ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೊಟ್ಟೂರಿನತ್ತ ಭಕ್ತರ ದಂಡು

Vishwanath S
Updated On : 24 Feb 2014, 11:11 am

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಫೆ. 23
ಮಧ್ಯ ಕರ್ನಾಟಕದ ದೊಡ್ಡ ರಥೋತ್ಸವ ಎಂದೇ ಕರೆಯುವ ಕೊಟ್ಟೂರಿನ ಆರಾದ್ಯದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಮತ್ತು ಜಾತ್ರಾ ಮಹೋತ್ಸವಕ್ಕೆ ಭಕ್ತರ ಮಹಾಪೂರವೆ ಶನಿವಾರದಿಂದ ಕೊಟ್ಟೂರಿನತ್ತ ಹರಿದು ಬರತೊಡಗಿದೆ.
ಭವ್ಯ ರಥೋತ್ಸವ ನಡೆಯಲು ಎಲ್ಲ ಬಗೆಯ ಸಿದ್ಧತಾ ಕಾರ್ಯ ಪೂರ್ಣಗೊಂಡಿದ್ದು, ಶಾಸಕ ಎಸ್. ಭೀಮಾನಾಯ್ಕ, ಪಟ್ಟಣ ಪಂಚಾಯಿತಿ ಸದಸ್ಯರೊಂದಿಗೊ ಭಾನುವಾರ ಮಧ್ಯಾಹ್ನ ಕಾರ್ಯ ಪರಿಶೀಲಿಸಿ ರಥ ಸಾಗುವ ವೇಳೆ ಯಾವುದೇ ತೊಂದರೆಯಾಗದಂತೆ ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
50ಕ್ಕೂ ಸಾವಿರಕ್ಕೂ ಅಧಿಕ ಪಾದಯಾತ್ರಿಗಳು ದಾವಣಗೆರೆಯಿಂದ ನಿರಂತರ ಬರತೊಡಗಿರುವುದು ವಿಶೇಷ. ಹರಿಹರ, ಶಿವಮೊಗ್ಗ, ಚನ್ನಗಿರಿ, ಗದಗ, ಹುಬ್ಬಳ್ಳಿ, ರಾಣಿಬೆನ್ನೂರು, ಚಿತ್ರದುರ್ಗ, ಹೊಸಪೇಟೆ ಮತ್ತಿತರೆಡೆಯಿಂದ ಪಾದಯಾತ್ರಿಕರ ಸಂಖ್ಯೆ ಹೆಚ್ಚಾಗತೊಡಗಿದೆ. ಪಾದಯಾತ್ರೆ ಮತ್ತು ರಥ ವೀಕ್ಷಣೆಗೆ ಬರುವವರನ್ನು ಸ್ಥಳೀಯರು ಅದರಲ್ಲೂ ವಿವಿಧ ಬಗೆಯ ಸಂಘ ಸಂಸ್ಥೆಗಳವರು ಆತ್ಮೀಯವಾಗಿ ಬರಮಾಡಿಕೊಂಡು ವಿವಿಧ ಬಗೆಯ ಸೇವೆಗಳನ್ನು ಕೈಗೊಂಡಿದ್ದಾರೆ. ಈ ಸೇವೆ ಪಟ್ಟಣದಿಂದ ಚಪ್ಪರದಹಳ್ಳಿ, ಕೆ. ಅಯ್ಯನಹಳ್ಳಿವರೆಗೂ ನಿರಂತರ ನಡೆಯುತ್ತಿರುವುದು ಸಾಮಾನ್ಯವಾಗಿದೆ.
ಪಾದಯಾತ್ರಿಗಳ ಸೇವೆ: ಪಾದಯಾತ್ರಿಕರಿಗೆ ಶುಶ್ರೂಷೆ, ಆಸರೆ, ಹಣ್ಣು ವಿತರಣೆ, ಎಳನೀರು ನೀಡಿ ಅವರಿಗೆ ದಣಿವಾರಿಸಿಕೊಳ್ಳಲು ಪಟ್ಟಣದ ಸೇವಾರ್ಥಿಗಳು ಕ್ರಮ ಕೈಗೊಂಡಿದ್ದಾರೆ. ನಡೆದು ದಣಿದು ಬಂದವರಿಗೆ ಇಲ್ಲಿನ ವರ್ತಕ ಗಣೇಶಪ್ಪ, ಸ್ನೇಹಿತ ಬಳಗದವರು ಔಷಧಿ ನೀಡಿ ಕಾಲು ನೋವು ನಿವಾರಿಸುವ ಯತ್ನ ನಡೆಸಿದ್ದಾರೆ. ಪಾದಯಾತ್ರಿಗಳ ಹಾರೈಕೆಯಲ್ಲಿ ಗಣೇಶಪ್ಪ ಅವರೊಂದಿಗೆ ಪಿ. ಸುಧಾಕರ ಪಾಟೀಲ್, ಜನಾರ್ದನ ಶೆಟ್ಟಿ, ಕೆ.ಪಿ. ಭದ್ರಶೆಟ್ಟಿ, ಸಿದ್ರಾಮಪ್ಪ, ಎಚ್.ಎನ್. ಕೋಟಿ ಮತ್ತಿತರರು ತೊಡಗಿಸಿಕೊಂಡಿದ್ದರೆ ಪಾದಯಾತ್ರಿಗಳಿಗೆ ಷರಬತ್ತು, ಎಳನೀರು, ಹಾಲು, ಕಲ್ಲಂಗಡಿ ಹಣ್ಣು ವಿತರಿಸಲಾಗುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವಿವಿಧ ಸೊಸೈಟಿಗಳವರು ಮಂಡ್ಯದಿಂದ 12 ಸಾವಿರಕ್ಕೂ ಅಧಿಕ ಎಳನೀರನ್ನು ಪಾದಯಾತ್ರಿಗಳಿಗೆಂದೆ ತರಿಸಿ ವಿತರಿಸಿ ಬಾಯಾರಿಕೆ ನೀಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಾಹನ ಚಾಲಕರು ಮತ್ತು ಮಾಲೀಕರು, ಔಷಧಿ ಮಾರಾಟಗಾರರ ಸಂಘ ಮತ್ತು ಇತರ ಸಂಘ ಸಂಸ್ಥೆಗಳು ಹರಪ್ಪನಹಳ್ಳಿ, ಉಜ್ಜಿನಿ, ಇಟ್ಟಿಗಿ, ಹಗರಿಬೊಮ್ಮನಹಳ್ಳಿ ರಸ್ತೆಯುದ್ದಕ್ಕೂ ಶಾಮಿಯಾನ ಹಾಕಿ ಪಾದಯಾತ್ರಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವಾಹನಗಳ ಮಾರ್ಗ ಬದಲಾವಣೆ: ರಥೋತ್ಸವ ನಡೆಯುವ ಫೆ. 24ರ ಮಧ್ಯಾಹ್ನದಿಂದ ಪಟ್ಟಣದೊಳಗೆ ಬೃಹತ್ ವಾಹನಗಳು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಹೊರವಲಯದಲ್ಲಿ ಇದಕ್ಕೆಂದೆ ಪರ್ಯಾಯ ಮಾರ್ಗಗಳನ್ನು ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್ಗೆ ಕೂಡ್ಲಿಗಿ, ಹರಪ್ಪನಹಳ್ಳಿ, ಉಜ್ಜಿನಿ, ಇಟ್ಟಿಗಿ ರಸ್ತೆ ಬಳಿ ತಾಣಗಳನ್ನು ಗುರುತಿಸಲಾಗಿದೆ. ಇದಲ್ಲದೆ ಸ್ಥಳೀಯ ಪೊಲೀಸರು ಪಟ್ಟಣದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement