ರೈತರಿಗೆ ಉಪಯುಕ್ತ ಕೃಷಿಮೇಳ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 21
ಜಾತ್ರೆಗಳು ಕೇವಲ ಮಸ್ತಿ, ಮೋಜುಗಳಿಗೆ ಸೀಮಿತವಾಗಬಾರದು. ಯಾರ ಹಂಗಿನಲ್ಲಿ ಇರದೇ ನಿಸ್ವಾರ್ಥ ಸೇವೆ ಸಲ್ಲಿಸಿ ದೇಶಕ್ಕೆ ಅನ್ನ ಅಳೆಯುವ ನೇಗಿಲ ಯೋಗಿಗಳಿಗೆ ಸದುಪಯೋಗವಾಗುವ ಕೃಷಿ ಚಟುವಟಿಕೆಗಳನ್ನು ಮಾಡಬೇಕೆಂಬ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಶ್ರೀ ಹಿರಿಶಾಂತವೀರ ಸ್ವಾಮೀಜಿ ಕೃಷಿಮೇಳ ಆಯೋಜಿಸಿದ್ದಾರೆ.
ಮಹಾಮಹಿಮ ಶ್ರೀ ಗವಿಸಿದ್ಧೇಶ್ವರರ 19ನೇ ರಥೋತ್ಸವ ಹಾಗೂ ಜಾತ್ರೆಯು ಫೆ. 11ರಿಂದ ಆರಂಭವಾಗಿದ್ದು, 22ರ ವರೆಗೆ ನಡೆಯಲಿರುವ ಜಾತ್ರೆಯಲ್ಲಿ ಪುರಾಣ, ಪ್ರವಚನ, ಕೃಷಿಮೇಳ, ಕೃಷಿ ವಿಚಾರ ಸಂಕಿರಣಗಳು, ಕುಂಭೋತ್ಸವ, ಸರ್ವಧರ್ಮ ಸಮ್ಮೇಳನ, ಶಿವದೀಕ್ಷೆ, ಅಯ್ಯಾಚಾರ, ಸಾಮೂಹಿಕ ವಿವಾಹಗಳು, ಭಕ್ತ ಹಿತ ಚಿಂತನ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ರೈತನ ಬದುಕಿಗೆ ನೆರವಾಗುವ ವಿವಿಧ ಇಲಾಖೆಗಳಲ್ಲಿನ ಸರ್ಕಾರದ ಹತ್ತಾರು ಯೋಜನೆಗಳ ಮಾಹಿತಿ, ಹೊಸ ತಳಿಗಳ ಆವಿಷ್ಕಾರ, ಎರೆಹುಳು ಗೊಬ್ಬರ ತಯಾರಿಕೆ, ಬೀಜೋಪಚಾರ, ಕೃಷಿ ವಿನೂತನ ತಂತ್ರಜ್ಞಾನ, ರಿಯಾಯ್ತಿ ದರದಲ್ಲಿ ಔಷಧ ಸಿಂಪರಣೆ ಯಂತ್ರ, ಬಿತ್ತನೆ ಬೀಜ, ಸಾವಯವ ಕೃಷಿ, ಸಮಗ್ರ ಕೃಷಿ ಪದ್ಧತಿ ಸೇರಿದಂತೆ ಎಲ್ಲ ರೀತಿ ಪ್ರಾತ್ಯಕ್ಷಿತೆಯನ್ನು ಆಯೋಜಿಸಲಾಗಿದೆ.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಆಯುರ್ವೇದ ಸಸ್ಯಗಳ ಪರಿಚಯ, ಆಯುರ್ವೇದ ಔಷಧಗಳ ಬಗ್ಗೆ ರೈತರು ಮಾಹಿತಿ ಪಡೆದರು.
ರಾಯಚೂರು ಕೃಷಿ ವಿವಿಯ ಅಭಿವೃದ್ಧಿ ಪಡಿಸಿರುವ ಬೆಳೆ ಸಂರಕ್ಷಣೆಗೆ ಇ- ಸ್ಯಾಪ್ (ಇ-ಸಲ್ಯೂಷನ್ಸ್ ಅಗೆನೆಸ್ಟ್ ಆಗ್ರಿಕಲ್ಚರ್ ಪೆಸ್ಟ್) ತಂತ್ರಜ್ಞಾನ ಕೃಷಿಮೇಳಕ್ಕೆ ಮೆರಗು ನೀಡಿತು. ಈ ವಿನೂತನ ತಂತ್ರಜ್ಞಾನವನ್ನು ರಾಯಚೂರು ಕೃಷಿ ವಿವಿಯ ಡಾ.ಎ. ಪ್ರಭುರಾಜ್ ಅಭಿವೃದ್ಧಿಪಡಿಸಿದ್ದಾರೆ. ಇ-ಸ್ಯಾಪ್ ತಂತ್ರಜ್ಞಾನ ಬೆಳೆಗಳಿಗೆ ಇರುವ ಕೀಟ ರೋಗ ಮತ್ತು ಪೋಷಕಾಂಶದ ಕೊರತೆಗೆ ಸಕಾಲದಲ್ಲಿ ಸಂರಕ್ಷಣೆ ಒದಗಿಸುವ ಒಂದು ನವೀನ ರೀತಿಯ ಮಾಹಿತಿ ತಂತ್ರಜ್ಞಾನ. ಜಾಗತಿಕ ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ಆವಿಷ್ಕಕರಿಸಲಾಗಿದ್ದು, ಇದರಲ್ಲಿ ರೈತರ ಮತ್ತು ಅವರ ಹೊಲದ ಸಂಪೂರ್ಣ ವಿವರಗಳನ್ನು ರವಾನಿಸುವ, ಕೂಡಿಡುವ ಹಾಗೂ ತಕ್ಷಣ ಫಲಿತಾಂಶವನ್ನು ತಜ್ಞರಿಗೆ ಹಾಗೂ ಕೃಷಿ ಅಧಿಕಾರಿಗಳಿಗೆ ಒದಗಿಸುವ ಒಂದು ವ್ಯವಸ್ಥೆ. ಅಲ್ಲದೆ ವಿವಿಯ ಯಾವುದೇ ತಂತ್ರಜ್ಞಾನವನ್ನು ಕ್ಷಣಾರ್ಧದಲ್ಲಿ ರೈತರಿಗೆ ಮುಟ್ಟಿಸುವ ಸಾಧನವಾಗಿದೆ ಎನ್ನುತ್ತಾರೆ ಡಾ.ಸಿ.ಎಂ. ಕಾಲಿಬಾವಿ.