ಸರ್ಕಾರದ ನೀತಿ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 19
ಬಿಸಿಎಂ ವಿದ್ಯಾರ್ಥಿಗಳನ್ನು ಶುಲ್ಕ ವಿನಾಯಿತಿ ಸೌಲಭ್ಯದಿಂದ ದೂರ ಇಡುವ ಸರ್ಕಾರದ ಕ್ರಮ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಬಳ್ಳಾರಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.
ಎಬಿವಿಪಿ ಸಂಘಟನಾ ಕಾರ್ಯದರ್ಶಿ ಮಹಾಂತೇಶ್ ನಾಯಕ್ ಮಾತನಾಡಿ, ರಾಜ್ಯ ಸರ್ಕಾರ ಹೊಸ ಹೊಸ ಕಾಯ್ದೆಯನ್ನು ಶಿಕ್ಷಣದಲ್ಲಿ ಜಾರಿಗೆ ತಂದು ಹಿಂದುಳಿದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯ್ತಿಯಿಂದ ದೂರು ಇಡುವ ಪ್ರಯತ್ನ ಮಾಡುತ್ತಿದೆ. ಸರ್ಕಾರದ ನೀತಿಯಿಂದಾಗಿ ಶುಲ್ಕ ವಿನಾಯ್ತಿ ರದ್ದಾಗಲಿದ್ದು, ವಿದ್ಯಾರ್ಥಿಗಳು ಪೂರ್ಣ ಶುಲ್ಕವನ್ನು ಪಾವತಿಸುವ ಪರಿಸ್ಥಿತಿ ಉಂಟಾಗಲಿದೆ. ಸರ್ಕಾರದ ಆದೇಶದಂತೆ ವಿದ್ಯಾರ್ಥಿಗಳು ಪಾವತಿಸುವ ಹೆಚ್ಚುವರಿ ಶುಲ್ಕವನ್ನು ನಗದು ವರ್ಗಾವಣೆ ಸೌಲಭ್ಯದಡಿ ಸರ್ಕಾರವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ. ಈ ಯೋಜನೆ ಬಡ, ಗ್ರಾಮೀಣ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀಳುತ್ತದೆ ಎಂದು ತಿಳಿಸಿದರು.
ಸರ್ಕಾರಿ ಕಾಲೇಜುಗಳಲ್ಲಿರುವ ಉಪನ್ಯಾಸಕ ಕೊರತೆ, ಲ್ಯಾಬ್ ಪ್ರಾಯೋಗಿಕ ಉಪಕರಣಗಳ ಕೊರತೆ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆಗಳ ಮಧ್ಯದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮಾಡುತ್ತಾರೆ. ಇಂತಹ ಕಾಲೇಜುಗಳಿಗೆ ಸರ್ಕಾರವು ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಕಾಲೇಜುಗಳ ಗುಣಮಟ್ಟ ಹೆಚ್ಚಿಸಿ, ಕಾಯ್ದೆ ಜಾರಿಗೊಳಿಸಬೇಕು. ಶುಲ್ಕ ವಿನಾಯ್ತಿ ಆಪೇಕ್ಷಿಸುವ ಬಹುತೇಕ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಇದ್ದು ವ್ಯಾಸಂಗ ಮಾಡುತ್ತಿದ್ದು, ಅಲ್ಲಿ ಸೌಲಭ್ಯಗಳಿಂದ ವಂಚಿರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಲೇಜುಗಳಲ್ಲಿ ಶುಲ್ಕ ವಿನಾಯ್ತಿ ನಿರಾಕರಣೆ ವಿದ್ಯಾರ್ಥಿಗಳ ಬೆಳವಣಿಗೆ ಮೇಲೆ ಪರಿಣಾಮ ಬೀಳಲಿದೆ ಎಂದರು.
ಶುಲ್ಕ ವಿನಾಯ್ತಿ ಪಡೆಯಲು ವಿದ್ಯಾರ್ಥಿ ಯಾವುದೇ ಮುಷ್ಕರಗಳಲ್ಲಿ ಭಾಗಿಯಾಗಿರಬಾರದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬಾರದು ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಮುಷ್ಕರ ಮಾಡುವುದು ಕಾನೂನು ಬಾಹಿರವೇ ಎಂಬುದನ್ನು ಸರ್ಕಾರ ಸ್ವಷ್ಟಪಡಿಸಬೇಕು. ಅನ್ಯಾಯದ ವಿರುದ್ಧ ನಮ್ಮ ಹಕ್ಕು, ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಆಂದೋಲನ ಮಾಡುವುದು, ಮುಷ್ಕರ ಮಾಡುವುದು ಸಂವಿಧಾನ ಬದ್ಧವಾದ ಹಕ್ಕಾಗಿದೆ. ಸರ್ಕಾರದ ಇಂತಹ ಕಾಯ್ದೆ ಸಂವಿಧಾನದಲ್ಲಿನ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಉಂಟಾಗುವಂತಾಗುತ್ತದೆ ಎಂದು ತಿಳಿಸಿದರು. ದುರ್ಗಮ್ಮ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಯಿತು. ಕೇದಾರನಾಥ್, ಮಂಜುನಾಥ ರಾಥೋಡ್, ವಿನೋದ್‌ಕುಮಾರ್ ಚೌಧರಿ, ರವಿಕುಮಾರ್ ಬಂಡೆ, ಶರತ್‌ಕುಮಾರ್, ಲಾಲಾ ನಾಯಕ್, ವಿವೇಕ್, ಶಶಿಕುಮಾರ್, ಗಾದಿಲಿಂಗ, ರಾಜು ಇದ್ದರು.
ಜನತಂತ್ರ ವಿರೋಧಿ ಷರತ್ತು ಕೈಬಿಡಿ: ಒತ್ತಾಯ
ಬಳ್ಳಾರಿ: ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯ್ತಿ ರದ್ದುಪಡಿಸಿ, ಅನಂತರ ಅರ್ಜಿ ಸಲ್ಲಿಸಿ ಹಣ ನೀಡುವ ಸರ್ಕಾರ ನೀತಿಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಾಗುತ್ತದೆ. ಕೂಡಲೆ ಸರ್ಕಾರ ಈ ನೀತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿಎಸ್‌ಒ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಲಾಯಿತು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಾಲೇಜು ಸೇರುವ ಸಂದರ್ಭದಲ್ಲಿ ಬೋಧನಾ, ಪರೀಕ್ಷಾ, ಪ್ರಯೋಗಾಲಯ, ಕ್ರೀಡಾ ಶುಲ್ಕ ಸೇರಿದಂತೆ ಮೊದಲಾದವುಗಳಲ್ಲಿ ರಿಯಾಯ್ತಿ ನೀಡಲಾಗುತ್ತಿತ್ತು. ಈ ವಿನಾಯ್ತಿ ಶುಲ್ಕ ಕಟ್ಟುವಾಗಲೆ ವಿದ್ಯಾರ್ಥಿಗಳಿಗೆ ಲಭಿಸುತ್ತಿತ್ತು. ಆದರೆ ಸರ್ಕಾರದ ಹೊಸ ನೀತಿ ಪ್ರಕಾರ ಎಲ್ಲ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಪ್ರವೇಶದ ಸಂದರ್ಭದಲ್ಲಿ ಪೂರ್ಣ ಶುಲ್ಕ ಭರಿಸಬೇಕಿದೆ. ನಂತರ ಅರ್ಜಿ ಸಲ್ಲಿಸಿ, ಹಲವು ಷರತ್ತುಗಳಿಗೊಳಪಟ್ಟು, ವಿದ್ಯಾರ್ಥಿ ಬ್ಯಾಂಕ್ ಖಾತೆಗೆ ಸರ್ಕಾರ ಹಣ ನೀಡುತ್ತದೆ. ಇದು ಸರಿಯಾದ ಕ್ರಮವಲ್ಲ ಎಂದರು.
ವಿನಾಯ್ತಿ ಶುಲ್ಕ ಪಡೆಯಲು ಹಿಂದಿನ ಪರೀಕ್ಷೆಯಲ್ಲಿ ಪ್ರವರ್ಗ 1 ಮತ್ತು ಅಂಧ ವಿದ್ಯಾರ್ಥಿಗಳು ಶೇ. 50ರಷ್ಟು ಅಂಕ ಪಡೆಯಬೇಕು. ಇನ್ನು ಪ್ರವರ್ಗ 2ಎ, 3ಎ ಮತ್ತು 3ಬಿ ವಿದ್ಯಾರ್ಥಿಗಳು ಶೇ. 60ರಷ್ಟು ಅಂಕ ಪಡೆದಿರಬೇಕು. ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಉಪನ್ಯಾಸಕರು, ಉಪಕರಣಗಳ, ಗ್ರಂಥಾಲಯದ ಕೊರತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಅಂಕ ಪಡೆಯಲು ಕಾಷ್ಟವಾಗುತ್ತದೆ. ಇದರಿಂದಾಗಿ ಸರ್ಕಾರದ ನೀತಿಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗುತ್ತದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಅನುತ್ತೀರ್ಣವಾಗುವುದು ಸಾಮಾನ್ಯ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಪ್ರತಿಭಟನಾನಿರತರು ತಿಳಿಸಿದರು.
ಬೇಡಿಕೆಗಳು: ಸರ್ಕಾರ ಜಾರಿಗೆ ತಂದ ಹೊಸನೀತಿಯನ್ನು ತಕ್ಷಣ ರದ್ದುಪಡಿಸಬೇಕು. ಎಲ್ಲ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವ ಸಂದರ್ಭದಲ್ಲೆ ವಿನಾಯ್ತಿ ಲಭ್ಯವಾಗಬೇಕು. ಪೂರ್ಣ ಮೊತ್ತ ಪಾವತಿಸಿ ಬ್ಯಾಂಕ್ ಖಾತೆಗೆ ವರ್ಗಾಯಿಸುವ ವಿಧಾನ ಬೇಡ. ವಿದ್ಯಾರ್ಥಿಗಳು ಇಷ್ಟೆ ಅಂಕ ಪಡೆಯಬೇಕೆಂಬ ಷರತ್ತನ್ನು ತೆಗೆದುಹಾಕಿ, ಮುಂದಿನ ತರಗತಿಯ ಪ್ರವೇಶಕ್ಕೆ ಅರ್ಹರಾದವರಿಗೆಲ್ಲ ಶುಲ್ಕ ವಿನಾಯ್ತಿ ನೀಡಬೇಕು. ಶುಲ್ಕ ವಿನಾಯ್ತಿ ದೊರಕಬೇಕಾದರೆ ವಿದ್ಯಾರ್ಥಿಗಳು ಮುಷ್ಕರಗಳಲ್ಲಿ ಭಾಗವಹಿಸಬಾರದು ಎಂಬ ಜನತಂತ್ರ ವಿರೋಧಿ ಷರತ್ತನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಎಐಡಿಎಸ್‌ಒನ ಡಾ.ಎನ್. ಪ್ರಮೋದ್, ಗೋವಿಂದ್, ದೇವದಾಸ್, ಸುರೇಶ, ರಫೀಕ್ ಇದ್ದರು.