ವಾಲಿಬಾಲ್: ಹೊಸಪೇಟೆ ತಂಡ ವಿಜಯಿ
ಬಳ್ಳಾರಿ: ಇಲ್ಲಿನ ಆರ್ವೈಎಂಇಸಿ ಕಾಲೇಜು ಮೈದಾನದಲ್ಲಿ ಫೆ. 18ರಿಂದ ನಡೆದ ಎರಡು ದಿನಗಳ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಗುಲ್ಬರ್ಗ ಅಂತರ್ ವಲಯದ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೊಸಪೇಟೆಯ ಪಿಡಿಐಟಿ ಕಾಲೇಜು ತಂಡ ಗೆಲವು ಸಾಧಿಸಿದೆ.
ವಿವಿಯ ಗುಲ್ಬರ್ಗ ವಲಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಒಟ್ಟು 13 ತಂಡಗಳ ಪೈಕಿ ಹೊಸಪೇಟೆಯ ಪಿಡಿಐಟಿ ತಂಡ ಮತ್ತು ಬೀದರ್ನ ಜಿಎನ್ಡಿಇಸಿ ತಂಡ ಫೈನಲ್ ಪಂದ್ಯದಲ್ಲಿ ಜಯಸಾಧಿಸಿತು.
ವಿವಿಯ ಸೆನೆಟ್ನ ಮಾಜಿ ಸದಸ್ಯ ವೆಂಕಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿದ ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಸಣ್ಣಬಸವರಾಜ್, ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜಿ, ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಮಾತನಾಡಿದರು. ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಎಚ್. ವಿಜಯಮಹಾಂತೇಶ್ ತಂಡಗಳ ಅತಿಥಿಗಳನ್ನು ಪರಿಚಯಿಸಿದರು. ಮೊದಲ ಪಂದ್ಯದಲ್ಲಿ ಬಳ್ಳಾರಿ ಆರ್ವೈಎಂಇಸಿ ಹಾಗೂ ಬಿಜಾಪುರ ಎಸ್ಇಸಿಎಬಿ ತಂಡಗಳು ಸೆಣಸಾಡಿದವು. ವೀವಿ ಸಂಘದ ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ, ಸಹ ಕಾರ್ಯದರ್ಶಿ ಜೆ.ಎಸ್. ನೇಪಾಕ್ಷಪ್ಪ, ಖಜಾಂಚಿ ಸಂಗನಕಲ್ ಹಿಮಂತ್ರಾಜ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿ. ಬಸವರಾಜ್, ಸದಸ್ಯ ಎಂ. ರಾಜೇಂದ್ರಕುಮಾರ್, ಅಲ್ಲಂ ವಿನಾಯಕ, ಪ್ರಾಚಾರ್ಯ ಡಾ.ಟಿ. ಹನುಮಂತರೆಡ್ಡಿ ಮುಂತಾದವರು ಇದ್ದರು.