ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಆರೋಪ ಪ್ರತ್ಯಾರೋಪದಲ್ಲಿ ಜಿಪಂ ಸಭೆ ಅಂತ್ಯ

Vishwanath S
Updated On : 22 Feb 2014, 10:57 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 21
ಆಡಳಿತಾರೂಢ ಕಾಂಗ್ರೆಸ್ ಸದಸ್ಯರೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ವಿರೋಧ ಪಕ್ಷದ ಬಿಜೆಪಿ ಸದಸ್ಯರು ಅಧಿಕಾರಿಗಳ ವರ್ತನೆಗೆ ಕೆರಳುವ ಮೂಲಕ ಇಡೀ ಸಭೆಯಲ್ಲಿಯೇ ಅಧಿಕಾರಿಗಳು ವರ್ತನೆಯ ಬಗ್ಗೆ ಬಹುತೇಕ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಕೆಲವು ಅಧಿಕಾರಿಗಳು ಸದಸ್ಯರ ಪ್ರಶ್ನೆಗೆ ಉತ್ತರಿಸಲು ಮುಂದಾದಾಗ, ಸುಳ್ಳು ಮಾಹಿತಿ ನೀಡಬೇಡಿ, ನಾವೇ ಸ್ವತಃ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇವೆ ಎಂದು ಹೇಳುವ ಮೂಲಕ ಅಧಿಕಾರಿಗಳು ಸುಳ್ಳು ಮಾಹಿತಿಗೆ ಸದಸ್ಯರು ಕೆಂಡಮಂಡಲವಾದ ಘಟನೆಯು ಹಣಕಾಸು ವರ್ಷದ ಕೊನೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಬಸವ ವಸತಿ ಯೋಜನೆಯ ಅಡಿಯಲ್ಲಿ ಬಿಡುಗಡೆಯಾಗದ ಅನುದಾನ ಬಗ್ಗೆ ಬಿಜೆಪಿ ಸದಸ್ಯ ಚೆನ್ನಬಸವನಗೌಡ ಪ್ರಸ್ತಾಪಿಸಿ, ಬಸವವಸತಿ ಯೋಜನೆಯಲ್ಲಿ ಸರಿಯಾಗಿ ಹಣ ನೀಡುತ್ತಿಲ್ಲ, ಇಷ್ಟು ದಿನಗಳ ಒಳಗಾಗಿಯೇ ಮನೆ ಕಟ್ಟಬೇಕೆಂದು ಹೇಳುತ್ತಾರೆ, ಇದರಿಂದಾಗಿ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಸರಿಯಾಗಿ ಹಣ ಬಿಡುಗಡೆ ಮಾಡದ ಪಿಡಿಓ ಸೇರಿದಂತೆ ಇತರ ಅಧಿಕಾರಿಗಳು ಮೇಲೆ ಕ್ರಮ ಕೈಗೊಳ್ಳಬೇಕು, ಅವರ ಸಂಬಳ ತಡೆ ಹಿಡಿಯಲು ಸಭೆಯಲ್ಲಿ ಠರಾವು ಹೊರಡಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಸದಸ್ಯ ಶಶಿಧರ ಸ್ವಾಮಿ, ಗೋನಾಳ್ ರಾಜಶೇಖರ್ಗೌಡ ಅವರು ಧ್ವನಿ ಗೂಡಿಸಿದರು.
ಕಾರೆಕಲ್ಲು ಪಿಡಿಓ 3 ತಿಂಗಳಿಂದ ಗೈರು: ಬಿಜೆಪಿ ಸದಸ್ಯ ಗೋನಾಳ್ ರಾಜಶೇಖರಗೌಡ ಅವರು ಬಳ್ಳಾರಿ ತಾಲೂಕಿನ ಕಾರೆಕಲ್ಲು ಗ್ರಾಪಂ ಪಿಡಿಓ ಕಳೆದ 3 ತಿಂಗಳಿನಿಂದ ಗೈರು ಹಾಜರಾಗಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಪಿಡಿಓಗಳು ಗ್ರಾಪಂ ಕಚೇರಿಯಲ್ಲಿ ಇರುವುದಿಲ್ಲ, ಬ್ಯಾಂಕುಗಳು ಮುಂದೆಯೇ ಹೆಚ್ಚಾಗಿ ಇರುತ್ತಾರೆ. ಗ್ರಾಪಂಗಳಲ್ಲಿ ಬಯೋ ಮೆಟ್ರಿಕ್ ವ್ಯವಸ್ಥೆ ಮಾಡಬೇಕು. ಕೂಡಲೇ ಕಾರೆಕಲ್ಲು ಗ್ರಾಪಂಗೆ ಪಿಡಿಓ ನೇಮಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಸಿಇಓ ಮಂಜುನಾಥ ನಾಯ್ಕ ಪ್ರತಿಕ್ರಿಯಿಸಿ, ಶೀಘ್ರದಲ್ಲಿಯೇ ಗ್ರಾಪಂನಲ್ಲಿ ಬಯೋ ಮೆಟ್ರಿಕ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಫಾಗಿಂಗ್ ಮಿಷನ್ಗಳೇ ಇಲ್ಲ: ಗ್ರಾಮಾಂತರ ಪ್ರದೇಶದ ಡೆಂಘೀ ಸೇರಿದಂತೆ ಇತರ ರೋಗಗಳು ಹೆಚ್ಚಾಗುತ್ತಿದ್ದರೂ, ಫಾಗಿಂಗ್ ಮಾಡುವುದಕ್ಕೆ ಆರೋಗ್ಯ ಇಲಾಖೆ ಹಾಗೂ ತಾಪಂ ಮುಂದಾಗುತ್ತಿಲ್ಲ, ಗ್ರಾಪಂಗಳಲ್ಲಿ ಫಾಗಿಂಗ್ ಮಿಷನ್ ಇವೆ, ಫಾಗಿಂಗ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಾರೆ ಎಂದು ಕಾಂಗ್ರೆಸ್ ಸದಸ್ಯ ಹಡಗಲಿ ವಸಂತ ಕುಮಾರ್ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಷ್ಟು ಗ್ರಾಪಂಗಳಲ್ಲಿ ಫಾಗಿಂಗ್ ಮಿಷನ್ ಇದೆ? ಎಷ್ಟು ಬಾರಿ ಸಿಂಪಡಿಸಲಾಗಿದೆ? ಎಂಬುದನ್ನು ಅಧಿಕಾರಿಗಳು ಉತ್ತರಿಸಲಿ ನೋಡೋಣ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಸದಸ್ಯ ಅನ್ನದಾನ ರೆಡ್ಡಿ ಮೇಟಿ ಮಾತನಾಡಿ, ಸಣ್ಣ ಪುಟ್ಟ ಪಂಪ್ಗಳಿಗೆ ಅಂಗಡಿಯವರು ಗ್ಯಾರಂಟಿ ಕೊಡುತ್ತಾರೆ, ರು. 50-60 ಸಾವಿರಗಳ ಮೌಲ್ಯದ ಫಾಗಿಂಗ್ ಮಿಷನ್ಗಳಿಗೆ ಗ್ಯಾರಂಟಿ ಕೊಟ್ಟಿಲ್ಲವೇ, ಎಷ್ಟು ದುಡ್ಡಿಗೆ ಫಾಗಿಂಗ್ ಮಿಷನ್ ಪಡೆದಿದ್ದಾರೆ, ಯಾವಾಗ ಕೇಳಿದರೂ, ಕೆಟ್ಟು ಹೋಗಿವೆ ಎಂದು ಹೇಳುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ಪ್ರಶ್ನೆಗೆ ಒಬ್ಬ ಅಧಿಕಾರಿಯಲ್ಲೂ ಉತ್ತರವಿರಲಿಲ್ಲ, ಇನ್ನೆರಡು ದಿನಗಳಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ತಾಪಂ ಇಓಗಳು ಸಭೆಗೆ ಉತ್ತರಿಸಿದರು. ಇನ್ನು ಸಿರಿಗೇರಿ ಸದಸ್ಯ ವಸಂತ ಮಾತನಾಡಿ, ನಮ್ಮ ಕಡೆಗಳಲ್ಲಿ ಬಾಡಿಗೆ ಫಾಗಿಂಗ್ ಮಿಷನ್ ತಂದು, ಫಾಗಿಂಗ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಗ ಮೈನಿಂಗ್ ಮಾಫಿಯಾ, ಈಗ ಮರಳು ಮಾಫಿಯಾ: ಬಳ್ಳಾರಿ ಜಿಲ್ಲೆಯಲ್ಲಿ ಆಗ ಮೈನಿಂಗ್ ಮಾಫಿಯಾ ಇತ್ತು. ಇದೀಗ ಮರಳು ಮಾಫಿಯಾ ಇದೆ. ಎಗ್ಗಿಲ್ಲದೆ ಮರಳು ಸಾಗಾಣಿಕೆ ನಡೆಯುತ್ತಿದೆ, ಒಂದು ಕಡೆ ಗುತ್ತಿಗೆ ಪಡೆದಿದ್ದರೆ, ಮತ್ತೊಂದು ಕಡೆ ಮರಳು  ತೆಗೆಯಲಾಗುತ್ತದೆ. ರಾತ್ರೋರಾತ್ರಿ ಮರಳು ಸಾಗಾಣಿಕೆ ನಡೆಯುತ್ತಿದೆ. ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಬಿಜೆಪಿ ಸದಸ್ಯ ಮಲ್ಲಿಕಾರ್ಜುನ ಲೋಕೋಪಯೋಗಿ ಇಲಾಖೆಗಳ ವಿರುದ್ಧ ಹರಿಹಾಯ್ದರು. ಎರಡು ವರ್ಷದ ಹಿಂದೆ ಹಗರಿ ಫಾರಂನಿಂದ ರಾಯಾಪುರ ರಸ್ತೆಯ ನಿರ್ಮಾಣಕ್ಕೆ 15 ಲಕ್ಷಗಳನ್ನು ಶಾಸಕರು ಬಿಡುಗಡೆ ಮಾಡಿದರೂ, ಈವರೆಗೆ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಲೋಕೋಪಯೋಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಕುರುಗೋಡು ವಿಶೇಷ ತಹಸೀಲ್ದಾರ್ ಅವರು ಮಾತನಾಡಿ, ತಾಲೂಕು ರಚನೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಪ್ರತಿಕ್ರಿಯೆ ಕೇಳುವಂತೆ ಮೇಲಾಧಿಕಾರಿಗಳು ತಿಳಿಸಿದ್ದಾರೆ ಎಂದರೆ, ಸಿರಿಗೇರಿ ಸದಸ್ಯ ವಸಂತ ಮಾತನಾಡಿ, ಸಿರಿಗೇರಿ ಸೇರಿದಂತೆ ಇತರ ಹಳ್ಳಿಗಳು ಕುರುಗೋಡು ತಾಲೂಕಿಗೆ ಸೇರದಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯು ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಪಂ ಸಿಇಓ ಮಂಜುನಾಥ್ ನಾಯ್ಕ, ಉಪಾಧ್ಯಕ್ಷೆ ಮಮತಾ ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement