ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಒತ್ತುವರಿ ತೆರವು: ಉಪವಾಸ 2ನೇ ದಿನಕ್ಕೆ

Vishwanath S
Updated On : 22 Feb 2014, 10:58 am

ಬಳ್ಳಾರಿ: ಸ್ಥಳೀಯ ಕಪ್ಪಗಲ್ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಒತ್ತುವರಿಯಾಗಿರುವ ರಸ್ತೆಗಳನ್ನು ತೆರವುಗೊಳಿಸುವಂತೆ ಅಗ್ರಹಿಸಿ ಸನಾಥಬಂಧು ರಾಷ್ಟ್ರೀಯ ಪಕ್ಷದ ಸಂಸ್ಥಾಪಕ ಉದಯ ಅಗಸನೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ಜಾಗ ರಸ್ತೆಗೆ ಬಿಡಿ ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ಶುಕ್ರವಾರ ಎರಡನೇ ದಿನಕ್ಕೆ ಮುಂದುವರಿದಿದೆ.
ನಗರದ ದುರ್ಗಮ್ಮ ದೇವಸ್ಥಾನ-ಕಪ್ಪಗಲ್ಲು ರಸ್ತೆ ಬಳಿ ಒತ್ತುವರಿಯಾದ ರಸ್ತೆಯ ಜಾಗದಲ್ಲಿ ಬೃಹತ್ ಕಟ್ಟಡವೊಂದನ್ನು ನಿರ್ಮಿಸಲಾಗುತ್ತಿದೆ. ಇದು ವಿವಾದಾಸ್ಪದವಾದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ರಾಜಕೀಯ ಪಕ್ಷಗಳು, ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಆದರೂ ನಿವೇಶನಕ್ಕೆ ಸಂಬಂಧಪಟ್ಟವರಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿದೆ ಎಂದು ಉದಯ ಅಗಸನೂರು ಆರೋಪಿಸಿದರು.
ರಸ್ತೆಗಾಗಿ ಮೀಸಲಿರುವ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ, ಪಾದಚಾರಿಗಳಿಗೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಕೂಡಲೇ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಇತ್ತ ಗಮನಹರಿಸಿ, ಸೂಕ್ತ ಕ್ರಮಕೈಗೊಳ್ಳಬೇಕು. ರಸ್ತೆ ಜಾಗ ರಸ್ತೆಗೆ ಬಿಡಬೇಕು ಎಂದು ಒತ್ತಾಯಿಸಿದರು.
ನಾಳೆ ಜಿಲ್ಲೆಗೆ ವಾರ್ತಾ ಸಚಿವರ ಭೇಟಿ
ಬಳ್ಳಾರಿ: ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಹಜ್ ಸಚಿವ ಆರ್. ರೋಷನ್ ಬೇಗ್ ಫೆ. 23ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 6.25ಕ್ಕೆ ಹಂಪಿ ಎಕ್ಸ್ಪ್ರೆಸ್ ಮೂಲಕ ಬಳ್ಳಾರಿ ಆಗಮಿಸಲಿದ್ದು, 7 ಗಂಟೆಗೆ ಸರ್ಕ್ಯೂಟ್ ಹೌಸ್ನಲ್ಲಿ ತಂಗಲಿದ್ದಾರೆ. ನಂತರ ಬೆ. 8ಗಂಟೆಗೆ ಮುಂಬರುವ ಹಜ್ ಯಾತ್ರೆ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಲಿದ್ದಾರೆ. ಬೆ. 9 ಗಂಟೆಗೆ ವಾರ್ತಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, 10.30ಕ್ಕೆ ನಗರದ ಮುಸ್ಲಿಂ ಶಾದಿ ಮಹಲ್ನಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ-ಶಿರಾ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ.
ಸೊನ್ನದ ಈಶಣ್ಣ ನಿಧನ
ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಟಿ.ಬಿ. ಡ್ಯಾಂ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸೊನ್ನದ ಈಶಣ್ಣ (64) ಗುರುವಾರ ರಾತ್ರಿ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಇವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಹಂಪಾಸಾಗರದಲ್ಲಿ ನಡೆಯಿತು ಎಂದು ಪುತ್ರ ನ್ಯಾಯವಾದಿ ಚಂದ್ರಶೇಖರ್ ಸೊನ್ನದ್ ತಿಳಿಸಿದರು.
24ರಂದು ಶ್ರೀ ಗುರುಬಸವೇಶ್ವರ ಸ್ವಾಮಿ ರಥೋತ್ಸವ
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕು ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿ ಮಹಾ ರಥೋತ್ಸವವು ಫೆ. 24ರ ಸಂಜೆ  ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅ. ಸುತಗುಂಡಿ ತಿಳಿಸಿದ್ದಾರೆ. ಶ್ರೀ ಸ್ವಾಮಿಯ ರಥೋತ್ಸವದ ಪ್ರಯುಕ್ತ  ಮಾರ್ಚ್ 1ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು,  ಫೆ. 22ರಂದು ಬೆಳ್ಳಿ ರಥದಲ್ಲಿ ಗಜವಾಹನೋತ್ಸವ, 23ರಂದು ಬೆಳ್ಳಿ ರಥದಲ್ಲಿ ವೃಷಭ ವಾಹನೋತ್ಸವ, 25ರಂದು ಮದಾಲ್ಸಿ, 27ರಂದು ಮಹಾಶಿವರಾತ್ರಿ ಪೂಜೆ, ಮಾರ್ಚ್ 1ರಂದು ಅಮಾವಾಸ್ಯೆ ಪೂಜಾ ಸಮಾರಂಭಗಳು ಜರುಗಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು. ದೇವಸ್ಥಾನದ ಮುಖ್ಯ ಬಾಗಿಲಿಗೆ ಬೆಳ್ಳಿಯ ಕವಚ ಅಳವಡಿಸಬೇಕಾಗಿರುವುದರಿಂದ ಭಕ್ತಾದಿಗಳು ಬೆಳ್ಳಿ ಅಥವಾ ನಗದು ರೂಪದಲ್ಲಿ ಹಣ ಪಾವತಿಸಿ ಸಹಕರಿಸಬೇಕು.  ದೇಣಿಗೆ, ಮುಡುಪು, ಬೆಳ್ಳಿ, ಬಂಗಾರ ಸಲ್ಲಿಸುವವರು ದೇವಸ್ಥಾನದ ಕಚೇರಿಯಲ್ಲಿ ಕೊಟ್ಟು ರಸೀದಿ ಪಡೆಯಬೇಕು.  ರಸೀದಿ ಪಡೆಯದಿದ್ದರೆ ಕಾಣಿಕೆಗಳು ಶ್ರೀ ಸ್ವಾಮಿಯ ಭಂಡಾರಕ್ಕೆ ಸೇರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ: ಕಚೇರಿ ಸ್ಥಳಾಂತರ
ಬಳ್ಳಾರಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪ. ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಕಚೇರಿಯನ್ನು ನಗರದ ಕಂಟೋನ್ಮೆಂಟ್ ಬಳಿಯಿರುವ ತಿಲಕನಗರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕ ಡಾ.ಟಿ. ಜಗನ್ನಾಥ ತಿಳಿಸಿದ್ದಾರೆ. ಈ ಕಚೇರಿಯು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇನ್ನು ಮುಂದೆ ಈ ಕಚೇರಿಗೆ ಸಂಬಂಧಿಸಿದ ಪತ್ರ ವ್ಯವಹಾರಗಳನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ನಂ. 07, ಕೆಎಚ್ಬಿ ಕಾಲೋನಿ, ವಾರ್ಡ್ 30, ತಿಲಕನಗರ, ಕಂಟೋನ್ಮೆಂಟ್, ಬಳ್ಳಾರಿ-583104 ಈ ವಿಳಾಸದಲ್ಲಿ ವ್ಯವಹರಿಸಬೇಕು. ಸಾರ್ವಜನಿಕರು ನಿಗಮದಿಂದ ದೊರೆಯಬಹುದಾದ ಸೌಲಭ್ಯ ಪಡೆಯಲು ಇನ್ನು ಮುಂದೆ ಹೊಸ ಕಟ್ಟಡದಲ್ಲಿರುವ ಕಚೇರಿ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ: 08392-245551ಸಂಪರ್ಕಿಸಿ.
ಮನೆ ಬೀಗ ಮುರಿದು ನಗ, ಚಿನ್ನ ಕಳವು
ಬಳ್ಳಾರಿ: ಮನೆ ಬಾಗಿಲು ಮುರಿದು ಚಿನ್ನ, ಬೆಳ್ಳಿ, ನಗದು ಹಣ ದೋಚಿದ ಘಟನೆ ಜಿಲ್ಲೆಯ ಕೊಟ್ಟೂರು ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಕೊಟ್ಟೂರು ಚನ್ನಮ್ಮ ಅವರ ಮನೆಯಲ್ಲಿ ಯಾರೂ ಇಲ್ಲದಾಗ ಬಾಗಿಲಿನ ಚಿಲಕ ಮುರಿದು ಬೀರುವಿನಲ್ಲಿದ್ದ 475 ಗ್ರಾಂ ಚಿನ್ನದ ಒಡವೆ, 350 ಗ್ರಾಂ ಬೆಳ್ಳಿ ಒಡವೆಗಳು, ರು. 5 ಸಾವಿರ ದೋಚಿ ಪರಾರಿಯಾಗಿದ್ದಾರೆ. ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವಿರಾರು ರು. ಮೌಲ್ಯದ ಮದ್ಯ ಜಪ್ತಿ
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ, ಬಂಧಿತರಿಂದ ಸಾವಿರಾರು ರು. ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತೋರಣಗಲ್ಲು ಗ್ರಾಮದ ನಾಗಾರ್ಜುನ ಹೋಟೆಲ್ ಮುಂಭಾಗ ಸೈಕಲ್ನಲ್ಲಿ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ತೋರಣಗಲ್ಲು ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ದಾಳಿ ಮಾಡಿ, ಆರೋಪಿ ಮಹೇಂದ್ರ ಹಾಗೂ ಇತರರನ್ನು ಬಂಧಿಸಿ ಅವರಿಂದ ರು. 9,672 ಮೌಲ್ಯದ ವಿವಿಧ ಕಂಪನಿಗಳ 4 ಬಾಕ್ಸ್ಗಳಲ್ಲಿಡಲಾಗಿದ್ದ ಒಟ್ಟು 240 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿದ್ದ ನಗದು, ಚಿನ್ನ ಕಳವು
ಬಳ್ಳಾರಿ: ನಗರದ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರ ಬೀಗ ಮುರಿದು ಚಿನ್ನ, ನಗದು ಹಣ ದೋಚಿರುವ ಘಟನೆ ಗುರುವಾರ ಮಧ್ಯಾಹ್ನ ಜರುಗಿದೆ. ಸಿ. ಕಮ್ಮಲಮ್ಮ ಎಂಬುವವರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಬೀರ್ವಾದಲ್ಲಿಡಲಾಗಿದ್ದ ಚಿನ್ನದ ಬೆಂಡೋಲೆಗಳು, ಚೈನ್, ಎರಡು ಬಂಗಾರದ ಉಂಗುರ ಹಾಗೂ ರು. 10 ಸಾವಿರ ನಗದು, ಒಂದು ಮೊಬೈಲ್ ಸೇರಿದಂತೆ ಒಟ್ಟು ರು. 95,500 ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಠಾಣೆಗೆ ದೂರು ನೀಡಿದ್ದಾರೆ. ಬಳ್ಳಾರಿ ಎಪಿಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ಅಡ್ಡೆ ಮೇಲೆ ದಾಳಿ
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ಪಟ್ಟಣದ ಸಿಂಧನೂರು ರಸ್ತೆಯ ಕುರಿ ಕಮೇಲ ಸಮೀಪ ಮಟ್ಕಾ ಜೂಜಾಟದ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿ, ನಗದು ಹಾಗೂ ಆರೋಪಿಯನ್ನು ಬಂಧಿಸಿರುವ ಘಟನೆ ಗುರುವಾರ ಜರುಗಿದೆ. ಖಚಿತ ಮಾಹಿತಿ ಮೇರೆಗೆ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ದಾಳಿ ಮಾಡಿ, ಕೆ. ವೀರೇಶ ಎಂಬುವವನ್ನು ಬಂಧಿಸಿದ್ದು, ಬಂಧಿತನಿಂದ ರು. 3,600 ನಗದು ಹಾಗೂ ಇತರೆ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯತಪ್ಪಿ ಬಿದ್ದು ಮಹಿಳೆ ಸಾವು
ಬಳ್ಳಾರಿ: ಬಟ್ಟೆ ಒಣ ಹಾಕಲು ಮನೆಯ ಮಾಳಗಿಯ ಮೇಲೆ ಹೋದ ಮಹಿಳೆಯೊಬ್ಬರು ಕಾಲುಜಾರಿ ಕೆಳಗಡೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಟಿ. ಬೂದಿಹಾಳ್ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿ ಮಂಜುಳಾ (22). ಶುಕ್ರವಾರ ಬೆಳಗ್ಗೆ ಟಿ. ಬೂದಿಹಾಳ್ ಗ್ರಾಮದಲ್ಲಿ ಮಂಜುಳಾ ಅವರು ಬಟ್ಟೆ ಒಣ ಹಾಕಲು ಮಾಳಿಗೆ ಮೇಲೆ ಹೋದಾಗ ಕಾಲು ಜಾರಿ ಬಿದ್ದು, ಗಾಯಗೊಂಡಿದ್ದು, ಕೂಡಲೇ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮಂಜುಳಾ ಅವರ ಗಂಡ ಸುರೇಶ್ 2 ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದನು. ಇವರಿಗೆ 2 ತಿಂಗಳ, 2 ವರ್ಷದ ಮಗು ಇವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement