ನಕಲಿ ವ್ಯಕ್ತಿಯಿಂದ ಎಚ್ಚರ ವಹಿಸಲು ನಬಾರ್ಡ್ ಮನವಿ
ಬಳ್ಳಾರಿ: ನಬಾರ್ಡ್ ಅಧಿಕಾರಿಯೆಂದು ಹೇಳಿಕೊಂಡ ಡಾ. ಮರಿಸ್ವಾಮಿಗೌಡ ಎಂಬ ನಕಲಿ ವ್ಯಕ್ತಿಯೋರ್ವ ಜನರಿಗೆ ಮೋಸ ಮಾಡುತ್ತಿದ್ದು, ಎಚ್ಚರ ವಹಿಸಬೇಕು ಎಂದು ನಬಾರ್ಡ್ ಪ್ರಬಂಧಕ ಎಸ್.ಕೆ.ಕೆ. ಭಾರದ್ವಾಜ ಅವರು ಮನವಿ ಮಾಡಿದ್ದಾರೆ.
ಈತನು ನಂ. 21, ಮರಿಗೌಡ ಕಾಂಪ್ಲೆಕ್ಸ್, ರಾಜಾಜಿ ರಸ್ತೆ, ಬಾಗೆಪಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆ ವಿಳಾಸದಿಂದ ಗುರುತಿಸಿಕೊಂಡು ಅಸ್ತಿತ್ವದಲ್ಲಿಲ್ಲದ ಯೋಜನೆಗಳಡಿ ಜನರನ್ನು ದಾರಿ ತಪ್ಪಿಸುವ ಮೂಲಕ ರೈತರು ಹಾಗೂ ಮತ್ತಿತರರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವುದು ನಬಾರ್ಡ್ನ ಗಮನಕ್ಕೆ ಬಂದಿದೆ.
ನಬಾರ್ಡ್ ದೇಶದ ಎಲ್ಲ ರಾಜಧಾನಿಗಳಲ್ಲಿರುವ ಕ್ಷೇತ್ರೀಯ ಕಾರ್ಯಾಲಯಗಳ ಮೂಲಕ ಹಾಗೂ ಜಿಲ್ಲಾ ಅಭಿವೃದ್ಧಿ ಕಚೇರಿಗಳ ಮೂಲಕ ಮಾತ್ರ ಕಾರ್ಯನಿರ್ವಹಿತ್ತಾ ಬಂದಿದೆ. ಅಲ್ಲದೆ ನೇರವಾಗಿ ಆಗಲಿ ಅಥವಾ ಯಾವುದೆ ಅಧಿಕಾರಿಗಳ ಮೂಲಕವಾಗಲಿ ಸ್ವಂತ ಪಾಲು (ಮಾರ್ಜಿನ್ ಮನಿ), ಸಾರಿಗೆ ವೆಚ್ಚ (ಟ್ರಾನ್ಸ್ಪೋರ್ಟೇಷನ್ ಕಾಸ್ಟ್), ತರಬೇತಿ ವೆಚ್ಚ (ಟ್ರೈನಿಂಗ್ ಕಾಸ್ಟ್)ದ ಸಲುವಾಗಿ ಹಣ ವಸೂಲಿ ಮಾಡುತ್ತಿಲ್ಲ. ನಬಾರ್ಡ್ಲ್ಲಿ ರೈತರಿಗೆ ನೇರವಾಗಿ ಕೃಷಿ ಸಲಕರಣೆಗಳನ್ನು ಒಗಿಸುವ ಯಾವುದೆ ಯೋಜನೆಯಿರುವುದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಯೋಜನೆಗಳ ಮೂಲಕ ಮೋಸ ಮಾಡುವ ವ್ಯಕ್ತಿಗಳ ಆಮಿಷಕ್ಕೆ ಒಳಗಾಗಬಾರದು. ಇಂತಹ ವಂಚನೆ ವ್ಯವಹಾರಗಳಿಂದ ಉಂಟಾದ ಯಾವುದೆ ವೈಯಕ್ತಿಕ ಹಾಗೂ ನಷ್ಟಗಳಿಗೆ ನಬಾರ್ಡ್ ಜವಾಬ್ದಾರಿಯಲ್ಲ.
ನಕಲಿ ವ್ಯಕ್ತಿಗಳಿಂದ ಇಂತಹ ವಂಚನೆಗಳು ಕಂಡುಬಂದಲ್ಲಿ, ಹೆಚ್ಚಿನ ಮಾಹಿತಿಗೆ ನಬಾರ್ಡ್ನ ಕರ್ನಾಟಕ ಕ್ಷೇತ್ರೀಯ ಕಾರ್ಯಾಲಯ, ನಂ. 46, ನಬಾರ್ಡ್ ಟವರ್, ಕೆಂಪೇಗೌಡ ರಸ್ತೆ, ಬೆಂಗಳೂರು- 560009 ಅವರನ್ನು ಅಥವಾ ದೂ.ಸಂ-080- 22076400, 22076408ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.