ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ತುಂಬಿದ ಕೊಡ ಮೂರು ಭಾಗ ಆದೀತಲೇ ಪರಾಕ್

Mainashree
Updated On : 17 Feb 2014, 10:00 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 16
ತುಂಬಿದ ಕೊಡ ಮೂರು ಭಾಗ ಆದೀತಲೇ ಪರಾಕ್...
ಇದು ನಾಡಿನ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಕಾರ್ಣೀಕೋತ್ಸವದ ಉದ್ಘೋಷ. ಮೈಲಾರದ ಡೆಂಕಣ ಮರಡಿಯಲ್ಲಿ ತುಪ್ಪ ಹಚ್ಚಿದ 20 ಅಡಿ ಉದ್ದದ ಬಿಲ್ಲನೇರಿದ ಗೊರವಯ್ಯ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಮತ್ತು ದಶದಿಕ್ಕುಗಳ ಕಡೆಗೆ ನೋಡುತ್ತಾ ಸದ್ದಲೇ ಎಂದು ಹೇಳಿದ ಗೊರವಯ್ಯ ಮಂಜಪ್ಪ ಕಾರ್ಣಿಕ ನುಡಿದ.
ಕಾರ್ಣಿಕೋತ್ಸವದ ನಂತರ ಡೆಂಕಣ ಮರಡಿಯಲ್ಲಿ ನೆರೆದಿದ್ದ ಭಕ್ತ ಸಮೂಹ ಕಾರ್ಣಿಕ ನುಡಿಯ ಗೂಡಾರ್ಥವನ್ನು ಚರ್ಚಿಸಿದರು. ಈ ಭವಿಷ್ಯ ನುಡಿಯು ಹೆಚ್ಚಾಗಿ ರಾಜಕೀಯ ಮತ್ತು ಕೃಷಿ ಕ್ಷೇತ್ರಕ್ಕೆ ಅನ್ವಯವಾಗುತ್ತಿದ್ದು, ರಾಜಕೀಯ ಕ್ಷೇತ್ರದಲ್ಲಿ ಪಕ್ಷಗಳಲ್ಲಿ ಮೂರು ಭಾಗವಾಗಿ ಸಂಘಟನೆಯಲ್ಲಿ ಕೊರತೆ, ಯಾವುದೇ ರಾಜಕೀಯ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಿಗದೆ ಹೋಗಬಹುದು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಳೆ ಬೆಳೆ ಬಂದರೂ ಲಾಭದಾಯಕ ಆಗಿರುವುದಿಲ್ಲ. ಬರುವ ಆದಾಯದಲ್ಲಿ ಮೂರು ಭಾಗವಾಗಿ ಮತ್ತೆ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು ಎಂದು ವಿಶ್ಲೇಷಣೆ ಮಾಡುತ್ತಿದ್ದರು. ಒಟ್ಟಾರೆ ಈ ಬಾರಿ ಕಾರ್ಣಿಕ ಒಳ್ಳೆಯದಲ್ಲ ಎಂಬ ಅಭಿಪ್ರಾಯ ಭಕ್ತರದ್ದು. ಕಳೆದ ವರ್ಷ ಮಳೆ ಬೆಳೆ ಸಂಪಾತಲೆ ಪರಾಕ್ ಎಂಬ ಕಾರ್ಣಿಕ ನುಡಿದ್ದನು.
ಈ ಬಾರಿ ನುಡಿದಿರುವ ಕಾರ್ಣಿಕ 2009ರಲ್ಲಿ ಹೇಳಲಾಗಿದ್ದು, ದಾಖಲೆ ಪ್ರಕಾರ ಈ ವರ್ಷದ ಕಾರ್ಣಿಕ 114ನೇ ಭವಿಷ್ಯದ ನುಡಿಯಾಗಿದೆ. ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯು 19ನೇ ಶತಮಾನಗಳಿಂದ ನಡೆದು ಬಂದಿದೆ. ಕಾರ್ಣಿಕೋತ್ಸವ ಹಾಗೂ ಜಾತ್ರೆಗೆ ರಾಜ್ಯ, ಅಂತಾರಾಜ್ಯಗಳಿಂದ ಸುಮಾರು 15ಕ್ಕೂ ಹೆಚ್ಚು ಲಕ್ಷಕ್ಕೂ ಹೆಚ್ಚು ಭಕ್ತರು ಬಂದಿದ್ದರು. ಕಳೆದ 10 ವರ್ಷಗಳಲ್ಲಿ ಈ ಬಾರಿಯೆ ಅತಿ ಹೆಚ್ಚು ಭಕ್ತರ ಆಗಮನವಾಗಿದೆ.
ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ಶ್ರೀ ವೆಂಕಪ್ಪಯ್ಯ ಒಡೆಯರ್, ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಚನ್ನವೀರ ಶಿವಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್, ಶಿರಹಟ್ಟಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಶಂಕರಗೌಡ ಪಾಟೀಲ್, ಪೂರ್ವ ವಲಯ ಐಜಿಪಿ ಡಾ. ಪರಶಿವಮೂರ್ತಿ, ಎಸ್ಪಿ ಚೇತನ್‌ಸಿಂಗ್ ರಾಠೋಡ್, ಹೊಸಪೇಟೆ ಎಸಿ ಸುನಿಲ್‌ಕುಮಾರ, ಎಡಿಸಿ ವೆಂಕಟೇಶ, ತಹಸೀಲ್ದಾರ್ ಎ.ಬಿ. ವಿಜಯಕುಮಾರ, ಏಜಾಜ್‌ಬೇಗ್, ತಾಪಂ ಇಒ ಡಾ. ರಂಗಪ್ಪ, ದತ್ತಿ ಧಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ ಸೇರಿದಂತೆ ಹಲವರು ಭಾಗವಹಿಸಿದ್ದರು.
ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಹಾಗೂ ಕಾರ್ಣಿಕೋತ್ಸವದ ಸಂದರ್ಭದಲ್ಲಿ ವಿಜಯನಗರ ಅರಸರು ದೇವಸ್ಥಾನಕ್ಕೆ ದಾನವಾಗಿ ನೀಡಿರುವ ಶ್ರೀಮೈಲಾರಲಿಂಗೇಶ್ವರ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಡೆಂಕಣ ಮರಡಿಗೆ ಕರೆತರಲಾಯಿತು. ಜಾತ್ರೆ ಆರಂಭದಿಂದ 11 ದಿನಗಳ ಕಾಲ ಭಂಡಾರ ನೀರು ಮತ್ತು ಹಾಲು, ಹಣ್ಣು ಸೇವಿಸಿ ವ್ರತಾಚರಣೆಯಲ್ಲಿರುವ ಗ್ವಾರಪ್ಪನನ್ನು ಕರೆತರುತ್ತಾರೆ. ಕಾರ್ಣಿಕ ಸ್ಥಳಕ್ಕೆ ಬಂದ ಕೂಡಲೆ ಗೊರವಯ್ಯ 20 ಅಡಿ ಉದ್ದದ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾನೆ.

104 ಸಹಾಯವಾಣಿ
ಬಳ್ಳಾರಿ: ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸಲು 104 ಆರೋಗ್ಯ ಸಹಾಯವಾಣಿ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಜನರಿಗೆ ಸುಲಭ ಹಾಗೂ ಸಕಾಲದಲ್ಲಿ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ಆರೋಗ್ಯ ಇಲಾಖೆಯಿಂದ ದೊರೆಯುವ ಎಲ್ಲ ಸೇವಾ ಸೌಲಭ್ಯಗಳನ್ನು 104 ಸಹಾಯವಾಣಿಗೆ ಕರೆ ಮಾಡುವ ಮೂಲಕ ಪಡೆಯಬಹುದು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement