ಸರ್ಕಾರ ಮಧ್ಯಮ ವರ್ಗಕ್ಕೂ ಆದ್ಯತೆ ನೀಡಲಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 16
ಕೇವಲ ಬಡವರು, ಎಸ್ಸಿ, ಎಸ್ಟಿ ಹಿಂದುಳಿದವರು ದೇಶದ ಸಂಪತ್ತು ಎಂದು ಗುರುತಿಸುವ ಜತೆಗೆ, ಮಧ್ಯಮ ವರ್ಗದವರಿಗೂ ಎಲ್ಲ ಸರ್ಕಾರಗಳು ಆದ್ಯತೆ ನೀಡಬೇಕು ಎಂದು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ಆಗ್ರಹಿಸಿದರು.
ನಗರದ ಎಸ್ಜಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿರುವ ಕೊಟ್ಟೂರುಸ್ವಾಮಿ ಬಿಇಡಿ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಧ್ಯಮ ವರ್ಗದವರು ಸಾಹಿತಿಗಳಾಗಿದ್ದರೆ, ವಿಜ್ಞಾನಿಗಳಾಗಿದ್ದಾರೆ, ಪ್ರತಿಭಾವಂತರಾಗಿದ್ದಾರೆ, ಇವರ ಕೂಡ ದೇಶದ ಸಂಪತ್ತಾಗಿದ್ದಾರೆ. ಆದರೆ ಎಲ್ಲ ಸರ್ಕಾರಗಳು ಮಾತ್ರ ಕೇವಲ ಹಿಂದುಳಿದ ವರ್ಗಕ್ಕೆ ಸೀಮಿತವಾಗಿ ಚಿಂತನೆ, ಸಮಾವೇಶಗಳನ್ನು ಮಾಡದೆ, ಮಧ್ಯಮ ವರ್ಗದ ಜನರ ಬಗ್ಗೆ ಆಲೋಚಿಸುವ ಅಗತ್ಯವಿದೆ. ಮಧ್ಯಮ ವರ್ಗಗಳಿಗೂ ಮೀಸಲಾತಿ ನೀಡಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ಬಿಇಡಿ ಕಾಲೇಜ್ ಅಭಿವೃದ್ಧಿಗೆ ದಿ. ಮರಿಯಪ್ಪ, ಗಂಗಪ್ಪ, ಜಿ.ಎಂ. ವೀರಭದ್ರಯ್ಯ ಸೇರಿದಂತೆ ಸಾಕಷ್ಟು ಜನರು ಶ್ರಮಿಸಿದ್ದಾರೆ. ಜಿ.ಎಂ. ವೀರಭದ್ರಪ್ಪ ಸೇರಿದಂತೆ ಇತರ ಸೇವಾ ಮನೋಭಾವವನ್ನು ವೀವಿ ಸಂಘ ಬಳಸಿಕೊಳ್ಳಬೇಕಿದೆ ಎಂದ ಅವರು, ಹೈಕ ಭಾಗಕ್ಕೆ 371ನೇ ವಿಧಿಯಡಿ ವಿಶೇಷ ಸ್ಥಾನ ಕಲ್ಪಿಸಿರುವ ಸರ್ಕಾರ ಅನುಷ್ಠಾನಕ್ಕೆ ಮಂಡಳಿ ರಚನೆ ಮಾಡಿದ್ದು, ಈ ಭಾಗದ ಶಾಸಕರು, ಸಚಿವರಿಗೆ ಯಾವುದೆ ಜವಾಬ್ದಾರಿಗಳನ್ನು ನೀಡಿಲ್ಲ ಎಂದು ಸ್ವಾಮೀಜಿ ವಿಷಾದಿಸಿದರು.
ಮಾಜಿ ಸಂಸದ, ಹೈಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಎನ್.ವೈ. ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಬೈ ಚಾನ್ಸ್ ರಾಜಕೀಯಕ್ಕೆ ಬಂದಿದ್ದೇನೆ. ವೀವಿ ಸಂಘದ ಕಾಲೇಜಿನಲ್ಲಿ ಅಂದು ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡದಿದ್ದರೆ, ಇಂದು ಯಾವುದೇ ಒಂದು ಕಡೆ ಗುಮಾಸ್ತನಾಗಿ ಅಥವಾ ರೌಡಿಯಾಗಿಯೋ ಇರುತ್ತಿದ್ದೆ. ಸಂಘ ಬಡವನಾಗಿರುವ ನನಗೆ ಸಂಘದ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿರುವುದಕ್ಕೆ ಹೈಕೋರ್ಟ್ ನ್ಯಾಯಾಧೀಶನಾಗಲು ಸಾಧ್ಯವಾಯಿತು. ಎಲ್ಲ ಕಡೆ ಕೆಲಸ ಮಾಡಬಹುದು, ಆದರೆ ರಾಜಕೀಯ ಕೆಲಸ ಮಾಡುವುದು ಕಷ್ಟ ಎಂದು ಹೇಳಿದರು.
ಇಂದು ಎಬಿಸಿಡಿ ಕಲಿಸುವ ವಿದ್ಯೆ ಬೇಕಾಗಿಲ್ಲ, ಹೃದಯ ಪರಿವರ್ತನೆಯ ವಿದ್ಯೆ ಅಗತ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ಎಲ್ಲ ಅಧಿಕಾರಿಗಳ ಮೇಲೆ ಹಲವು ಆರೋಪಗಳು, ಲೋಕಾಯುಕ್ತ ದಾಳಿಗಳು ನಡೆಯುತ್ತಿವೆ. ಆದರೆ ಶಿಕ್ಷಕರ ಮೇಲೆ ಇಂತಹ ಆರೋಪಗಳು ಇಲ್ಲಿಯವರೆಗೆ ಕೇಳಿಬಂದಿಲ್ಲ. ಸಮಾಜದ ಅನಿಷ್ಠಗಳನ್ನು ಹೋಗಲಾಡಿಸಲು ಶಿಕ್ಷಕರಿಂದ, ಗುರುಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಶಿಕ್ಷಣಕ್ಕೆ ಧಕ್ಕೆ: ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಶಿಕ್ಷಕರ ಮೇಲೆ ಬೇರೆ ಬೇರೆ ವಿಷಯದಲ್ಲಿ ಒತ್ತಡದ ಕೆಲಸಗಳನ್ನು ನೀಡುವುದರಿಂದ ಶಿಕ್ಷಕರಿಗೆ ಒತ್ತಡಗಳು ಹೆಚ್ಚಾಗಿ ಗುಣಾತ್ಮಕ ಶಿಕ್ಷಣಕ್ಕೆ ಧಕ್ಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಿಕ್ಷಕರ ಮೇಲೆ ಇತರ ಜವಾಬ್ದಾರಿ ನೀಡುವುದನ್ನು ಕಡಿಮೆಗೊಳಿಸಬೇಕು. ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜು ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಕೇರಳ, ಆಂಧ್ರಪ್ರದೇಶ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿತ್ತು ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಸಂಸದ ಕೋಳೂರು ಬಸವನಗೌಡ, ವೀವಿ ಸಂಘದ ಉಪಾಧ್ಯಕ್ಷ ಮಹೇಶ್ವರಯ್ಯ ಸ್ವಾಮಿ ಮಾತನಾಡಿದರು.
ಸಂಘದ ಜೆ.ಎಸ್. ನೇಪಾಕ್ಷಪ್ಪ, ಸಂಗನಕಲ್ ಹಿಮಂತರಾಜ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಸಣ್ಣಬಸವರಾಜ್, ಸದಸ್ಯ ಬಿ. ನಾಗಭೂಷಣಗೌಡ, ಎಚ್.ಎಂ. ಕೊಟ್ರಯ್ಯ, ಗುಲ್ಬರ್ಗ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಆರ್.ಪಿ. ಶಂಕರ್ ಇದ್ದರು. ಕಾಲೇಜ್ ಉಪನ್ಯಾಸಕಿ ಸುಶೀಲಾ ಶಿರೂರು ನಿರೂಪಿಸಿದರು. ಪ್ರಾಚಾರ್ಯ ಸತೀಶ್ ಹಿರೇಮಠ್ ವಂದಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿ ಬಳಗದವರು ಪಾಲ್ಗೊಂಡಿದ್ದರು.