ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮದ್ಯದ ಮೇಲೆ ತೆರಿಗೆ ಹಿಂಪಡೆಯಿರಿ

Vishwanath S
Updated On : 20 Feb 2014, 10:55 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 19
ತಾರಾ ಹೋಟೆಲ್‌ಗಳು, ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್ ಮಾರಾಟ ಮಾಡುವ ಮದ್ಯದ ಮೇಲೆ ವಿಧಿಸಿರುವ ಶೇ. 5.5 ಮೌಲ್ಯ ವರ್ಧಿತ ತೆರಿಗೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಮದ್ಯ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಎಸ್. ಸತೀಶ್‌ಬಾಬು ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಶೇ. 5.5 ಮೌಲ್ಯ ವರ್ಧಿತ ತೆರಿಗೆಯನ್ನು ವಿಧಿಸಿರುವುದು, ಉದ್ಯಮಕ್ಕೆ ಕೊಡಲಿ ಪೆಟ್ಟಾಗಿದೆ. ಸರ್ಕಾರದ ಇಂತಹ ಧೋರಣೆಯಿಂದಾಗಿ ವಿವಿಧ ರೂಪದ ಆದಾಯಕ್ಕೆ ಧಕ್ಕೆಯಾಗಲಿದೆ. ಬಾರ್ ಅಂಡ್ ರೆಸ್ಟೋರೆಂಟ್, ತಾರಾ ಹೋಟೆಲ್‌ಗಳಲ್ಲಿ ಮಾರಾಟ ಮಾಡುವ ಮದ್ಯದ ಮೇಲೆ ವಿಧಿಸಲಾಗಿರುವ ಈ ತೆರಿಗೆಯಿಂದಾಗಿ ವ್ಯಾಪಾರ ಪ್ರಮಾಣ ಕುಗ್ಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮದ್ಯ ಮಾರಾಟಗಾರರು ಕಳೆದ ಹಲವು ವರ್ಷಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರೂ, ಈವರೆಗೆ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಹೆಚ್ಚುವರಿ ಬಾಗಿಲು ಅಳವಡಿಸುವುದು, 5 ವರ್ಷಗಳಿಗೊಮ್ಮೆ ನವೀಕರಣ ಪದ್ಧತಿ ಸೇರಿದಂತೆ ಇತರ ವಿಚಾರಗಳ ಕುರಿತಾಗಿ ಸರ್ಕಾರಗಳು ಗಮನ ಹರಿಸಿಲ್ಲ. ಅಲ್ಲದೆ ಚಿಲ್ಲರೆ ಮದ್ಯ ಮಾರಾಟಗಾರರ ಕುರಿತಾಗಿ ಕೆಲ ಬೇಡಿಕೆಗಳನ್ನು ಇಟ್ಟಿದ್ದರೂ ಸರ್ಕಾರ ಗಮನ ಹರಿಸಿಲ್ಲ. ಇದೀಗ ಸರ್ಕಾರದ ತೆರಿಗೆಯ ಇಂತಹ ನಿಲುವುಗಳಿಂದ ಮದ್ಯ ಮಾರಾಟಗಾರರು ಹೆಚ್ಚು ನಷ್ಟ ಅನುಭವಿಸುವಂತಾಗಿದೆ. ಕೇವಲ ನಷ್ಟದೊಂದಿಗೆ ವ್ಯಾಪಾರದಲ್ಲಿ ಇಳಿಕೆಯಾಗಿ ಆದಾಯಕ್ಕೆ ಕತ್ತರಿ ಬೀಳಲಿದೆ ಎಂದು ಹೇಳಿದರು.
ಇನ್ನು ಹಬ್ಬ ಹರಿದಿನಗಳಲ್ಲಿ ಮದ್ಯ ಮಾರಾಟ ನಿಷೇಧದಿಂದಾಗಿ ಕೋಟ್ಯಂತರ ರು. ನಷ್ಟ ಉಂಟಾಗುತ್ತಿದೆ. ಮದ್ಯ ಮಾರಾಟಗಾರರು ಇಂತಹ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಸಂಘದ ವತಿಯಿಂದ ಫೆ. 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುತ್ತದೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ, ಬೀದಿಗೆ ಇಳಿದು ಹೋರಾಟ ಮಾಡಲಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮದ್ಯ ಮಾರಾಟಗಾರರ ಸಂಘದ ಪಿ. ಗುರುನಾಥ್, ಕೆ.ಪಿ. ರಾಮಿರೆಡ್ಡಿ, ಸಿ.ಎಚ್. ಬಸವಲಿಂಗಾರೆಡ್ಡಿ, ಕೆ. ಸೂರ್ಯನಾರಾಯಣ ಶೆಟ್ಟಿ, ಗೋಪಾಲಕೃಷ್ಣ, ಗುರುಮೂರ್ತಿ, ಉಮಾಪತಿ, ಶ್ರೀಮನ್ನನಾರಾಯಣ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement