ಕಕ್ಷಿದಾರನಿಗೆ ಪರಿಪೂರ್ಣ ಸೇವೆ ಸಿಗಲಿ: ನ್ಯಾ. ಹಿಂಚಿಗೇರಿ
ಬಳ್ಳಾರಿ: ಅನಿವಾರ್ಯ ಪರಿಸ್ಥಿತಿಯಲ್ಲಿ ಕೋರ್ಟ್ ಮೊರೆ ಹೋಗುವ ಕಕ್ಷಿದಾರರು, ನ್ಯಾಯಾಂಗದ ಪರಿಭಾಷೆಯಲ್ಲಿ ಗ್ರಾಹಕರಾಗಿದ್ದು, ಅವರಿಗೆ ನ್ಯಾಯಾಲಯಗಳು ಸಂಪೂರ್ಣ, ಪರಿಪೂರ್ಣ ಸೇವೆಗಳನ್ನು ನೀಡಬೇಕಿದೆ. ಅವರ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಕೀಲರು ಮತ್ತು ಕೋರ್ಟ್ಗಳು ಶ್ರಮಿಸಬೇಕಿದೆ ಎಂದು ಹೈಕೋರ್ಟ್ ನ್ಯಾಯಾಧೀಶ ಹಾಗೂ ಬಳ್ಳಾರಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಅಶೋಕ್ ಬಿ. ಹಿಂಚಿಗೇರಿ ತಿಳಿಸಿದರು.
ನಗರದಲ್ಲಿ ಶನಿವಾರ ಬೆಳಗ್ಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆ ಇರುವುದರಿಂದ ಅಪಾರ ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿರುವ ಹಿನ್ನೆಲೆಯಲ್ಲಿ ನ್ಯಾಯವಾದಿಗಳು ಮತ್ತು ಕಕ್ಷಿದಾರರು ಲೋಕ ಅದಾಲತ್, ರಾಜಿ ಸಂಧಾನದ ಮೂಲಕ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಮುಂದಾಗಬೇಕು ಎಂದರು.
ನ್ಯಾಯವಾದಿ ಎಂದರೆ ಸಮಾಜದ ಶಾಂತಿಗಾಗಿ ಹೋರಾಡುವ ಶಾಂತಿಪರ ಯೋಧನಂತಿದ್ದು, ಸಮಾಜದ ಸ್ವಾಸ್ಥ್ಯಕ್ಕಾಗಿ ವಕೀಲರು ಶ್ರಮಿಸಬೇಕಿದೆ. ಬರುವ ಫೆ. 26, 28 ಮತ್ತು ಮಾ. 1ರಂದು ದೇಶಾದ್ಯಂತ ಜರುಗಲಿರುವ ಬೃಹತ್ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದರು.
ಜಿಲ್ಲಾ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್, ಸಿಜೆಎಂ ನ್ಯಾಯಾಧೀಶೆ ಎಂ.ಎಚ್. ಶಾಂತಾ, ವಕೀಲರ ಸಂಘದ ಅಧ್ಯಕ್ಷ ಪಾಟೀಲ್ ಸಿದ್ಧಾರೆಡ್ಡಿ, ಕಾರ್ಯದರ್ಶಿ ರಾಮಕೃಷ್ಣ, ಪದಾಧಿಕಾರಿ ಶೇಖರ್, ಅನ್ಸರ್ ಬಾಷಾ ಇದ್ದರು.