ಬೆರಗು ಮೂಡಿಸುವ ಓಬಳೇಶ್ವರ ಬೆಂಕಿ ಜಾತ್ರೆ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಫೆ. 22
ಹಾವಿನ ಜತೆ ಸರಸ ಆಡುವವರನ್ನು, ಕಾಡು ಪ್ರಾಣಿಗಳ ಬಾಯಲ್ಲಿ ಕೈ ಇಡುವುದನ್ನು, ಭಕ್ತಿಯ ಹೆಸರಿನಲ್ಲಿ ಬೆಂಕಿಯ ಮೇಲೆ ನಡೆದು ಹೋಗುವುದನ್ನು ನೋಡಿದ್ದೇವೆ ಆದರೆ ಬರೀ ಮೈಯಲ್ಲಿ ಬೆಂಕಿಯ ರಾಶಿಗೆ ಜಿಗಿದು ಬರಿಗೈಯಲ್ಲಿ ಬೆಂಕಿಯ ಕೆಂಡಗಳನ್ನು ಹಿಡಿದುಕೊಂಡು ಸಹಸ್ರಾರು ಭಕ್ತರ ಮೇಲೆ ತೂರುವ ಬೆಂಕಿಯ ಜತೆ ಗಂಟೆಗಟ್ಟಲೆ ಸರಸ ಆಡುವುದನ್ನು ನೋಡಿದ್ದೀರಾ ಅಥವಾ ಕೇಳಿದ್ದೀರಾ?
ಇಂತಹ ಬೆರಗನ್ನು ನೋಡಬೇಕೆಂದರೆ ಫೆ. 23ರ ರಾತ್ರಿ 8 ಗಂಟೆಗೆ ಕೂಡ್ಲಿಗಿ ತಾಲೂಕು ಹುರುಳಿಹಾಳ್ ಗ್ರಾಮದಿಂದ 3 ಕಿ.ಮೀ. ದೂರದಲ್ಲಿರುವ ಹೊಸಹಟ್ಟಿ ಎಂಬ ಕುಗ್ರಾಮಕ್ಕೆ ಬನ್ನಿ. ಈ ದಿನ ರಾತ್ರಿ ನೀವು ಬೆಂಕಿಯ ಮಳೆ ಕಾಣಬಹುದು. ಬೆರಗುಗೊಳಿಸುವ ಭಕ್ತರ ಬೆಂಕಿ ಓಕುಳಿ ನೋಡುವುದೆ ಅಪರೂಪದ ಕ್ಷಣ. ಈ ಕ್ಷಣ ಕಣ್ತುಂಬಿಕೊಳ್ಳುವುದೆ ರೋಚಕ. ಈಗ ನೋಡಲು ಆಗದಿದ್ದರೆ ನೀವು ಮತ್ತೆ ಅದನ್ನು ನೋಡಲು 3 ವರ್ಷ ಕಾಯಲೇಬೇಕು.
ಏನಿದು ಬಗ್ಗಲು ಓಬಳೇಶ್ವರ ಬೆಂಕಿ ಪವಾಡ?: ಬಗ್ಗಲು ಎಂದರೆ ತೆಲುಗಿನಲ್ಲಿ ಬೆಂಕಿಯ ಕೆಂಡಗಳಿಂದಾಗುವ ಇದ್ಲಿ ಎಂದರ್ಥ. ಇಲ್ಲಿಯ ಪೂಜಾರಿ ಮನೆತನದ ಪೂರ್ವಜರು ಕಾಡಿನಲ್ಲಿ ಕಟ್ಟಿಗೆ ಕಡಿದು ಅವುಗಳನ್ನು ಮಾರಿ ಜೀವನ ಮಾಡುತ್ತಿದ್ದರು. ಒಂದು ದಿನ ಬೆಳಗ್ಗೆ ಇದ್ದಿಲು ತರಲು ಪೂರ್ವಜರು ಕಾಡಿಗೆ ಹೋದಾಗ ಇದ್ದಿಲು ರಾಶಿಯಲ್ಲಿ ಬೆಂಕಿ ಹತ್ತಿಕೊಂಡು ಉರಿಯತೊಡಗಿತು. ಹಾಗಾಗಿ ನಮ್ಮ ದೇವರು ಇದ್ದಿಲಿನಲ್ಲಿಯೇ ಪ್ರತ್ಯಕ್ಷವಾಗಿದ್ದಾನೆ ಎಂದು ಇಲ್ಲಿಯ ಬೇಡ ಬುಡಕಟ್ಟಿನ ಜನತೆ ನಂಬಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಇವರ ವಂಶಸ್ಥರು ಇದ್ದಿಲನ್ನೇ, ಬೆಂಕಿಯ ಕೆಂಡವನ್ನೆ ದೇವರೆಂದು ಭಾವಿಸಿ ಈ ಆಚರಣೆ ಮುಂದುವರಿಸಿಕೊಂಡು ಬಂದಿದ್ದಾರೆ. ಇಲ್ಲಿ ಸೇರುವ ಸಹಸ್ರಾರು ಭಕ್ತರು ಸಹ ಬೆಂಕಿ ಕೆಂಡಗಳಿಗೆ ಭಯಪಡದೆ ಮೈಮೇಲೆ ಕೆಂಡ ಬಿದ್ದರೂ ದೂರ ಸರಿಯುವುದಿಲ್ಲ. ಈ ಆಚರಣೆಯಲ್ಲಿ ಇದೂವರೆಗೂ ಯಾರಿಗೂ ಸುಟ್ಟ ಅನುಭವ ಆಗಿಲ್ಲ. ಸೀರೆ, ಅಂಗಿ ಯಾವುದೆ ಬಟ್ಟೆ ಕೂಡ ಸುಟ್ಟಿಲ್ಲ. ಇದು ನಮ್ಮ ಬಗ್ಗಲು ಓಬಳೇಶ್ವರ ದೇವರ ಪವಾಡ ಎನ್ನುತ್ತಾರೆ ಗ್ರಾಮದ ಹಿರಿಯರಾದ ಸಾಹುಕಾರ್ ಓಬಯ್ಯ.
ಓಬಶೇಳ್ವರ ಜಾತ್ರೆ: ಬೇಡ ಸಂಸ್ಕೃತಿ ಅನಾವರಣಗೊಳಿಸುವ ಬಗ್ಗಲು ಓಬಳೇಶ್ವರ ಜಾತ್ರೆ ಪ್ರತಿ 3 ವರ್ಷಕ್ಕೊಮ್ಮೆ ಭರತಹುಣ್ಣಿಮೆಯ ನಂತರ ಶಿವರಾತ್ರಿ ಅಮಾವಾಸ್ಯೆಗೂ ಮುನ್ನ ನಡೆಯುತ್ತದೆ. ಈ ಜಾತ್ರೆಗೆ ಗುಗ್ಗರಿ ಹಬ್ಬವೆಂತಲೂ ಸ್ಥಳೀಯರು ಕರೆಯುತ್ತಾರೆ. ಶುಕ್ರವಾರ, ಶನಿವಾರ 2 ದಿನಗಳ ಕಾಲ ಕಾಸುಮೀಸಲು, ಗಂಗಾಪೂಜೆ, ಸುತ್ತಮುತ್ತಲ ಏಳೆಂಟು ಹಳ್ಳಿಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತವೆ. ಉತ್ಸವದ ಕೊನೆ ದಿನವಾದ ಭಾನುವಾರ ರಾತ್ರಿ 7 ಗಂಟೆ ನಂತರ ಇಲ್ಲಿಯ ಭಕ್ತರಿಂದ ಬೆಂಕಿಯ ಜತೆ ಭಕ್ತರ ಸರಸ ಬೆರಗುಗೊಳಿಸುತ್ತದೆ. ಕಾಲಿನಲ್ಲಿ ತುಳಿಯದೆ ಕಟ್ಟಿಗೆ ತುಂಡು ಮಾಡಿ ಸಂಜೆ ಬೆಂಕಿ ಹಾಕುತ್ತಾರೆ. ರಾತ್ರಿ 8 ಗಂಟೆಗೆ ಕೆಂಡದ ರಾಶಿಯಾಗುತ್ತದೆ. ಆಗ ಡೊಳ್ಳಿನ ವಾದ್ಯದ ಧ್ವನಿ ಕೇಳುತ್ತಲೆ ಭಕ್ತರು ಕೆಂಡದ ರಾಶಿಗೆ ಜಿಗಿಯುತ್ತಾರೆ. ಹತ್ತಾರು ಭಕ್ತರು ಕೈಯಲ್ಲಿ ಕೆಂಡಗಳನ್ನು ಹಿಡಿದು ಜನತೆಯತ್ತ ತೂರುವ ದೃಶ್ಯ ರೋಚಕವಾದದ್ದು. ಆ ಸಮಯಕ್ಕೆ ಗ್ರಾಮದಲ್ಲಿ ಕತ್ತಲು ಇರುವಂತೆ ನೋಡಿಕೊಳ್ಳಲಾಗುತ್ತದೆ. ಹೀಗಾಗಿ ಭಕ್ತರು ತೂರುವ ಕೆಂಡಗಳು ಬೆಂಕಿಯ ಮಳೆಯ ಅನುಭವ ನೀಡುತ್ತವೆ.
ಬೇಡ ಬುಡಕಟ್ಟಿನ ಜನತೆ ಮಾತ್ರ ಇಲ್ಲಿ ವಾಸಿಸುತ್ತೇವೆ. ನಮ್ಮೂರಲ್ಲಿ ಮೂರು ವರ್ಷಕ್ಕೊಮ್ಮೆ ಬಗ್ಗಲು ಓಬಳೇಶ್ವರ ಸ್ವಾಮಿ ಗುಗ್ಗರಿ ಹಬ್ಬ ಮಾಡುತ್ತೇವೆ. ಈ ಆಚರಣೆ ಮೂಲಕ ತಮ್ಮ ಪೂರ್ವಜರನ್ನು ನೆನೆಯುತ್ತವೆ. ಅಲ್ಲದೆ ನಮ್ಮ ಪೂರ್ವಜರ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬರುವ ಆಚರಣೆ ಇದಾಗಿದೆ ಎನ್ನುತ್ತಾರೆ ಗ್ರಾಮದ ಪಾಲಣ್ಣ.
8 ದಿನಗಳ ಅವಧಿಯಲ್ಲಿ ಗ್ರಾಮದ ಎಲ್ಲ ಜನ ವ್ರತಾಚರಿಸುತ್ತಾರೆ. ಯಾರೂ ಮದ್ಯ ಸೇವಿಸುವಂತಿಲ್ಲ, ಕಾಲಲ್ಲಿ ಚಪ್ಪಲಿ ಹಾಕುವಂತಿಲ್ಲ, ಮುಟ್ಟಾದ ಮಹಿಳೆಯರು ಊರ ಹೊರಗಿನ ಕಣಗಳಲ್ಲಿ ವಾಸಿಸಬೇಕು. ಊರಲ್ಲಿ ಚರ್ಮದ ಯಾವುದೆ ವಸ್ತು ತರುವಂತಿಲ್ಲ. ಗಂಡ, ಹೆಂಡತಿ ಒಂದೇ ಹಾಸಿಗೆಯಲ್ಲಿ ಮಲಗುವಂತಿಲ್ಲ. ಹೀಗೆ ಹಲವು ಕಟ್ಟುನಿಟ್ಟಿನ ಆಚರಣೆಗಳನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗಿದೆ. ಒಂದು ವೇಳೆ ವ್ರತ ಕೆಟ್ಟರೆ ಕೇಡಾಗುತ್ತದೆ. ಹೀಗಾಗಿ ನಿಯಮದಂತೆ ಉತ್ಸವ ಆಚರಿಸುತ್ತೇವೆ.
- ಚಿನ್ನಪಲ್ಲಿ ಓಬಯ್ಯ, ಗ್ರಾಮದ ಹಿರಿಯ
-ಭೀಮಣ್ಣ ಗಜಾಪುರ