಸಾಹಿತ್ಯ ಮತ್ತು ಸಂಸ್ಕೃತಿ ಗೋಷ್ಠಿ-3 ಎಸ್.ಬಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ಸಂಜೆ 5.30ಕ್ಕೆ ಹಿಂದೂಸ್ತಾನಿ ಗಾಯನ, ವಿದುಷಿ ಎಸ್.ಎಂ. ರೋಹಿಣಿ ಗಂಗಾಧರಯ್ಯ ಬೆಳಗಾವಿ. ಸಂಜೆ 6.30ಕ್ಕೆ ನೃತ್ಯ ರೂಪಕ, ಬೊಂಬೆ ವೈಭವ, ನಾಟ್ಯೇಶ್ವರ ನೃತ್ಯಶಾಲೆ, ಬೆಂಗಳೂರು, ಸಂಜೆ 7.30ಕ್ಕೆ ವಿಸ್ಮಿತ ವಿದ್ಯಾಧರ ಕಂಪ್ಲಿ, ಕೆ.ಎಂ. ಅಮೂಲ್ಯ ವಾಗೀಶ್ ಕಂಪ್ಲಿ, ಪ್ರೇಮಾ ಜೋಶಿ ಕಂಪ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ. 16ರಂದು ಬೆಳಗ್ಗೆ 9.30ಕ್ಕೆ ಬಳ್ಳಾರಿ ಜಿಲ್ಲೆಯ ಸಂಸ್ಕೃತಿ ಮತ್ತು ಅಭಿವೃದ್ಧಿಯ ಪರಿಕಲ್ಪನೆ ಗೋಷ್ಠಿ-4 ವಸುಧೇಂದ್ರ ಉದ್ಘಾಟಿಸುವರು. ಡಾ. ವಸ್ತ್ರದ್ ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 11ಕ್ಕೆ ಮಕ್ಕಳ ಗೋಷ್ಠಿ-5 ಶಿವಾನಂದ ಶಿಶುವಿನಹಳ್ಳಿ ಉದ್ಘಾಟಿಸುವರು. ಸರೋಜಾ ಬ್ಯಾತನಾಳ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12.30ಕ್ಕೆ ಬಳ್ಳಾರಿ ಜಿಲ್ಲಾ 371ಜೆ ಕಲಂ ಅಭಿವೃದ್ಧಿ ಹಾಗೂ ರಂಗಭೂಮಿ ಇತಿಹಾಸ, ಮಧ್ಯಾಹ್ನ 1.30ಕ್ಕೆ ಕವಿಗೋಷ್ಠಿ-6 ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಉದ್ಘಾಟಿಸುವರು. ಬಿ. ಪೀರಬಾಷಾ ಅಧ್ಯಕ್ಷತೆ ವಹಿಸುವರು. ಬಿ.ಎಂ. ಪ್ರಭುದೇವ, ಹಿ.ಮ. ಗುರುಬಸವರಾಜ ಉಪಸ್ಥಿತರಿರುವರು. ಮಧ್ಯಾಹ್ನ 3.30ಕ್ಕೆ ಮೌಖಿಕ ಸಾಹಿತ್ಯ ಗೋಷ್ಠಿ-7 ಡಾ. ಅಕ್ಕಿ ಸುಜಾತಾ ಅಧ್ಯಕ್ಷತೆ ವಹಿಸುವರು. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಕಸಾಪ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement