ಐಸಿಡಿಎಸ್ ಖಾಸಗೀಕರಣಕ್ಕೆ ವಿರೋಧ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 17
ಐಸಿಡಿಎಸ್ ಖಾಸಗೀಕರಣ ವಿರೋಧಿಸಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ರು. 10 ಸಾವಿರ ಕನಿಷ್ಠ ವೇತನ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕನಕ ದುರ್ಗಮ್ಮ ದೇವಸ್ಥಾನ ಆವರಣದಿಂದ ಆರಂಭವಾದ ಕಾರ್ಯಕರ್ತೆಯರ ಪ್ರತಿಭಟನಾ ಮೆರವಣಿಗೆಯು ಅಂಡರ್ ಬ್ರಿಡ್ಜ್, ಗಡಿಗಿ ಚನ್ನಪ್ಪ ವೃತ್ತದ ಮೂಲಕ ಡಿಸಿ ಕಚೇರಿಗೆ ತಲುಪಿತು. ರಸ್ತೆಯುದ್ದಕ್ಕೂ ಐಸಿಡಿಎಸ್ ಯೋಜನೆಯ ಖಾಸಗೀಕರಣಕ್ಕೆ ಮುಂದಾಗುತ್ತಿರುವ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತೆಯರ ನಿರ್ಲಕ್ಷ್ಯ: ಸಂಘದ ಜಿಲ್ಲಾಧ್ಯಕ್ಷೆ ಕೆ. ನಾಗರತ್ನಮ್ಮ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಅನೇಕ ವರ್ಷಗಳಿಂದ ಐಸಿಡಿಎಸ್ ಯೋಜನೆಯಡಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ದೇಶದ ಮಾನವ ಸಂಪನ್ಮೂಲ ಬೆಳವಣಿಗೆಗೆ ಪೂರಕ ಸೇವೆ ಸಲ್ಲಿಸುತ್ತಿದ್ದಾರೆ. ಹಡೆದ ಮಕ್ಕಳಿಗಿಂತ ಪಡೆದ ಮಕ್ಕಳ ತಾಯಂದಿರಾಗಿ ಶ್ರಮಿಸುತ್ತಿರುವ ಈ ಕಾರ್ಯಕರ್ತೆಯರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಮಕ್ಕಳ ಅಪೌಷ್ಟಿಕತೆಗೆ ಸಂಬಂಧಿಸಿದಂತೆ ಇರುವ ಎಲ್ಲ ಕೆಲಸಗಳನ್ನು ಕೇಂದ್ರದಿಂದ ದೂರ ಮಾಡಲಾಗುತ್ತಿದ್ದು, ಐಸಿಡಿಎಸ್ ಯೋಜನೆಯನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಆಹಾರ ಭದ್ರತೆ ಕಾಯ್ದೆ ವ್ಯಾಪ್ತಿಗೆ ತನ್ನಿ: ಐಸಿಡಿಎಸ್ ಮಿಷನ್ ಪ್ರಕ್ರಿಯೆಯನ್ನು ಸರ್ಕಾರ ಕೂಡಲೆ ಕೈಬಿಡಬೇಕು. ಯೋಜನೆಯನ್ನು ಇತರೆ ಖಾಸಗಿ ಕಂಪನಿಗಳಿಗೆ ವಹಿಸದೆ, ಕ್ರಮಬದ್ಧಗೊಳಿಸಬೇಕು. ರಾಜ್ಯದ 12 ಜಿಲ್ಲೆಗಳಿಗೆ ಬಂದಿರುವ ಈ ಶಿಫಾರಸನ್ನು ಕೂಡಲೆ ಹಿಂಪಡೆಯಬೇಕು. ಇರುವ ಎಲ್ಲ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿ, ಕಾಯಂಗೊಳಿಸಬೇಕು. ಭಾರತೀಯ ಕಾರ್ಮಿಕ ಸಮ್ಮೇಳನದಲ್ಲಿ ಕೈಗೊಂಡಿರುವ ನಿರ್ಣಯದಂತೆ ಬೆಲೆ ಏರಿಕೆಗೆ ತಕ್ಕಂತೆ ಕಾರ್ಯಕರ್ತೆಯರಿಗೆ ರು. 15,000, ಸಹಾಯಕಿಯರಿಗೆ ರು. 10,000 ಕನಿಷ್ಠ ಕೂಲಿ ನೀಡಬೇಕು. 12ನೇ ಪಂಚವಾರ್ಷಿಕ ಯೋಜನೆಯ ಶಿಫಾರಸಿನಂತೆ ಯೋಜನೆಗೆ 3 ಅನುದಾನ ನೀಡಬೇಕು. ಆಹಾರ ಭದ್ರತೆ ಕಾಯ್ದೆ ವ್ಯಾಪ್ತಿಗೆ ತರಬೇಕು. ಎಲ್ಲ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ, ಕಾಯಂ ಶಿಶುವಿಹಾರಗಳನ್ನಾಗಿ ರೂಪಿಸಬೇಕು. ಶಾಲಾ ಪೂರ್ವ ಶಿಕ್ಷಣವನ್ನು ಕಡ್ಡಾಯ ಶಿಕ್ಷಣ ಕಾಯ್ದೆಯಡಿ ತರಬೇಕು ಎಂದು ಆಗ್ರಹಿಸಿದರು.
ಹೆರಿಗೆ ರಜೆ ನೀಡಿ: ಸಾದಿಲ್ವಾರು ಹಣ, ಪ್ರಭಾರ ಹುದ್ದೆಯ ಗೌರವಧನ ಹೆಚ್ಚಿಸಬೇಕು. ಮಕ್ಕಳ ಸಂಖ್ಯೆಗೆ ಅಗತ್ಯವಿರುವಷ್ಟು ಗ್ಯಾಸ್ ಪೂರೈಸಬೇಕು. ಮಾರುಕಟ್ಟೆ ದರದಂತೆ ಹಣ ನೀಡಬೇಕು. ಕೇಂದ್ರಕ್ಕೆ ಇಲಾಖೆಯವರೆ ತಂದುಕೊಡಬೇಕು. ಸಹಾಯಕಿಯರಿಗೆ ಹೆರಿಗೆ ರಜಾ ನೀಡಬೇಕು. ಐಸಿಡಿಎಸ್ ಯೋಜನೆ ಹೊರತುಪಡಿಸಿ ಇತರೆ ಕೆಲಸಗಳನ್ನು ಮಾಡಿಸಬಾರದು ಸೇರಿದಂತೆ ಇತರೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯುನ ಸತ್ಯಬಾಬು, ಆರ್.ಎಸ್. ಬಸವರಾಜು ಮತ್ತು ಕಾರ್ಯಕರ್ತೆಯರಾದ ಎಂ. ಲೀಲಾವತಿ, ಎಂ. ಎರ್ರೆಮ್ಮ, ಸೌಭಾಗ್ಯ, ಇಮಾಂಬಿ, ಉಮಾದೇವಿ, ವರಲಕ್ಷ್ಮಿ, ಸುವರ್ಣಮ್ಮ, ಇಂದಿರಾ, ಮೀನಾಕುಮಾರಿ, ಉಮಾಮಹೇಶ್ವರಿ, ಬಸಮ್ಮ ಸೇರಿದಂತೆ ಇತರರಿದ್ದರು.