ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಧ್ಯಾಪಕರಿಂದ ಹಳೆಗನ್ನಡ ಸಾಹಿತ್ಯ ನಿರ್ಲಕ್ಷ್ಯ

Mainashree
Updated On : 18 Feb 2014, 11:14 am

ಹೊಸಪೇಟೆ: ಇಂದಿನ ಅಧ್ಯಾಪಕರು ಹೊಸಗನ್ನಡವನ್ನು ಮಾತ್ರ ಅಧ್ಯಯನ ಮಾಡುತ್ತಿದ್ದಾರೆ. ಬಹುತೇಕ ಅಧ್ಯಾಪಕರು ಹಳೆಗನ್ನಡ ಸಾಹಿತ್ಯ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ವಿಜಯನಗರ ಕಾಲೇಜಿನಲ್ಲಿ ಶುಕ್ರವಾರ ಅಭಿನವ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪ್ರೊ. ಷಡಕ್ಷರಿ ಶೆಟ್ಟರ್ ಅವರ ಹಳಗನ್ನಡ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಷ. ಶೆಟ್ಟರ್ ಅವರ ಹಳಗನ್ನಡ ಕೃತಿಯು ಕನ್ನಡ ನಾಡಿನ ಪರಂಪರೆ ಇತಿಹಾಸ ನೆನಪಿಸುವ ಕೃತಿಯಾಗಿದ್ದು, ಪ್ರೊ. ಷಡಕ್ಷರಿ ಶೆಟ್ಟರ್ ಅವರು ವಿಶ್ವದ ಹತ್ತು ಭಾಷಾ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ಇವರು ಕನ್ನಡ ಭಾಷೆ, ಇತಿಹಾಸದ ಬಗ್ಗೆ ಅಭಿಮಾನ ಉಕ್ಕಿಸುವಂತೆ ಈ ಕೃತಿ ರಚಿಸಿದ್ದಾರೆ. ಲಿಪಿ, ಲಿಪಿಕರ, ಲಿಪಿ ವ್ಯವಸಾಯದ ಮೂಲಕ ಕನ್ನಡ ಭಾಷೆಯ ಪ್ರಾಚೀನತೆ ಹಾಗೂ ಬೆಳವಣಿಗೆಗೆ ಈ ಕೃತಿ ಕ್ಷ-ಕಿರಣ ಬೀರಲಿದೆ ಎಂದರು.
ಕನ್ನಡ ಭಾಷೆ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಲು ಕನ್ನಡ ಪರಂಪರೆಯ ಪಂಪ, ರನ್ನ, ಹರಿಹರ, ಕುಮಾರವ್ಯಾಸ ಅವರನ್ನು ಓದಿಕೊಳ್ಳಬೇಕು. ಹಳೆಗನ್ನಡ ಓದದಿದ್ದರೆ ಕನ್ನಡ ಸಾಹಿತ್ಯ ಪರಂಪರೆ ಅರ್ಥ ಆಗುವುದಿಲ್ಲ. ಇದು ಕನ್ನಡ ಭಾಷೆಗೆ ಅಪಾಯ ತಂದೊಡ್ಡುತ್ತಿದೆ ಎಂದು ಹೇಳಿದರು.
ಪುಸ್ತಕ ಕುರಿತು ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ಮಾತನಾಡಿ, ಕನ್ನಡ ನಾಡು, ನುಡಿ ಬಗ್ಗೆ ಪ್ರೀತಿ ಅಭಿಮಾನ ಮೂಡಿಸುವುದು ಈ ಕೃತಿ ಹೆಗ್ಗಳಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯನಗರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಾಲಿಸಿದ್ದಯ್ಯ ಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುಸ್ತಕದ ಲೇಖಕ ಪ್ರೊ. ಷಡಕ್ಷರಿ ಶೆಟ್ಟರ್, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಸಿರಿಗೇರಿ ಯರ್ರಿಸ್ವಾಮಿ, ಅಭಿನವ ಪ್ರಕಾಶನ ಸಂಸ್ಥೆಯ ಪಿ. ಚಂದ್ರಿಕಾ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಅಭಿನವ ಪ್ರಕಾಶನ ಸಂಸ್ಥೆಯ ಪಿ. ಚಂದ್ರಿಕಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಯರ್ರಿಸ್ವಾಮಿ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಪ್ರೊ. ಷಡಕ್ಷರಿ ಶೆಟ್ಟರ್ ಅವರ ವಿವಾಹ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರೊ. ಷಡಕ್ಷರಿ ಶೆಟ್ಟರ್ ಅವರ ಶ್ರೀಮತಿಯವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement