ಆಕಸ್ಮಿಕ ಬೆಂಕಿ: ರು. 13.35 ಲಕ್ಷ ನಷ್ಟ
ಹಗರಿಬೊಮ್ಮನಹಳ್ಳಿ: ಬೆಂಕಿ ಆಕಸ್ಮಿಕದಿಂದಾಗಿ ಸುಮಾರು 650 ಕ್ವಿಂಟಲ್ ಮೆಕ್ಕೆಜೋಳ, ತಲಾ ಎರಡು ಕ್ವಿಂಟಲ್ ತೊಗರಿ, ಕರಿಕಡಲೆ, 35 ಲೋಡ್ನಷ್ಟು ಮೇವು, ಐದು ಲೋಡ್ ಶೇಂಗಾ ಹೊಟ್ಟು, ಒಂದು ಟೈರ್ ಬಂಡಿ ಹಾಗೂ ಕುಂಟಿ, ಮಡಿಕೆ ಸುಟ್ಟು ಭಸ್ಮವಾಗಿ, ಸುಮಾರು ರು. 13.35 ಲಕ್ಷದಷ್ಟು ಹಾನಿ ಸಂಭವಿಸಿರುವ ಘಟನೆ ತಾಲೂಕಿನ ಸಂಗಮೇಶ್ವರದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಬೆಂಕಿ ಆಕಸ್ಮಿಕದಲ್ಲಿ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ, ಆನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪ್ರಭಾರಿ ಸಹಾಯಕ ಕೃಷಿ ಅಧಿಕಾರಿ, ಕಂದಾಯ ನೀರಿಕ್ಷಕರು ಭೇಟಿ ನೀಡಿ ಹಾನಿಯ ಅಂದಾಜು ಪರಿಶೀಲಿಸಿದರು.
ಬೆಂಕಿ ಅನಾಹುತದಲ್ಲಿ ಗ್ರಾಮದ ಚಿಗಟೇರಿ ಕರಿಬಸಮ್ಮ ಕುಟುಂಬಕ್ಕೆ ಹೆಚ್ಚು ನಷ್ಟವಾಗಿದೆ. ಈ ಕುಟುಂಬಕ್ಕೆ ಸೇರಿದ ಮಾರಾಟಕ್ಕಾಗಿ ಸಿದ್ಧಪಡಿಸಿದ್ದ ಒಂದು ಸಾವಿರ ಮೆಕ್ಕೆಜೋಳದ ಚೀಲಗಳು ಹಾಗೂ 15 ಲೋಡ್ನಷ್ಟು ಮೆಕ್ಕೆಜೋಳದ ಮೇವು, ಶೇಂಗಾ ಹೊಟ್ಟು ಬೆಂಕಿಗಾಹುತಿಯಾಗಿದೆ. ಕೊಟ್ಟೂರೇಶ್ವರ ರಥೋತ್ಸವದ ನಂತರ ಮೆಕ್ಕೆಜೋಳ ಮಾರಾಟ ಮಾಡಲು ಕಣದಲ್ಲಿ ಇಟ್ಟಿದ್ದೆವು. ಆದರೆ ಇವತ್ತು ಎಲ್ಲವೂ ಬೆಂಕಿಗಾಹುತಿಯಾಯಿತು ಎಂದು ಕುಟುಂಬದ ಸದಸ್ಯ ಜಗದೀಶ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳಿಗೆ ವಿವರಿಸಿ ಸುಮಾರು ರು. 10 ಲಕ್ಷ ಹಾನಿ ಸಂಭವಿಸಿದೆ ಎಂದರು.
ಇತ್ತ ಚಿಗಟೇರಿ ಕಾಳಮ್ಮ ಎಂಬವರಿಗೆ ಸೇರಿದ 15 ಲೋಡ್ ಮೆಕ್ಕೆಜೋಳದ ಮೇವು, ಹತ್ತು ಚೀಲ ಊಟದ ಜೋಳ, ತೋಗರಿ, ಕರಿಕಡಲೆ ಹಾಗೂ ಶೇಂಗಾ ಹೊಟ್ಟು ಸುಟ್ಟಿದ್ದರೆ, ಮರಿಬಸಪ್ಪಗೆ ಸೇರಿದ ನಾಲ್ಕು ಲೋಡ್ ಮೇವು ಸುಟ್ಟಿದೆ. ಒಟ್ಟಾರೆ ಭಾನುವಾರದ ಬೆಂಕಿಗೆ ಸಂಗಮೇಶ್ವರದಲ್ಲಿ ಸುಮಾರು ರು. 13.35 ಲಕ್ಷ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಎಂದಿಗಿಂತಲೂ ಇವತ್ತು ನೆತ್ತಿ ಸುಡುವಷ್ಟು ಬಿಸಿಲಿತ್ತು. ಮಧ್ಯಾಹ್ನ ಏಕಾಏಕಿ ಕಾಣಿಸಿಕೊಂಡ ಬೆಂಕಿ ನಿಯಂತ್ರಣಕ್ಕೆ ಬಾರದೆ ಹೋಗಿದ್ದರಿಂದ ಕ್ಷಣಾರ್ಧದಲ್ಲಿ ಕಣದಲ್ಲಿದ್ದ ಮೆಕ್ಕೆಜೋಳ, ಮೇವಿನ ಬಣವೆಗಳು ಅಗ್ನಿಗಾಹುತಿಯಾದವು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬರವಷ್ಟರಲ್ಲಿ ಎಲ್ಲ ಸುಟ್ಟು ಭಸ್ಮವಾಗಿತ್ತು. ಅನಂತರ ಮಧ್ಯಾಹ್ನ ಮೂರೂವರೆ ಗಂಟೆ ತನಕವೂ ಅಗ್ನಿಶಾಮಕ ದಳದವರು ಬೆಂಕಿ ನಿಯಂತ್ರಿಸಲು ಹರಸಾಹಸಪಟ್ಟರು. ಪ್ರಭಾರಿ ಎಡಿಎ ನಾಗರಾಜ, ಕಂದಾಯ ನಿರೀಕ್ಷಕ ನಾಗಪ್ಪ ಸೇರಿದಂತೆ ಹಲವರು ಭೇಟಿ ನೀಡಿ ಮಹಜರು ನಡೆಸಿ ಹಾನಿಯ ಆಂದಾಜು ಪಟ್ಟಿ ಸಿದ್ಧಪಡಿಸಿದರು.